Advertisement

ಏತ ನೀರಾವರಿ ಯೋಜನೆಗೆ ಹೋರಾಟ

10:25 AM Jul 08, 2019 | Suhan S |

ಗಜೇಂದ್ರಗಡ: ಗಜೇಂದ್ರಗಡ ಮತ್ತು ರೋಣ ತಾಲೂಕಿಗೆ ದೊರೆಯಬೇಕಾದ ಕೊಪ್ಪಳ ಸೂಕ್ಷ್ಮ ಏತ ನೀರಾವರಿ ಯೋಜನೆ ತೀವ್ರಗತಿಯಲ್ಲಿ ಕೈಗೊಳ್ಳುವಲ್ಲಿ ಸಂಸದರು ಮತ್ತು ಶಾಸಕರು ಇಚ್ಚಾಶಕ್ತಿ ಪ್ರದರ್ಶಿಸದಿರುವುದನ್ನು ಖಂಡಿಸಿ ಪ್ರತಿ ಗ್ರಾಮಗಳಲ್ಲಿಯೂ ಜನಜಾಗೃತಿ ಮೂಡಿಸಿ ಶೀಘ್ರದಲ್ಲೇ ನಿರಂತರ ಬೃಹತ್‌ ಹೋರಾಟ ನಡೆಸಲು ಕೃಷ್ಣಾ ಮೇಲ್ದಂಡೆ 3ನೇ ಹಂತದ ಕೊಪ್ಪಳ ಸೂಕ್ಷ್ಮ ಏತ ನೀರಾವರಿ ತಾಲೂಕು ಹೋರಾಟ ಸಮಿತಿ ಚಿಂತನೆ ನಡೆಸಿದೆ ಎಂದು ಎಂ.ಎಸ್‌. ಹಡಪದ ಹಾಗೂ ರವೀಂದ್ರ ಹೊನವಾಡ ತಿಳಿಸಿದ್ದಾರೆ.

Advertisement

ಬಾಕಲಕೋಟೆ ಜಿಲ್ಲೆ ಹುನಗುಂದ ತಾಲೂಕು ಬಲಕುಂದಿ ಹತ್ತಿರದ ವಿದ್ಯುತ್ತಿಕರಣ ಘಟಕಕ್ಕೆ ಭೇಟಿ ನೀಡಿದ ನಂತರ ರವಿವಾರ ಪ್ರಕಟಣೆ ನೀಡಿರುವ ಅವರು, 3ನೇ ಹಂತದ ಕೊಪ್ಪಳ ಸೂಕ್ಷ್ಮ ಏತ ನೀರಾವರಿ ಯೋಜನೆ 2013ರಲ್ಲಿಯೇ ಪ್ರಾರಂಭವಾಗಿದೆ. 2016ಕ್ಕೆ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಆಡಳಿತಾತ್ಮಕ ಹಾಗೂ ಹಣಕಾಸಿನ ಸಮಸ್ಯೆ ನೆಪವೊಡ್ಡಿ ಸರ್ಕಾರಗಳು ಯೋಜನೆ ಪೂರ್ಣಗೊಳಿಸದೇ ವಿಳಂಬ ನೀತಿ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಉತ್ತರ ಕರ್ನಾಟಕ ಬಹುತೇಕ ಮಳೆ ಆಶ್ರಿತ ವ್ಯವಸಾಯ ಹೊಂದಿದ್ದು, ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಮರ್ಪಕ ಮಳೆಯಾಗದೇ ಬರದ ಭೀಕರ ಎದುರಿತ್ತಿದ್ದಾರೆ. ಆದರೆ ಗಜೇಂದ್ರಗಡ, ರೋಣ, ಬಾದಾಮಿ, ಹುನಗುಂದ ಸೇರಿ ಕೊಪ್ಪಳ ಜಿಲ್ಲೆಯ ಮೂರು ತಾಲೂಕುಗಳು ಯೋಜನೆಗೊಳಪಟ್ಟಿವೆ. 12.815 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಂಡು ಒಟ್ಟು 2. 85 ಲಕ್ಷ ಎಕರೆ ನೀರಾವರಿ ಕ್ಷೇತ್ರ ಮಾಡಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಯೋಜನೆ ಕಾಲಮಿತಿ ಕಡೆಗಣಿ, ಕಳೆದ 6 ವರ್ಷಗಳಿಂದ ಕುಂಟುತ್ತಾ ಸಾಗಿರುವ ಕಾಮಗಾರಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗಜೇಂದ್ರಗಡ ಮತ್ತು ರೋಣ ತಾಲೂಕಿನ ಬೇವಿನಕಟ್ಟಿ, ಅಮರಗಟ್ಟಿ, ಗುಳಗುಳಿ, ಪ್ಯಾಟಿ, ನೆಲ್ಲೂರ, ಕಲ್ಲಿಗನೂರ, ಮುಶಿಗೇರಿ, ರುದ್ರಾಪುರ, ಬಳಗೋಡ, ಸರ್ಜಾಪುರ, ದ್ಯಾಮುಣಸಿ, ಚಿಕ್ಕ ಅಳಗುಂಡಿ, ಹಿರೇ ಅಳಗುಂಡಿ, ಹೊನ್ನಿಗನೂರ, ಶಾಂತಗೇರಿ, ಬೊಮ್ಮಸಾಗರ ಸೇರಿ 17 ಗ್ರಾಮಗಳ ವ್ಯಾಪ್ತಿಯ 3372 ಹೆಕ್ಟೇರ್‌ ಜಮೀನು ಏತ ನೀರಾವರಿಗೆ ಒಳಪಟ್ಟಿದೆ. ಇದನ್ನು ತ್ವರಿತಗತಿಯಲ್ಲಿ ಕೈಗೊಳ್ಳುವ ನಿಟ್ಟಿನಲ್ಲಿ ಈ ಭಾಗದ ಜನಪ್ರತಿಧಿಗಳು ಆಸಕ್ತಿ ತೋರದೇ, ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಜನವಿರೋ ನಡೆ ಅನುಸರಿಸುತ್ತಿರುವುದು ಖಂಡನೀಯ.

