ಮಣಿಪಾಲ: ಬ್ರಹ್ಮಾವರ ಡಿಪ್ಲೊಮಾ ಮಹಾವಿದ್ಯಾಲಯವನ್ನು ಮುಂದುವರಿಸಿ ಪೂರ್ಣ ಪ್ರಮಾಣದ ಕೃಷಿ ಕಾಲೇಜು ಆರಂಭಿಸಿ ಕಾಲೇಜು ಬೋಧಕ, ಬೋಧಕೇತರ ಉದ್ಯೋಗ ಉಳಿಸಬೇಕು ಎಂದು ಆಗ್ರಹಿಸಿ ಕೃಷಿ ಕಾಲೇಜು ಉಳಿಸಿ ಹೋರಾಟ ಸಮಿತಿ ಹಾಗೂ ಬ್ರಹ್ಮಾವರ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯವನ್ನು ಉಳಿಸಲು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಸಚಿವೆ ಲಕ್ಷ್ಮೀ ಮಾತನಾಡಿ, ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಯಾವ ಕಾರಣಕ್ಕೆ ಡಿಪ್ಲೊಮಾ ಕೋರ್ಸ್ ರದ್ದು ಮಾಡಲಾಗಿದೆ. ಮೂಲ ಸಮಸ್ಯೆ ಏನು ಎಂಬುದನ್ನು ತಿಳಿಯಬೇಕಿದೆ. ಈ ಬಗ್ಗೆ ಹೋರಾಟ ಸಮಿತಿ ನಿಯೋಗದೊಂದಿಗೆ ಜೂ. 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರನ್ನು ಭೇಟಿ ಮಾಡಿಸಲಾಗುವುದು ಎಂದರು.
ಮಾಜಿ ಸಭಾಪತಿ ಹಾಗೂ ಜಿಲ್ಲಾ ರೈತ ಸಂಘದ ರೂವಾರಿ ಕೆ. ಪ್ರತಾಪ್‌ಚಂದ್ರಶೆಟ್ಟಿ, ಪ್ರಗತಿಪರ ಕೃಷಿಕ ಸತೀಶ್ ಕುಮಾರ್ ಶೆಟ್ಟಿ ಯಡ್ತಾಡಿ, ವಕೀಲ ರವಿ ಶೆಟ್ಟಿ ಮೊದಲಾದವರು ಮಾತನಾಡಿ, ಯಾವುದೇ ಕಾರಣಕ್ಕೂ ಸರಕಾರ ಕೃಷಿ ಡಿಪ್ಲೊಮಾ ಕಾಲೇಜು ಬಂದ್ ಮಾಡಬಾರದು. ಬ್ರಹ್ಮಾವರದಲ್ಲಿ ಕೃಷಿ ಡಿಪ್ಲೊಮಾ ಕಾಲೇಜಿನ ಜತೆಗೆ ಕೃಷಿ ಕಾಲೇಜು ಆರಂಭಿಸಬೇಕು. ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದ್ದೇವೆ ಎಂದರು.
ಜಿಲ್ಲಾ ರೈತ ಸಂಘದ ಪ್ರಮುಖರಾದ ಎಸ್. ಸಂಜೀವ್ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ ಮೈರ್ಮಾಡಿ, ಹರೀಶ್ ಚಂದ್ರ, ಡಿಎಸ್‌ಎಸ್‌ನ ಪ್ರಶಾಂತ್, ಕರ್ನಾಟಕ ಪ್ರಾಂತ ರೈತ ಸಂಘದ ಚಂದ್ರಶೇಖರ್, ಸಿಐಟಿಯುನ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಗಾರ, ಎಚ್. ನರಸಿಂಹ, ಶಶಿಧರ ಗೊಲ್ಲ, ಕೃಷಿ ಕೂಲಿ ಕಾರ್ಮಿಕರ ಸಂಘದ ವೆಂಕಟೇಶ ಕೋಣಿ, ಬೋಧಕೇತರ ಸಿಬಂದಿ ಲತಾ ಉಪಸ್ಥಿತರಿದ್ದರು.