Advertisement

June ಅಂತ್ಯದೊಳಗೆ 7ನೇ ವೇತನ ಆಯೋಗ ಜಾರಿ ಮಾಡದಿದ್ರೆ ಹೋರಾಟ: ಸಿ.ಎಸ್.ಷಡಾಕ್ಷರಿ

08:52 PM Jun 16, 2024 | Team Udayavani |

ಲಿಂಗಸುಗೂರು: ಏಳನೇ ವೇತನ ಆಯೋಗ ವರದಿಯನ್ನು ಯಥಾವತ್ತಾಗಿ ಈ ತಿಂಗಳು ಅಂತ್ಯದೊಳಗೆ ಸರಕಾರ ಜಾರಿ ಮಾಡದಿದ್ದರೆ ಮುಂದಿನ ಹೋರಾಟಕ್ಕೆ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ ಹೇಳಿದರು.

Advertisement

ರವಿವಾರ ಸರಕಾರಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕು ಶಾಖೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿ 2022ರ ಜುಲೈನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸು ಜಾರಿ ಆಗಬೇಕಿತ್ತು. ಶೇ.40 ಮೂಲ ವೇತನ ಹೆಚ್ಚಿಸಬೇಕೆಂಬ ಬೇಡಿಕೆಗೆ ಸರ್ಕಾರ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ಮಾತ್ರ ಹೆಚ್ಚಿಸಿತ್ತು. ಈಗಿನ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ 7ನೇ ವೇತನ ಆಯೋಗ ಮತ್ತೆ ಸಾಧಕ ಬಾಧಕ ಅಧ್ಯಯನ ನಡೆಸಿ ಕಳೆದ ಮಾರ್ಚ್‌ನಲ್ಲೇ ಹಣಕಾಸು ಸಚಿವರಾದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿ ನೀಡಿದೆ ಎಂದರು.

ಆದರೆ, ಅಂದಿನಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ವರದಿ ಬಗ್ಗೆ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಆಯೋಗವು ಮೂಲ ವೇತನದ ಶೇಕಡಾ 27.5ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ಅದನ್ನು ಯಥಾವತ್ತಾಗಿ ಮಾಸಾಂತ್ಯದೊಳಗೆ ಜಾರಿಗೊಳಿಸಬೇಕು. ಸರಕಾರ ಉದಾಸೀನ ಮಾಡಿದರೆ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂದಿನ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದರು.

ಕಾಂಗ್ರೆಸ್ ಪಕ್ಷವು‌ ಚುನಾವಣಾ ಪ್ರಣಾಳಿಕೆಯಲ್ಲೇ ಹಳೆ ಪಿಂಚಣಿ ವ್ಯವಸ್ಥೆ‌ ಮರು ಜಾರಿ ಬಗ್ಗೆ ಭರವಸೆ ನೀಡಿತ್ತು.ಸರ್ಕಾರ ಎಲ್ಲಾ ಭಾಗ್ಯಗಳ ನೀಡಿದಂತೆ ಸರ್ಕಾರಿ‌ ನೌಕರರಿಗೂ 7ನೇ ವೇತನ ಹಾಗೂ ಹಳೆ ಪಿಂಚಣಿ ವ್ಯವಸ್ಥೆ‌ಭಾಗ್ಯ ನೀಡಬೇಕು. ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಬೇಕೆಂದರು.

ಸಂಘ ಒಗ್ಗಟ್ಟಿನ ಶಕ್ತಿಯಿಂದಲೇ ಕಳೆದ ಸರಕಾರದ ಅವಧಿಯಲ್ಲಿ ನೌಕರರ ಹಿತದೃಷ್ಟಿಯಿಂದ 25 ಸರಕಾರಿ ಆದೇಶಗಳು ಜಾರಿಯಾಗಿವೆ 2006 ಏ.1ರನಂತರ ಸರ್ಕಾರಿ ಸೇವೆಗೆ ಸೇರ್ಪಡೆಯಾದವರ ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕೆಂಬುದು ನಮ್ಮ ಬೇಡಿಕೆ.ಈ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, 11,366 ನೌಕರರ ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸುವ ಕೆಲಸವಾಗಿದೆ ಎಂದರು.

Advertisement

2.60 ಲಕ್ಷ ಹುದ್ದೆಗಳು ಖಾಲಿ ;
ರಾಜ್ಯದ ಸರಕಾರಿ ಆಡಳಿತ ವ್ಯವಸ್ಥೆಯಲ್ಲಿ ಮಂಜೂರಾಗಿರುವ 7 ಲಕ್ಷ ಕಾಯಂ ಹುದ್ದೆಗಳ ಪೈಕಿ 2.6 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡದೇ ಹಾಗೇ ಉಳಿಸಲಾಗಿದೆ ಇದರಿಂದ ಒತ್ತಡದ ನಡುವೆಯೂ ನೌಕರರು ಮಾಡಿದ ಕೆಲಸದಿಂದಾಗಿ ಅಭಿವೃದ್ಧಿಯಲ್ಲಿ ರಾಜ್ಯ 5ನೇ ಸ್ಥಾನದಲ್ಲಿದೆ.

