Advertisement

ಚುನಾವಣಾಯುಕ್ತರ ಅವಧಿ ಕೊನೆ: ಇನ್ನೂ ಆಗದ ನೇಮಕ

12:22 AM Jun 23, 2024 | Team Udayavani |

ಬೆಂಗಳೂರು: ರಾಜ್ಯ ಚುನಾವಣ ಆಯೋಗದ ಆಯುಕ್ತ ಡಾ| ಬಿ. ಬಸವರಾಜು ಅಧಿಕಾರವಧಿ ಜೂ. 23ರಂದು ಕೊನೆಗೊಳ್ಳಲಿದೆ. ಆದರೆ ಈವರೆಗೆ ನೂತನ ಆಯುಕ್ತರ ನೇಮಕ ಆಗಿಲ್ಲ.

Advertisement

ನಿಯಮದಂತೆ ಹಾಲಿ ಆಯುಕ್ತರ ಅವಧಿ ಮುಗಿಯುವ ಕೆಲವು ದಿನಗಳ ಮುಂಚಿತವಾಗಿ ನೂತನ ಆಯುಕ್ತರ ನೇಮಕಕ್ಕೆ ಪ್ರಸ್ತಾವನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಮುಖ್ಯಮಂತ್ರಿಗೆ ಕಳುಹಿಸಿಕೊಡಬೇಕು. ಬಳಿಕ ಅದನ್ನು ರಾಜ್ಯಪಾಲರು ಅನುಮೋದಿಸಿ ನೇಮಕಾತಿ ಆದೇಶ ಹೊರಡಿಸುತ್ತಾರೆ. ಇಲ್ಲಿಯವರೆಗೆ ಪ್ರಕ್ರಿಯೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಚುನಾವಣ ಆಯುಕ್ತರ ಅಧಿಕಾರವಧಿ 5 ವರ್ಷ ಇರುತ್ತದೆ. ಈಗ ಹಾಲಿ ಆಯುಕ್ತ ಡಾ| ಬಿ.ಬಸವರಾಜು ಅವಧಿ ಜೂನ್‌ 23ಕ್ಕೆ ಕೊನೆಗಳ್ಳಲಿದೆ. ಡಾ| ಬಸವರಾಜು ತಮ್ಮ ಅವಧಿಯಲ್ಲಿ 2020ರಲ್ಲಿ ಗ್ರಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ, 2021, 2022 ಹಾಗೂ 2023ರಲ್ಲಿ 7 ನಗರಪಾಲಿಕೆಗಳು ಸೇರಿದಂತೆ 100ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ 1,485 ಸ್ಥಾನಗಳಿಗೆ ಚುನಾವಣೆ ನಡೆಸಿದ್ದಾರೆ. ಬಿಬಿಎಂಪಿ ಹಾಗೂ ಜಿ.ಪಂ., ತಾ.ಪಂ. ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅದು ನನೆಗುದಿಗೆ ಬಿದ್ದಿದೆ.

ನಿವೃತ್ತ ಐಎಎಸ್‌ ನೇಮಕ
ಸಾಮಾನ್ಯವಾಗಿ ಕರ್ನಾಟಕದ ಮೂಲದ ನಿವೃತ್ತ ಐಎಎಸ್‌ ಅಧಿಕಾರಿಗಳನ್ನು ರಾಜ್ಯ ಚುನಾವಣ ಆಯುಕ್ತರನ್ನಾಗಿ ನೇಮಿಸಲಾಗುತ್ತದೆ. ಅವಧಿ ಮುಕ್ತಾಯಗೊಳ್ಳುವುದೊರಳಗೆ ಮತ್ತೂಬ್ಬರ ನೇಮಕವಾಗುತ್ತದೆ. ಆದರೆ ಕೆಲವೊಮ್ಮೆ ಆಯುಕ್ತರ ಹುದ್ದೆಯನ್ನು ಖಾಲಿ ಇಟ್ಟದ್ದೂ ಇದೆ. ಈ ಹಿಂದಿನ ಆಯುಕ್ತರ ಅವಧಿ ಮುಗಿದು 5 ತಿಂಗಳ ಬಳಿಕ ಡಾ| ಬಸವರಾಜು ಅವರನ್ನು ಸರಕಾರ ನೇಮಿಸಿತ್ತು. ಅವರಿಲ್ಲದೆ ದೈನಂದಿನ ಆಡಳಿತಾತ್ಮಕ ವಿಷಯಗಳನ್ನು ಆಯೋಗದ ಕಾರ್ಯದರ್ಶಿ ನಿರ್ವಹಿಸಬಹುದು. ಆದರೆ ಚುನಾವಣೆಗಳ ಘೋಷಣೆ ಮತ್ತು ನಿರ್ವಹಣೆಗೆ ಆಯುಕ್ತರು ಇರಬೇಕು.

Advertisement

Udayavani is now on Telegram. Click here to join our channel and stay updated with the latest news.

Next