Advertisement

ಜ್ಯಾಮ್ ನಗರದ ಬಡ ವಾಚ್ ಮ್ಯಾನ್ ಮಗ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್ ಆದ ಕಥೆ

04:34 PM Nov 06, 2020 | keerthan |

ಅಪ್ಪ ಖಾಸಗಿ ಕಂಪೆನಿಯಲ್ಲಿ ಕಾವಲುಗಾರ, ಭಾರೀ ಶಿಸ್ತಿನ ಮನುಷ್ಯ. ಮಗನನ್ನು ಭಾರತೀಯ ಸೇನೆಗೆ ಸೇರಿಸಬೇಕೆಂಬ ಆಸೆ ಅಪ್ಪನಿಗೆ, ಸಾಧಾರಣ ಮಧ್ಯಮ ವರ್ಗದ ಕುಟುಂಬವದು. ಮಗನಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಆಸಕ್ತಿ, ಆದರೆ ಅಪ್ಪನೆಂದರೆ ಅಷ್ಟೇ ಭಯ. ಅಪ್ಪನಿಗೆ ಗೊತ್ತಾಗದ ಹಾಗೆ ಕ್ರಿಕೆಟ್ ಆಡುತ್ತಿದ್ದ ಮಗನಿಗೆ ಅಮ್ಮ ಸಹಾಯ ಮಾಡುತ್ತಿದ್ದರು. ಆದರೆ ಮಗ 15ರ ವರ್ಷಕ್ಕೆ ಬಂದಾಗ ಒಂದು ರಸ್ತೆ ಅಪಘಾತದಲ್ಲಿ ಅಮ್ಮ ಮೃತಪಟ್ಟಿದ್ದರು. ಅಲ್ಲಿಗೆ ಅವನ ಕ್ರಿಕೆಟ್ ಆಸಕ್ತಿ ಕಮರಿ ಹೋಗಿತ್ತು. ಆದರೆ ನರ್ಸ್ ಆಗಿದ್ದ ಅಕ್ಕ, ತಮ್ಮನಿಗೆ ಪ್ರೋತ್ಸಾಹ ನೀಡಿ ಮತ್ತೆ ಕ್ರಿಕೆಟ್ ಆಡುವಂತೆ ಮಾಡಿದರು. ಹಾಗೆ ಬೆಳೆದ ಹುಡುಗ ಇಂದು ವಿಶ್ವಕಪ್ ಕ್ರಿಕೆಟ್ ನಲ್ಲಿ ವಿಶ್ವದ ಹೃದಯ ಗೆದ್ದುಬಿಟ್ಟ. ಅದು ಬೇರೆ ಯಾರೂ ಅಲ್ಲ. ಟೀಂ ಇಂಡಿಯಾದ ಆಲ್ ರೌಂಡರ್, ಶ್ರೇಷ್ಠ ಫೀಲ್ಡರ್ ಸರ್ ರವೀಂದ್ರ ಜಡೇಜಾ.

Advertisement

ಹೌದು, ರವೀಂದ್ರ ಜಡೇಜಾ ಶ್ರೀಮಂತರ ಮನೆತನದ ಹುಡುಗ ಏನಲ್ಲ. ಬಾಲ್ಯದಲ್ಲಿ ತುಂಬಾನೇ ಕಷ್ಟಪಟ್ಟಿದ್ದ ಜಡೇಜಾ ಇಂದು ವಿಶ್ವ ಕ್ರಿಕೆಟ್ ನಲ್ಲಿ ಸೂಪರ್ ಸ್ಟಾರ್ ಆದ ಕಥೆ ಏನು ಸುಲಭದಲ್ಲ. ಅಲ್ಲಿ ಬಡತನವಿತ್ತು, ನೋವಿತ್ತು, ಹತಾಶೆಯಿತ್ತು, ಅವಮಾನವಿತ್ತು. ಅದಕ್ಕೂ ಮೇಲಾಗಿ ಸಾಧಿಸಿಯೇ ತೀರುತ್ತೇನೆಂಬ ಛಲವಿತ್ತು. ಅದುವೇ ಗುಜರಾತ್ ನ ಜ್ಯಾಮ್ ನಗರದ ಹುಡುಗ ರವೀಂದ್ರ ಸಿನ್ಹ ಜಡೇಜಾನನ್ನು ವಿಶ್ವ ಗುರುತಿಸುವಂತೆ ಮಾಡಿದ್ದು.

