Advertisement

ಜೂಲನ್‌ ಗೋಸ್ವಾಮಿಗೆ ವಿದಾಯ ಸರಣಿ; ಇಂದಿನಿಂದ ಭಾರತ-ಇಂಗ್ಲೆಂಡ್‌ ಏಕದಿನ ಮುಖಾಮುಖಿ

11:15 PM Sep 17, 2022 | Team Udayavani |

ಹೋವ್‌: ಆತಿಥೇಯ ಇಂಗ್ಲೆಂಡ್‌ ಎದುರಿನ ಟಿ20 ಸರಣಿಯಲ್ಲಿ ಮೇಲುಗೈ ಅವಕಾಶವನ್ನು ಕಳೆದುಕೊಂಡ ಭಾರತವೀಗ ಏಕದಿನ ಸರಣಿಯಲ್ಲಿ ಅಗ್ನಿಪರೀಕ್ಷೆಗೆ ಒಳಗಾಗಲಿದೆ. 3 ಪಂದ್ಯಗಳ ಸರಣಿಯ ಮೊದಲ ಮುಖಾಮುಖಿ ರವಿವಾರ ಹೋವ್‌ನಲ್ಲಿ ನಡೆಯಲಿದೆ.

Advertisement

ಇದು ಭಾರತದ ಅತ್ಯಂತ ಹಿರಿಯ ಕ್ರಿಕೆಟರ್‌, ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ಪಾಲಿನ ವಿದಾಯ ಸರಣಿಯೆಂಬುದು ವಿಶೇಷ. ಜಾಗತಿಕ ಮಟ್ಟದಲ್ಲಿ ಅನೇಕ ಬೌಲಿಂಗ್‌ ಸಾಧನೆಗೈದ ಜೂಲನ್‌ಗೆ ಸ್ಮರಣೀಯ ವಿದಾಯ ನೀಡಲು ಹರ್ಮನ್‌ಪ್ರೀತ್‌ ಕೌರ್‌ ಪಡೆಗೆ ಸಾಧ್ಯವೇ ಎಂಬುದೊಂದು ಪ್ರಶ್ನೆ.

ಆತಿಥೇಯ ಇಂಗ್ಲೆಂಡ್‌ ಮೂವರು ಸೀನಿಯರ್‌ ಆಟಗಾರ್ತಿಯರ ಸೇವೆಯಿಂದ ವಂಚಿತವಾಗಿದೆ. ನಾಯಕಿ ಹೀತರ್‌ ನೈಟ್‌ ಕೂಡ ಇವರಲ್ಲೊಬ್ಬರು. ಕೌರ್‌ ಬಳಗ ಇದರ ಲಾಭವೆತ್ತಬೇಕಾದುದು ಮುಖ್ಯ.

ಅಸ್ಥಿರ ನಿರ್ವಹಣೆ
ಭಾರತದ ಟಿ20 ಸರಣಿ ಸೋಲಿಗೆ ಬ್ಯಾಟಿಂಗ್‌, ಫೀಲ್ಡಿಂಗ್‌ ವೈಫ‌ಲ್ಯದ ಜತೆಗೆ ಅಸ್ಥಿರ ನಿರ್ವಹಣೆಯೂ ಮುಖ್ಯ ಕಾರಣ. ಒಂದು ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡುವ ಭಾರತ, ಮರು ಪಂದ್ಯದಲ್ಲೇ ಅತ್ಯಂತ ಕಳಪೆ ಆಟವಾಡುತ್ತದೆ. ಮುಖ್ಯವಾಗಿ ಸರಣಿ ನಿರ್ಣಾಯಕ ಪಂದ್ಯದಲ್ಲಿ ಮುಗ್ಗರಿಸುವುದು ಹವ್ಯಾಸವೇ ಆಗಿದೆ. ಮೊನ್ನೆಯ ಟಿ20 ಸರಣಿ ಕೂಡ ಇದಕ್ಕೆ ಹೊರತಲ್ಲ.

