Advertisement

ಪುತ್ರಿ ಉಳಿಸಿಕೊಳ್ಳಲು ಪ್ರತಿನಿತ್ಯ ಹೋರಾಟ

05:43 PM Dec 03, 2019 | Team Udayavani |

ಕೊಪ್ಪಳ: ತನ್ನ 11 ತಿಂಗಳ ಕಂದಮ್ಮನನ್ನು ಉಳಿಸಿಕೊಳ್ಳಲು ಇಲ್ಲೊಬ್ಬ ತಂದೆ ನಿತ್ಯ ಹೋರಾಡುತ್ತಿದ್ದಾರೆ. ಮೊದಲ ಮಗನಿಗೆ ಹೃದಯಸಂಬಂಧಿ ಕಾಯಿಲೆಯಿದ್ದರೆ,ಮಗಳಿಗೆ ಹುಟ್ಟಿನಿಂದಲೇ ಶುಗರ್‌ ಪ್ರಮಾಣ ಕಡಿಮೆಯಾಗಿ ಫಿಟ್ಸ್‌ ಬರುತ್ತಿದೆ. ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ತಾನೇ ನಿತ್ಯ 4 ಬಾರಿ ಇಂಜೆಕ್ಷನ್‌ ಮಾಡುತ್ತಿರುವ ತಂದೆಯ ನೋವಿನ ವ್ಯಥೆ ಕಣ್ಣಲ್ಲಿ ನೀರು ತರಿಸುವಂತಿದೆ.

Advertisement

ಹೌದು. ಜಿಲ್ಲೆಯ ಗಂಗಾವತಿಯಲ್ಲಿ ಅಲೆಮಾರಿ ಜನಾಂಗದ ನಿವಾಸಿ ದುರಗೇಶನಿತ್ಯವೂ ಚಿಕಿತ್ಸಾ ವೆಚ್ಚ ಭರಿಸಲಾಗದೇ ತನ್ನ11 ತಿಂಗಳ ಕಂದಮ್ಮನಿಗೆ ತಾನೇ ಇಂಜೆಕ್ಷನ್‌ ಕೊಡುತ್ತಿದ್ದಾನೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಅವರಿವರ ಬಳಿ ಕೈ ಚಾಚಿಯೇ ಜೀವನ ನಡೆಸಬೇಕು. ಒಂದೊತ್ತು ಊಟವಿದ್ದರೆ, ಇನ್ನೊಂದು ಹೊತ್ತು ಉಪವಾಸ. ಇವರು ಮೀನು ಹಿಡಿದು ಜೀವನ ನಡೆಸುತ್ತಾರೆ. ಮೀನುಗಳು ಸಿಕ್ಕರೆ ನಿತ್ಯದ ಜೀವನ, ಮೀನು ಸಿಗದೇ ಇದ್ದರೆ ದುಡಿಮೆಯೇ ಇಲ್ಲ. ಇಂತಹ ಸ್ಥಿತಿಯಲ್ಲೂ ಪುತ್ರಿಗೆ ನೀಡುವ ಒಕೀಪ್ರಯೋಟೈಡ್‌ ಏಸ್‌ಟೆಟ್‌ ಇಂಜೆಕ್ಷನ್‌ಗೆ ನಿತ್ಯ 500 ರೂ. ಖರ್ಚು ಮಾಡಬೇಕಾಗಿದೆ.

