ಎನ್.ಆರ್.ಪುರ: ಕನ್ನಡದ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ ನಡೆಸುತ್ತದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಅರಸ್ ತಿಳಿಸಿದರು.
ಇಲ್ಲಿನ ಗುರುಭವನದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಸುಮಾರು 2,800 ವರ್ಷಗಳ ಇತಿಹಾಸವಿರುವ, 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆಗೆ ಪ್ರಸ್ತುತ ಧಕ್ಕೆ ತರುವ ಕೆಲಸ ಸರ್ಕಾರಗಳಿಂದ ನಡೆಯುತ್ತಿದೆ. ಇತಿಹಾಸವಿಲ್ಲದ ಹಿಂದಿ ಭಾಷೆಯನ್ನು ಇನ್ನೊಂದು ರಾಜ್ಯದ ಮೇಲೆ ಹೇರಿಕೆ ಮಾಡುವ ಕೆಲಸ ಸರ್ಕಾರದಿಂದ ಆಗುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಾಗ ಕನ್ನಡ ಭಾಷೆಯ ಉಳಿವಿಗಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸುವ ಬದಲು ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯ ಜಾರಿಗೊಳಿಸುವ ಕೆಲಸ ಮಾಡಿತು ಎಂದರು.
ಅತಿವೃಷ್ಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಸರ್ಕಾರ ಮಾಡಬೇಕು. ಇಲ್ಲವಾದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಲಾಗುತ್ತದೆ. ಕನ್ನಡ ನಾಡಿಗೆ ಪ್ರತ್ಯೇಕ ಬಾವುಟದ ಅವಶ್ಯಕತೆಯಿಲ್ಲ ಎಂದು ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಸಿ.ಟಿ.ರವಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕನ್ನಡಕ್ಕೆ ಪ್ರತ್ಯೇಕ ಬಾವುಟಕ್ಕಾಗಿ ಸಂಘ-ಸಂಸ್ಥೆಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈಗಿನ ಸರ್ಕಾರದ ಸಚಿವರು ಪ್ರತ್ಯೇಕ ಬಾವುಟದ ಅವಶ್ಯಕತೆಯಿಲ್ಲ ಎನ್ನುತ್ತಿದ್ದು, ಅಂತಹವರು ರಾಜ್ಯಬಿಟ್ಟು ಹೋಗಲಿ ಎಂದರು. ಕನ್ನಡ ನಾಡು-ನುಡಿಗಾಗಿ ರಾಜಕೀಯ ರಹಿತವಾಗಿ ಹೋರಾಟ ಮಾಡಲಾಗುವುದು ಎಂದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಮಾಜಿ ಉಪಾಧ್ಯಕ್ಷ ಪಿ.ಜೆ.ಅಂಟೋಣಿ, ಕನ್ನಡ ಭಾಷೆಯ ಸಾಹಿತ್ಯ, ಸಂಸ್ಕತಿಯ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಜನರಲ್ಲಿ ಕನ್ನಡ ಪರ ಭಾವನೆ ಬೆಳೆಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ಕನ್ನಡ ನೆಲ, ಜಲ, ಕನ್ನಡಿಗರಿಗೆ ಅನ್ಯಾಯವಾದಾಗ ಹೋರಾಟ ಮಾಡುವ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡುತ್ತಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ನೂತನ ತಾಲೂಕು ಅಧ್ಯಕ್ಷ ಅಜಿತ್ ಮಾತನಾಡಿ, ಕನ್ನಡದ ನೆಲ, ಜಲ ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಲಾಗುವುದು. ನ.26ರಂದು ವೇದಿಕೆಯಿಂದ ಕನ್ನಡ ರಾಜ್ಯೋತ್ಸವ, ನಗೆಹಬ್ಬ ಆಯೋಜಿಸಲು ಚಿಂತಿಸಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷರನ್ನು ಆಹ್ವಾನಿಸಲಾಗುವುದು ಎಂದರು. ವೇದಿಕೆ ತಾಲೂಕು ಮಹಿಳಾ ಘಟಕಾಧ್ಯಕ್ಷೆ ಪ್ರೇಮಾ ಶ್ರೀನಿವಾಸ್ ಮಾತನಾಡಿದರು. ಜಿಲ್ಲಾ ಘಟಕದ ಪಂಚಾಕ್ಷರಿ, ತಾಲೂಕು ನೂತನ ಪದಾಧಿ ಕಾರಿಗಳಾದ ಕೆ.ಜೆ.ರಜಿ, ಪ್ರಜ್ವಲ್, ಸೃಷ್ಠಿ, ಸುದರ್ಶನ್, ಜಾನಕಿ ರಾಜಶೇಖರ್, ಶಾಂತ, ಪಿ.ಸಿ.ಬಿನು, ಮಂಜು, ಉತ್ತಮ್, ಗ್ರಾಪಂ ಸದಸ್ಯ ಸತೀಶ್ ಪಾಲ್ಗೊಂಡಿದ್ದರು.