ಭಾರತದ ಮುಖ್ಯ ಸಮಸ್ಯೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನದ್ದು. 3 ಟಿ20 ಪಂದ್ಯಗಳನ್ನಾಡಿದರೂ ಈ ಸಮಸ್ಯೆ ಬಗೆಹರಿದಿಲ್ಲ. ಡಿ. ಹೇಮಲತಾ ಇಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಜೆಮಿಮಾ ರೋಡ್ರಿಗಸ್‌ ಆಯ್ಕೆ ಆಗಿದ್ದರೂ ಇವರ ಫಿಟ್‌ನೆಸ್‌ ಬಗ್ಗೆ ಪ್ರಶ್ನೆಗಳು ಉಳಿದುಕೊಂಡಿವೆ. ಈ ಕಾರಣಕ್ಕಾಗಿಯೇ ಅವರು “ದಿ ಹಂಡ್ರೆಡ್‌’ ಸರಣಿಯಿಂದ ಹೊರಗೆ ಬಂದಿದ್ದರು.

Advertisement

ಸ್ಮತಿ ಮಂಧನಾ, ಹರ್ಮನ್‌ಪ್ರೀತ್‌ ಕೌರ್‌ ಮೇಲೆ ವಿಪರೀತ ಬ್ಯಾಟಿಂಗ್‌ ಒತ್ತಡವಿದೆ. ಓಪನರ್‌ ಶಫಾಲಿ ವರ್ಮ ಸಿಡಿದು ನಿಂತರೆ ಬಹುತೇಕ ಸಮಸ್ಯೆ ಪರಿಹಾರಗೊಳ್ಳಲಿದೆ. ಟಿ20 ತಂಡದಿಂದ ಬೇರ್ಪಟ್ಟಿದ್ದ ಯಾಸ್ತಿಕಾ ಭಾಟಿಯಾ ಕೆಳ ಹಂತದಲ್ಲಿ ತಂಡದ ನೆರವಿಗೆ ನಿಲ್ಲಬೇಕಾದುದು ಅಗತ್ಯ.

ಎರಡು ದಶಕಗಳ ಕ್ರಿಕೆಟ್‌
2002ರ ಜನವರಿ ಆರರಂದು ಇಂಗ್ಲೆಂಡ್‌ ವಿರುದ್ಧ ಚೆನ್ನೈಯಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ ಜೂಲನ್‌ ಗೋಸ್ವಾಮಿ ಈಗ ಇಂಗ್ಲೆಂಡ್‌ ವಿರುದ್ಧವೇ ವಿದಾಯ ಪಂದ್ಯ ಆಡುತ್ತಿದ್ದಾರೆ. ಸೆ. 24ರಂದು ಐತಿಹಾಸಿಕ ಲಾರ್ಡ್ಸ್‌ನಲ್ಲಿ ಈ ಮುಖಾಮುಖಿ ನಡೆಯಲಿದೆ. ದ್ವಿತೀಯ ಪಂದ್ಯದ ತಾಣ ಕ್ಯಾಂಟರ್‌ಬರಿ (ಸೆ. 21).

ಈ ಎರಡು ದಶಕಗಳಲ್ಲಿ ಜೂಲನ್‌ ದಾಖಲೆ ಸಂಖ್ಯೆಯ 201 ಏಕದಿನ ಪಂದ್ಯಗಳನ್ನಾಡಿದ್ದು, 252 ವಿಕೆಟ್‌ ಉರುಳಿಸಿದ್ದಾರೆ. ಆದರೆ ಇವರ ಮುಂದಾಳತ್ವದ ವೇಗದ ವಿಭಾಗ ಅಷ್ಟೇನೂ ಘಾತಕವಾಗಿಲ್ಲ. ಇಂಗ್ಲೆಂಡ್‌ ಟ್ರ್ಯಾಕ್‌ಗಳಲ್ಲಿ ವೇಗಿಗಳೇ ಟ್ರಂಪ್‌ಕಾರ್ಡ್‌ ಆಗಿರುತ್ತಾರೆ. ರೇಣುಕಾ ಸಿಂಗ್‌ ಓಕೆ. ಪೂಜಾ ವಸ್ತ್ರಾಕರ್‌, ಸ್ನೇಹ್‌ ರಾಣಾ, ದೀಪ್ತಿ ಶರ್ಮ ಆಲ್‌ರೌಂಡರ್‌ಗಳಾದ್ದರಿಂದ ಮೂವರನ್ನೂ ಒಂದೇ ಪಂದ್ಯದಲ್ಲಿ ಆಡಿಸುವುದು ಅನುಮಾನ. ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಮೇಲೆ ಹೆಚ್ಚಿನ ಭರವಸೆ ಇಡಲಾಗಿದೆ.