ಎರಡು ವರ್ಷದ ಮಗ ಹನುಮೇಶನಿಗೆ ಹೃದಯ ಸಂಬಂಧಿ  ಕಾಯಿಲೆಯಿದೆ. ಚಿಕಿತ್ಸೆಗೆ ಹೆಚ್ಚಿನ ಹಣ ಬೇಕು. ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ವೈದ್ಯರು ಹೇಳಿದ್ದಾರೆ. ಹಣ ಇಲ್ಲದೇ ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಲ್ಲ. ಇನ್ನೂ 2ನೇ ಮಗು ದೀಪಿಕಾ 11 ತಿಂಗಳ ಕೂಸು. ಈ ಮಗುವಿಗೆ ಹುಟ್ಟಿನಿಂದಲೇ ಶುಗರ್‌ ಕಡಿಮೆಯಾಗಿ ಫಿಟ್ಸ್‌ ಬರುತ್ತಿತ್ತು. ಇದನ್ನು ವೈದ್ಯರು ಪರೀಕ್ಷೆ ಮಾಡಿದಾಗ ಲಕ್ಷ ಮಕ್ಕಳಲ್ಲಿ ಒಂದೆರಡು ಮಕ್ಕಳಿಗೆ ಇಂತಹ ಕಾಯಿಲೆ ಇರುತ್ತೆ ಎನ್ನುತ್ತಿದ್ದಾರೆ. ಮಗುವಿನ ದೇಹದಲ್ಲಿ ಇನ್ಸುಲಿನ್‌ ಪ್ರಮಾಣ ಹೆಚ್ಚಿದೆ. ಇದರಿಂದ ಶುಗರ್‌ ಪ್ರಮಾಣ ಕಡಿಮೆಯಾದಂತೆ ಮಗುವಿಗೆ ಸುಸ್ತಾಗಿ ಫಿಟ್ಸ್‌ ಬರುತ್ತಿದೆ. ದುರಗೇಶ ಅವರು ಮಗಳಿಗೆ ಮೊದಲು ಗಂಗಾವತಿಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದಾರೆ. ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಯಲ್ಲೂ ಈ ಹಿಂದೆ ಒಂದೂವರೆ ತಿಂಗಳು ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಕಾಯಿಲೆ ಗುಣಮುಖವಾಗಿಲ್ಲ. ಬೆಂಗಳೂರಿನ ವೈದ್ಯರೂ ಚೆನ್ನೈಗೆ ರಿಪೋರ್ಟ್‌ ರವಾನಿಸಿದ್ದಾರೆ. ವಿದೇಶದಿಂದಲೂ ಔಷಧಿ ತರಿಸಿದ್ದಾರೆ. ಅಲ್ಲಿಯೂ ಸಹಿತ ಮಗುವಿಗೆ ಜೀವನ ಪರ್ಯಂತ ನಿತ್ಯ ನಾಲ್ಕಾರು ಬಾರಿ ಇಂಜೆಕ್ಷನ್‌ ಕೊಡಿಸಲೇಬೇಕು. ಇಲ್ಲದಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯವಿದೆ ಎಂದಿದ್ದಾರೆ. ಇದರಿಂದ ಕಂಗಾಲಾದ ದುರಗೇಶ್‌ಗೆ ದಿಕ್ಕೇ ತೋಚದಂತಾಗಿದೆ. ನಿತ್ಯವೂ ವೈದ್ಯರ ಸಲಹೆಯಂತೆ 4ಇಂಜೆಕ್ಷನ್‌ ಕೊಡಬೇಕು. ಇಲ್ಲದಿದ್ದರೆ ಮಗು ನರಳಾಡುತ್ತದೆ.