ಉತ್ತರ ಕರ್ನಾಟಕದ ಯಾವುದೇ ಯೋಜನೆಗಳು ಕಾಲ ಮಿತಿಯಲ್ಲಿ ಮುಗಿಯದೆ ಇರುವುದಕ್ಕೆ ಈ ಭಾಗದ ಜನಪ್ರತಿನಿಧಿಗಳ ರಾಜಕೀಯ ಇಚ್ಚಾಶಕ್ತಿ ಕೊರತೆ ಹಾಗೂ ಯೋಜನೆ ಜಾರಿಗೆ ಸಂಬಂಧಿಸಿ ಅವರಲ್ಲಿನ ಉದಾಸೀನ, ನಿರ್ಲಕ್ಷ್ಯ ಭಾವನೆ ಪ್ರಮುಖ ಕಾರಣವಾಗಿದೆ. ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನ ವಿರೋಧಿ ನಿಲುವಿನವರಾಗಿದ್ದಾರೆ. ನಿದ್ರಾವಸ್ಥೆಯಲ್ಲಿರುವ ಆಡಳಿತಶಾಹಿಗಳನ್ನು ಬಡೆದೆಬ್ಬಿಸುವ ನಿಟ್ಟಿನಲ್ಲಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಕೊಪ್ಪಳ ಸೂಕ್ಷ್ಮ ಏತ ನೀರಾವರಿ ತಾಲೂಕು ಹೋರಾಟ ಸಮಿತಿ ಯೋಜನೆಗೆ ಒಳಪಡುವ ಪ್ರತಿ ಗ್ರಾಮಗಳಿಗೂ ತೆರಳಿ ಯೋಜನೆ ಉದ್ದೇಶವನ್ನು ಜನರಿಗೆ ತಿಳಿಸಿ ಗ್ರಾಮ ಮಟ್ಟದಿಂದಲೇ ಹೋರಾಟ ರೂಪಿಸುವ ಕಾರ್ಯಕ್ಕೆ ಅಣಿಯಾಗುತ್ತೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next