ಆಲಮೇಲ: ಆಲಮೇಲ ಪಟ್ಟಣದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಮಂಜೂರಾಗಿದ್ದು ಅದನ್ನು ರಾಜಕೀಯ ಕುತಂತ್ರದಿಂದ ಸ್ಥಳಾಂತರವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಭಾಗದ ವಿವಿಧ ಸಂಘ ಸಂಸ್ಥೆಗಳು ಎಚ್ಚರಿಸಿದ್ದಾರೆ.
ರಾಜ್ಯ ಸರಕಾರ ನಡೆಸಿರುವ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಕ್ಕೆ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪಿಸಲು ಅನುಮೋದನೆ ನೀಡಿರುವ ಸರಕಾರದ ಈ ನಿರ್ಧಾರಕ್ಕೆ ಆಲಮೇಲ ನಾಗರಿಕ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಸ್ವಾಗತಿಸಿದ್ದು. ಅದನ್ನು ಸಹಿಸದ ಕೆಲವರು ಬೇರೆ ಕಡೆ ಸ್ಥಳಾಂತರಕ್ಕೆ ಬೇಡಿಕ್ಕೆ ಈಡೇತ್ತಿರುವದು ಸರಿ ಅಲ್ಲ. ನಾವು ಎಂದು ಬಿಟ್ಟುಕೊಡುವುದಿಲ್ಲ.
ಮಹಾವಿದ್ಯಾಲಯ ಸ್ಥಾಪನೆಗೆ ಎಲ್ಲ ಸೌಲಭ್ಯಗಳು ಇದ್ದು ತೋಟಗಾರಿಕೆ ಮಹಾವಿದ್ಯಾಲಯ ಆಲಮೇಲದಲ್ಲಯೇ ಸ್ಥಾಪಿಸಬೇಕು. ಒಂದು ವೇಳೆ ಬದಲಾವಣೆ ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಲಮೇಲ ನಾಗರಿಕ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು ಆಗ್ರಹಿಸಿದ್ದವು.
ನಾಗರಿಕೆ ವೇದಿಕೆ ಅಧ್ಯಕ್ಷ ರಮೇಶ ಭಂಟನೂರ ಮಾತನಾಡಿ, ಆಲಮೇಲ ಪಟ್ಟಣ ಇತ್ತೀಚೆಗೆ ತಾಲೂಕು ಕೇಂದ್ರವಾಗಿದ್ದು ಇಲ್ಲಿನ ಕಡಣಿಯ ರಸ್ತೆಯ ಹತ್ತಿರ ಇರುವ ಕೃಷಿ ಸಂಶೋಧನಾ ಕೇಂದ್ರಕ್ಕೆ ಸುಮಾರು 140 ಎಕರೆ ಜಮೀನಿದೆ. ಇಂಡಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ಹೆಸರಿನಲ್ಲಿ 60 ಎಕರೆ ಜಮೀನಿದೆ. ಪಟ್ಟಣದ ಕೃಷ್ಣಾ ಭಾಗ್ಯ ಜಲನಿಗಮದಲ್ಲಿ ಖಾಲಿ ಕಟ್ಟಡಗಳು ಇವೆ. ಹೀಗಾಗಿ ಮಹಾವಿದ್ಯಾಲಯ ಪ್ರಾರಂಭಿಸಲು ಎಲ್ಲ ಸೌಲಭ್ಯಗಳು ಇವೆ. ಅದನ್ನು ಬಿಟ್ಟು ವಿಜಯಪುರ ಸಮೀಪದ ತಿಡಗುಂದಿಗೆ ಸ್ಥಳಾಂತರ ವಾಗಬೇಕು ಎಂದು ಮಾಜಿ ಶಾಸಕರೊಬ್ಬರು ಹೇಳುತ್ತಿರುವದು ಸರಿ ಅಲ್ಲ ಎಂದರು.
ಆಲಮೇಲ ಪಟ್ಟಣಕ್ಕೆ ಹೊರ ರಾಜ್ಯಗಳ ಸಂಪರ್ಕವಿದೆ. ಕಲಬುರಗಿ, ವಿಜಯಪುರ ಮತ್ತು ಮಹಾರಾಷ್ಟ್ರದ ಗಡಿಯವರೆಗೆ ಇರುವ ಎಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ತೋಟಗಾರಿಕೆ ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಇಲ್ಲಿನ ತೋಟಗಾರಿಕೆ ಇಲಾಖೆಯಲ್ಲಿ ಬೆಳೆಯುವ ಮಾವಿನ ಹಣ್ಣಿಗೆ ವಿದೇಶದಲ್ಲೂ ಬೆಲೆ ಇದೆ. ಆಲಮೇಲ ಪಟ್ಟಣ ಎಂದೋ ಅಭಿವೃದ್ಧಿ ಆಗಬೇಕಿತ್ತು. ಆದರೆ ಹಿಂದಿರುವ ರಾಜ್ಯಕಾರಣಿಗಳ ನಿರ್ಲಕ್ಷ್ಯದಿಂದ ಯಾವ ಅಭಿವೃದ್ಧಿಯೂ ಆಗಿಲ್ಲ. ಈಗಿರುವ ಶಾಸಕ ಎಂ.ಸಿ. ಮನಗೂಳಿ ರಾಜ್ಯ ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಸಚಿವ ಮನಗೂಳಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತರುತ್ತಿದ್ದು ಅದಕ್ಕೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡಬೇಕು.
ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆಗೆ ಆಲಮೇಲ ಅತ್ಯಂತ ಸೂಕ್ತ ಪ್ರದೇಶವಾಗಿದ್ದು ಇಲ್ಲಿನ ರೈತರು ಸುಮಾರು 20 ವರ್ಷಗಳಿಂದ ಕಬ್ಬು ತರಕಾರಿ, ನಿಂಬೆ, ದಾಳಿಂಬೆ ಬೆಳೆಯುತ್ತ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ದ್ರಾಕ್ಷಿ ಕ್ಷೇತ್ರದಲ್ಲಿಯೂ ಗಣನೀಯ ವೃದ್ಧಿ ಕಂಡು ಬರುತ್ತಿದ್ದು ಈ ಭಾಗದಿಂದ ಪ್ರತಿ ದಿನ ಸುಮಾರ 250 ಟನ್ ಹಸಿಮೆಣಸಿನ ಕಾಯಿ ರಾಜ್ಯ ಹಾಗೂ ಹೊರ ರಾಜ್ಯಕ್ಕೆ ಪೂರೈಕೆ ಮಾಡಲಾಗುತ್ತಿದೆ. ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳು ಮೊದಲೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಮಹಾವಿದ್ಯಾಲಯ ಕಾರ್ಯರೂಪಕ್ಕೆ ಬಂದರೆ ಈ ಭಾಗದ ರೈತರು ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ಆಲಮೇಲದಲ್ಲಿ ವಿದ್ಯಾಲಯ ನಿರ್ಮಾಣದಲ್ಲಿ ಬದಲಾಣೆಯಾದರೆ ಈ ಭಾಗದ ರೈತರು ಹಾಗೂ ನಾಗರಿಕರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಬ್ಬು ಬೆಳಗಾರ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಜು ಗುಂದಗಿ ಹೇಳಿದ್ದಾರೆ.