ಮಗಳ ಜೀವ ಉಳಿಸಿಕೊಳ್ಳಲು ದುರಗೇಶ ಅವರು ಕಂಡ ಕಂಡವರ ಬಳಿ ಸಾಲ ಮಾಡಿದ್ದಾರೆ. ಸಂಬಂಧಿಕರೂ ಅಲ್ಪ ಸ್ವಲ್ಪ ಹಣ ಕೊಟ್ಟಿದ್ದಾರೆ. ಚಿಕಿತ್ಸೆಗಾಗಿ ಲಕ್ಷಾಂತರ ರೂ. ವ್ಯಯಿಸಿದ್ದಾರೆ. ನಿತ್ಯ ಮಗುವನ್ನು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಗದೆ ತಂದೆ ಮನೆಯಲ್ಲಿ ತಾನೇ 11 ತಿಂಗಳ ಕಂದಮ್ಮಳಿಗೆ ಪ್ರತಿ 6 ತಾಸಿಗೊಮ್ಮೆ ಇಂಜೆಕ್ಷನ್‌ ಮಾಡುತ್ತಿದ್ದಾರೆ. ಇಂಜೆಕ್ಷನ್‌ ಮಾಡದೇ ಹೋದರೆ ಮಗುವಿನ ಜೀವಕ್ಕೆ ಅಪಾಯವಿದೆ. ಮಾಡಬೇಕೆಂದರೆ ಔಷಧಿ ತರಲು ಕೈಯಲ್ಲಿ ಹಣವಿಲ್ಲ ಎಂದು ಕಣ್ಣೀರುಡುತ್ತಲೇ ನೋವು ತೋಡಿಕೊಳ್ಳುತ್ತಾರೆ ದುರಗೇಶ.

Advertisement

ಇನ್ನೂ ನಾಲ್ಕು ಇಂಜೆಕ್ಷನ್‌ ಮಾಡಬೇಕೆಂದರೆ ಆ ಔಷಧಿಯನ್ನು ಕೋಲ್ಡ್‌ನಲ್ಲಿ ಇಡಬೇಕು. ಆದರೆ ಈ ಕುಟುಂಬಕ್ಕೆ ಇರಲು ನೆಲೆಯಿಲ್ಲ. ಇರುವ ಹರಕಲುಮುರಕಲು ಜೋಪಡಿಯಲ್ಲೇ ಮಣ್ಣಿನ ಗಡಿಗೆಯನ್ನಿಟ್ಟು, ಸುತ್ತಲು ಮರಳು ಹಾಕಿ ನೀರು ತಂಪು ಮಾಡಿ ಅದರಲ್ಲೇ ಈ ಔಷಧಿ ಇಡುತ್ತಿದ್ದಾರೆ. ಕಷ್ಟಪಟ್ಟು 11 ತಿಂಗಳ ಮಗುವನ್ನು ಇಲ್ಲಿಯವರೆಗೂ ಕಾಪಾಡಿಕೊಂಡಿದ್ದೇನೆ. ನನ್ನ ಮಗುವಿಗೆ ಸರ್ಕಾರ, ಸಂಘಸಂಸ್ಥೆಗಳು ಧನ ಸಹಾಯ ಮಾಡಿದರೆ ನನ್ನ ಕಂದಮ್ಮಳನ್ನು ಉಳಿಸಿಕೊಳ್ಳುವೆ. ನೆರವು ನೀಡಿ ಎಂದು ಕೈ ಜೋಡಿಸಿ ಕಣ್ಣೀರಿಡುತ್ತಲೇ ಬೇಡಿಕೊಂಡಿದೆ ಈ ಕುಟುಂಬ. ಇಂತಹ ನೊಂದ ಕುಟುಂಬಕ್ಕೆ ಸಹಾಯ, ಸಲಹೆ ನೀಡಿ ಮಗುವಿನ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ತಂದೆಗೆ ನಾಗರಿಕ ವಲಯ ನೆರವಾಗಬೇಕಿದೆ.

 

ಬ್ಯಾಂಕ್‌ ಖಾತೆ ವಿವರ: ಸಣ್ಣ ಮರೆಮ್ಮ ಗಂಡ ದುರಗೇಶ
ಆಂಧ್ರ ಬ್ಯಾಂಕ್‌, ಗಂಗಾವತಿ ಶಾಖೆ
ಎಸ್‌ಬಿ ಖಾತೆ ನಂ-015510100160886
ಐಎಫ್‌ಎಸ್‌ಸಿ ಕೋಡ್‌-
ಎಎನ್‌ಡಿಬಿ0000155
ಮೊ. 8861339178

Advertisement

Udayavani is now on Telegram. Click here to join our channel and stay updated with the latest news.

Next