ಗೃಹ ಮತ್ತಿತರ ಕೆಲವು ಇಲಾಖೆಗಳಲ್ಲಿ ಆಗಾಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುತ್ತದೆ. ಆದರೆ, ಶಿಕ್ಷಣ, ಆರೋಗ್ಯ, ಆರ್ ಡಿಪಿಆರ್, ಆರ್ಥಿಕ ಇಲಾಖೆಗಳಲ್ಲಿ ಕಾಲ ಕಾಲಕ್ಕೆ ನೇಮಕಾತಿ ನಡೆಯದ ಕಾರಣ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಇವುಗಳಿಗೆ ತಕ್ಷಣ ನೇಮಕ ಆಗಬೇಕೆಂದರು.

ನಾನು ಸಂಘದ ರಾಜ್ಯಾಧ್ಯಕ್ಷನಾದ ಮೇಲೆ ಸರಕಾರಿ ನೌಕರರ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜನೆ ಮಾಡಿ ಈವರೆಗೂ 30 ಸಾವಿರ ಮಕ್ಕಳಿಗೆ ತಲಾ ಒಂದು ಸಾವಿರ ರುಪಾಯಿ ನೀಡಿ ಪ್ರೋತ್ಸಾಹ ನೀಡಲಾಗಿದೆ.ಈ ವರ್ಷ ರಾಯಚೂರು ಜಿಲ್ಲೆಯ 110 ವಿದ್ಯಾರ್ಥಿಗಳು ಸೇರಿ ರಾಜ್ಯದಲ್ಲಿ 8 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಸರಕಾರಿ ನೌಕರರು ಕೇವಲ ಸರಕಾರಿ ಸೇವೆಯಲ್ಲದೆ ರಾಜ್ಯದಲ್ಲಿ ಸಂಕಷ್ಟ ಎದುರಾದಾಗ ಸ್ಪಂದಿಸುವ ಕೆಲಸ ಮಾಡಿದೆ ಕೋವಿಡ್ ಸಂದರ್ಭದಲ್ಲಿ 240 ಕೋಟಿ ರೂ.ಪ್ರವಾಹ ಬಂದ ಸಂದರ್ಭದಲ್ಲಿ 180 ಕೋಟಿ ರೂಪಾಯಿ ಸೇರಿದಂತೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ದೇಣಿಗೆ ನೀಡಿದ್ದೇವೆ ಎಂದರು.

ಸಮಾರಂಭ ಉದ್ಘಾಟಿಸಿ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಮಾತನಾಡಿ, ನ್ಯಾಯಾಂಗ ಕಾರ್ಯಾಂಗ ಸಮಾಜದ ಎರಡು ಕಣ್ಣುಗಳಿದ್ದಂತೆ. ಸರಕಾರಿ ನೌಕರರು ತಮ್ಮ 35 ವರ್ಷಗಳ ಸರಕಾರಿ ಸೇವೆಯಲ್ಲಿ ಮಾಡಿದ ಪುಣ್ಯದ ಕೆಲಸಗಳೇ ನಿವೃತ್ತಿ ನಂತರದ ಜೀವನ ಸುಖಕರವಾಗುತ್ತದೆ.ನಿವೃತ್ತ ನಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಈ ವೇಳೆ ನಿವೃತ್ತಯಾದ ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ, ಮಾನವಿ ತಾಲೂಕು ಮಾಜಿ ಅಧ್ಯಕ್ಷ ಶ್ರೀಶೈಲಗೌಡ,ಸಿರವಾರ ತಾಲೂಕು ಮಾಜಿ ಅಧ್ಯಕ್ಷ ಅಯ್ಯನಗೌಡ ಏರಡ್ಡಿ ಸೇರಿದಂತೆ ನಿವೃತ್ತ ನೌಕರರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಪ್ರಭಾರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ,ತಾಲೂಕಾಧ್ಯಕ್ಷ ಹಾಜಿಬಾಬು ಕಲ್ಯಾಣಿ,ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ಚಂದ್ರಶೇಖರ ಕುಂಬಾರ, ತಾ.ಪಂ ಇಒ ಅಮರೇಶ ಯಾದವ್,ಬಿಇಒ ಹುಂಬಣ್ಣ ರಾಠೋಡ್, ವೈದ್ಯಾಧಿಕಾರಿ ಡಾ.ರುದ್ರಗೌಡ,ಚಂದ್ರಶೇಖರ ಹಿರೇಮಠ, ಮಲ್ಲಯ್ಯ ಮುರಾರಿ,ಮಹಾಂತೇಶ ಬಿರಾದಾರ,ಶರಣಪ್ಪ ಸಾಹುಕಾರ,ರಾಮಕೃಷ್ಣ, ಚಾಂದಪಾಶಾ,ಮಂಜುನಾಥ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next