ಇದು ಐಸಿಸಿ ಏಕದಿನ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಬರಲಿದ್ದು, 2025ರ ವಿಶ್ವಕಪ್‌ ಪಂದ್ಯಾವಳಿಯ ಅರ್ಹತಾ ಸರಣಿಯೂ ಆಗಿದೆ.

ಆ್ಯಮಿ ಜೋನ್ಸ್‌ ನಾಯಕಿ
ಆ್ಯಮಿ ಜೋನ್ಸ್‌ ಇಂಗ್ಲೆಂಡ್‌ ತಂಡದ ನಾಯಕಿಯಾಗಿ ಮುಂದುವರಿದಿದ್ದಾರೆ. ಭಾರತದೆದುರಿನ ಟಿ20 ಸರಣಿಯಲ್ಲಿ ಮಿಂಚಿದ ಅಲೈಸ್‌ ಕ್ಯಾಪ್ಸಿ ಮತ್ತು ಫ್ರೆàಯಾ ಕೆಂಪ್‌ ಮೊದಲ ಸಲ ಇಂಗ್ಲೆಂಡ್‌ ಏಕದಿನ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಾಯಕಿ ಹೀತರ್‌ ನೈಟ್‌ ವಿಶ್ರಾಂತಿಯಲ್ಲಿದ್ದಾರೆ. ಉಸ್ತುವಾರಿ ನಾಯಕಿ ನಥಾಲಿ ಶಿವರ್‌ ಸರಣಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಆ್ಯಮಿ ಜೋನ್ಸ್‌ ನಾಯಕಿಯಾಗಿ ಮುಂದುವರಿದರು.

ಇಂಗ್ಲೆಂಡ್‌ ತಂಡ: ಆ್ಯಮಿ ಜೋನ್ಸ್‌ (ನಾಯಕಿ), ಟಾಮಿ ಬ್ಯೂಮಂಟ್‌, ಲಾರೆನ್‌ ಬೆಲ್‌, ಮಯಾ ಬೌಷಿರ್‌, ಅಲೈಸ್‌ ಕ್ಯಾಪ್ಸಿ, ಕೇಟ್‌ ಕ್ರಾಸ್‌, ಫ್ರೆàಯಾ ಡೇವಿಸ್‌, ಅಲೈಸ್‌ ಡೇವಿಡ್‌ಸನ್‌ ರಿಚರ್ಡ್ಸ್‌, ಚಾರ್ಲಿ ಡೀನ್‌, ಸೋಫಿಯಾ ಡಂಕ್ಲಿ, ಸೋಫಿ , ಫ್ರೆಯಾ ಕೆಂಪ್‌, ಐಸ್ಸಿ ವಾಂಗ್‌, ಡೇನಿಯಲ್‌ ವ್ಯಾಟ್‌.

ಭಾರತ ತಂಡ
ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮ, ಎಸ್‌. ಮೇಘನಾ, ದೀಪ್ತಿ ಶರ್ಮ, ತನಿಯಾ ಭಾಟಿಯಾ, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್‌, ಸ್ನೇಹ್‌ ರಾಣಾ, ರೇಣುಕಾ ಸಿಂಗ್‌, ಮೇಘನಾ ಸಿಂಗ್‌, ರಾಜೇಶ್ವರಿ ಗಾಯಕ್ವಾಡ್‌, ಹಲೀìನ್‌ ದೇವಲ್‌, ಡಿ. ಹೇಮಲತಾ, ಸಿಮ್ರಾನ್‌ ದಿಲ್‌ ಬಹಾದೂರ್‌, ಜೂಲನ್‌ ಗೋಸ್ವಾಮಿ, ಜೆಮಿಮಾ ರೋಡ್ರಿಗಸ್‌.

Advertisement

Udayavani is now on Telegram. Click here to join our channel and stay updated with the latest news.

Next