ಶೃಂಗೇರಿ: 100 ಬೆಡ್ ಆಸ್ಪತ್ರೆಯ ಬೇಡಿಕೆಗಾಗಿ ಆಸ್ಪತ್ರೆ ಹೋರಾಟ ಸಮಿತಿಯು ಶುಕ್ರವಾರದಿಂದ ಸಂತೆ ಮಾರುಕಟ್ಟೆ ಬಳಿ ಅಹೋರಾತ್ರಿ ಧರಣಿ ಆರಂಭಿಸಿದೆ. ಪಕ್ಷಾತೀತವಾಗಿ ಆರಂಭಿಸಿರುವ ಧರಣಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.ಸರಕಾರ ನೂರು ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿದೆ. ನಮಗೆ ಭರವಸೆ ಬೇಡ.
ತಕ್ಷಣವೇ ಆದೇಶ ಪತ್ರ ನೀಡಬೇಕು ಎಂದು ಧರಣಿ ಆರಂಭಿಸಿದ್ದಾರೆ. ಈ ಮೊದಲು ಅ ಧಿಕಾರಿಗಳು, ಆರೋಗ್ಯ ಮಂತ್ರಿ, ಮುಖ್ಯಮಂತ್ರಿ ಸಹಿತ ಎಲ್ಲರೂ ಭರವಸೆ ನೀಡಿದ್ದಾರೆಯೇ ಹೊರತಾಗಿ ಆಸ್ಪತ್ರೆ ಜಾಗ ಮಂಜೂರಾತಿ ಮಾತ್ರ ಆಗಿಲ್ಲ. ಸರಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಖ್ಯಮಂತ್ರಿಗಳ ನ.27 ರ ಕೊಪ್ಪ ಭೇಟಿ ಸಂದರ್ಭದಲ್ಲಿ ಕೊಪ್ಪ ಚಲೋ ನಡೆಸಲಾಗುತ್ತದೆ ಎಂದು ಸಮಿತಿಯವರು ಎಚ್ಚರಿಸಿದ್ದಾರೆ.
ಧರಣಿ ನಿರತರೊಂದಿಗೆ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಸರಕಾರ ಸಕರಾತ್ಮಕವಾಗಿ ಸ್ಪಂದಿಸಿದ್ದು, ನಿಮ್ಮ ಧರಣಿಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಡಿ. 20 ರೊಳಗೆ ಸರಕಾರದಿಂದ ಮಂಜೂರಾತಿ ಖಚಿತವಾಗಿ ಆಗಲಿದೆ ಎಂದರು. ಹೋರಾಟ ಸಮಿತಿಯ ರಂಜಿತ್ ಮಾತನಾಡಿ, 100 ಬೆಡ್ ಆಸ್ಪತ್ರೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ, ಸರಕಾರ ಇನ್ನೂ ಭರವಸೆ ನೀಡುತ್ತಿದೆ. 2007 ರಲ್ಲಿ ಆಸ್ಪತ್ರೆ ಮೇಲ್ದರ್ಜಗೆ ಏರಿಸಲು ಮಂಜೂರಾತಿ ನೀಡಲಾಗಿದೆ. ಸ್ಥಳಾವಕಾಶದ ನೆಪವಿಟ್ಟುಕೊಂಡು ಆಸ್ಪತ್ರೆ ನಿರ್ಮಾಣ ಮಾತ್ರ ಆಗಿಲ್ಲ ಎಂದು ದೂರಿದರು.
ಇದೇ ಸಂದರ್ಭದಲ್ಲಿ ಧರಣಿ ನಿರತರು ಬೆಂಬಲ ಕೋರಿ, ಸಾಮೂಹಿಕ ಭಿಕ್ಷಾಟನೆ ನಡೆಸಿದರು. ಸಾರ್ವಜನಿಕರು ಧವಸ ಧಾನ್ಯ, ತರಕಾರಿ ಮತ್ತಿತರ ವಸ್ತುವನ್ನು ದೇಣಿಗೆಯಾಗಿ ನೀಡಿದರು. ಧರಣಿಯಲ್ಲಿ ಆದರ್ಶ, ಅಭಿಲಾಷ್, ಪೃಥ್ವಿರಾಜ್, ಅನಿರುದ್ಧ ಮತ್ತಿತರರು ಇದ್ದರು.