ರವೀಂದ್ರ ಸಿನ್ಹ ಅನಿರುದ್ದ್ ಸಿನ್ಹಾ ಜಡೇಜಾ ಹುಟ್ಟಿದ್ದು ಡಿಸೆಂಬರ್ ಆರು 1988ರಂದು. ತಂದೆ ಅನಿರುದ್ದ್ ಸಿನ್ಹಾ ಖಾಸಗಿ ಕಂಪೆನಿಯಲ್ಲಿ ವಾಚ್ ಮ್ಯಾನ್. ತಾಯಿ ಲತಾ. ಅಕ್ಕ ನೈನಾ ಆಸ್ಪತ್ರೆಯೊಂದರಲ್ಲಿ ನರ್ಸ್. ಇವರೇ ಜಡೇಜಾ ಕ್ರಿಕೆಟ್ ಜೀವನಕ್ಕೆ ಮರು ಹುಟ್ಟು ನೀಡಿದ್ದು. ಅಕ್ಕ ನೈನಾರ ಬೆಂಬಲ ಇಲ್ಲದೇ ಇದ್ದರೆ ಜಡೇಜಾ ಇಂದು ಸೇನೆಯಲ್ಲೋ ಅಥವಾ ಇನ್ಯಾವುದೋ ಕೆಲಸ ಮಾಡಿಕೊಂಡಿರುತ್ತಿದ್ದರು.

2005ರಲ್ಲಿ ರವೀಂದ್ರ ಜಡೇಜಾ ಭಾರತೀಯ ಅಂಡರ್ 19 ತಂಡಕ್ಕೆ ಆಯ್ಕೆಯಾದರು. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜಡೇಜಾ ಮೂರು ವಿಕೆಟ್ ಪಡೆದು ಮಿಂಚಿದರೂ ಭಾರತ ಸೋತಿತ್ತು. ನಂತರ 2008ರ ಅಂಡರ್ 19 ವಿಶ್ವಕಪ್ ತಂಡದಲ್ಲಿ ಉಪನಾಯಕನಾಗಿದ್ದ ಜಡೇಜಾ ಕೂಟದಲ್ಲಿ 10 ವಿಕೆಟ್ ಪಡೆದು ಮಿಂಚಿದರು. ಆ ವಿಶ್ವಕಪ್ ಗೆದ್ದ ಭಾರತದ ಹುಡುಗರ ನಾಯಕನಾಗಿದ್ದು ವಿರಾಟ್ ಕೊಹ್ಲಿ.

Advertisement

ಸೌರಾಷ್ಟ್ರದ ಪರವಾಗಿ ದೇಶೀಯ ಕ್ರಿಕೆಟ್ ಆರಂಭಿಸಿದ ಜಡೇಜಾ 2008-09ರ ರಣಜಿಯಲ್ಲಿ ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ದೇಶದಲ್ಲಿ ಮಿಂಚು ಹರಿಸಿದ್ದರು. ಆ ರಣಜಿ ಋತುವಿನಲ್ಲಿ 42 ವಿಕೆಟ್ ಮತ್ತು 739 ರನ್ ಬಾರಿಸಿದ ಜಡೇಜಾ ಅದೇ ವರ್ಷ ರಾಷ್ಟ್ರೀಯ ತಂಡದ ಕದ ತಟ್ಟಿದರು. ದೇಶೀಯ ಕ್ರಿಕೆಟ್ ನಲ್ಲಿ ಮೂರು ತ್ರಿಶತಕ ಬಾರಿಸಿರುವ ಜಡೇಜಾ ಈ ಸಾಧನೆ ಮಾಡಿರುವ ಏಕೈಕ ಭಾರತೀಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿರುವುದು ಕೇವಲ ಎಂಟು ಆಟಗಾರರು ಮಾತ್ರ.

2008ರ ಫೆಬ್ರವರಿ ಎಂಟರಂದು ಮೊದಲ ಬಾರಿಗೆ ರವೀಂದ್ರ ಜಡೇಜಾ ಟೀಂ ಇಂಡಿಯಾ ಕ್ಯಾಪ್ ತೊಟ್ಟರು. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಜಡೇಜಾ ಮೊದಲ ಪಂದ್ಯದಲ್ಲೇ 60 ರನ್ ಗಳಿಸಿದ್ದರು. ಎರಡು ದಿನಗಳ ನಂತರ ಅಂತಾರಾಷ್ಟ್ರೀಯ ಟಿ- ಟ್ವೆಂಟಿ ಪದಾರ್ಪಣೆ ಮಾಡಿದರೂ 2009ರ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ನೀರಸ ಪ್ರದರ್ಶನದಿಂದ ಜಡೇಜಾ ಭಾರಿ ಟೀಕೆಗೊಳಗಾದರು. ಆ ಸಮಯದಲ್ಲಿ ತಂಡದಿಂದ ಜಡೇಜಾ ಹೊರಬಿದ್ದರು. ಸ್ಥಿರ ಪ್ರದರ್ಶನದ ಕೊರತೆಯಿಂದಾಗಿ 2011ರ ವಿಶ್ವಕಪ್ ಆಡುವ ಅವಕಾಶ ತಪ್ಪಿಸಿಕೊಂಡರು.

ತಂಡದಲ್ಲಿ ಆಲ್ ರೌಂಡರ್ ಆಗಿದ್ದ ಯೂಸುಫ್ ಪಠಾಣ್ ಅವರ ಕಳಪೆ ಪ್ರದರ್ಶನದಿಂದ ಹೊರ ಬಿದ್ದಾಗ ಜಡೇಜಾ ಮತ್ತೆ ಟೀಂ ಇಂಡಿಯಾ ಸೇರಿದರು. ಕಮ್ ಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಪಡೆದ ಜಡ್ಡು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

2012ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಜಡೇಜಾ, ರವಿ ಅಶ್ವಿನ್ ಜೊತೆಗೆ ತಂಡದ ಖಾಯಂ ಸ್ಪಿನ್ನರ್ ಆಗಿದ್ದರು. ಕೆಲವು ಟೆಸ್ಟ್, ಏಕದಿನ ಸರಣಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಡ್ಡು, 2015ರ ಏಕದಿನ ವಿಶ್ವಕಪ್ ಗೆ ಆಯ್ಕೆಯಾದರು ಮತ್ತು ಎಂಟು ಪಂದ್ಯಗಳಿಂದ ಒಂಬತ್ತು ವಿಕೆಟ್ ಕಬಳಿಸಿದರು. ಆದರೆ ಬ್ಯಾಟಿಂಗ್ ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಜಡ್ಡು, ನಂತರ ಟೀಂ ಇಂಡಿಯಾದಿಂದ ಹೊರ ಬೀಳಬೇಕಾಯಿತು. ಈ ವೇಳೆಗೆ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ತಂಡಕ್ಕೆ ಕಾಲಿಟ್ಟು ಮಿಂಚಿದ್ದರಿಂದ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಗೆ ತಂಡದ ಬಾಗಿಲು ಮುಚ್ಚಿತ್ತು.

2019ರಲ್ಲಿ ಹಾರ್ದಿಕ್ ಪಾಂಡ್ಯಾ ಗಾಯಾಳಾಗಿ ಟೀಂ ಇಂಡಿಯಾದಲ್ಲಿ ಆಲ್ ರೌಂಡರ್ ಕೊರತೆ ಎದುರಾದಾಗ ರವೀಂದ್ರ ಜಡೇಜಾಗೆ ಮತ್ತೆ ರಾಷ್ಟ್ರೀಯ ತಂಡದ ಕರೆ ಬಂತು. 2019ರ ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಜಡೇಜಾ ತಮ್ಮ ಆಯ್ಕೆಯನ್ನು ಉತ್ತಮವಾಗಿ ಸಮರ್ಥಿಸಿಕೊಂಡರು. ಮಿಂಚಿನ ವೇಗದ ಫೀಲ್ಡಿಂಗ್, ನಿಖರ ಬೌಲಿಂಗ್ ಮತ್ತು ನಿರ್ಣಾಯಕ ಸೆಮಿ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ ಮುಂದೆ ಟೀಂ ಇಂಡಿಯಾದ ಖಾಯಂ ಆಟಗಾರನಾಗುವ ವಿಶ್ವಾಸದಲ್ಲಿದ್ದಾರೆ.

2016ರ ಎಪ್ರಿಲ್ 17ರಂದು ರಿವಾ ಸೋಲಂಕಿಯವರನ್ನು ವಿವಾಹವಾದ ಜಡೇಜಾಗೆ ನಿಧ್ಯಾನ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. 2019ರಲ್ಲಿ ರಿವಾ ಸೋಲಂಕಿ ಭಾರತೀಯ ಜನತಾ ಪಾರ್ಟಿಗೆ ಸೇರಿದರೆ, ಅದೇ ಸಮಯದಲ್ಲಿ ಜಡೇಜಾ ತಂದೆ ಮತ್ತು ಅಕ್ಕ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಬಾಲ್ಯದಿಂದಲೇ ಕಷ್ಟ ಅನುಭವಿಸಿ, ಹೋರಾಟದಿಂದಲೇ ಟೀಂ ಇಂಡಿಯಾ ಸೇರಿದ ರವೀಂದ್ರ ಜಡೇಜಾ ಜೀವನ ಹಲವರಿಗೆ ಸ್ಪೂರ್ತಿ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next