ಕಾಸರಗೋಡು: ಜಿಲ್ಲೆಯಲ್ಲಿ ಪ್ರತಿ ವರ್ಷವೂ ಮಾರ್ಚ್ ತಿಂಗಳಾಗುತ್ತಿದ್ದಂತೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಕುಡಿಯಲು ನೀರಿಲ್ಲದೆ, ಕೃಷಿಗೂ ನೀರುಣಿಸಲು ಸಾಧ್ಯವಾಗದೆ ಜಿಲ್ಲೆಯ ಜನರು ಅನುಭವಿಸುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಇವುಗಳಿಗೆ ತಕ್ಕ ಮಟ್ಟಿಗೆ ಪರಿಹಾರವಾಗಿ ತೋಡು, ನದಿಗಳಿಗೆ ನಿರ್ಮಿಸುವ ಕಟ್ಟಗಳು (ಒಡ್ಡು) ಸಹಕಾರಿ ಯಾಗುತ್ತವೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಈಗಾಗಲೇ ಕಟ್ಟಗಳು ನಿರ್ಮಾಣವಾಗಿವೆ. ಇನ್ನೂ ಕೆಲವೆಡೆ ನಿರ್ಮಾಣ ಹಂತದಲ್ಲಿವೆೆ. ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿನ ಕಟ್ಟಗಳು ಜಿಲ್ಲೆಯಲ್ಲಿ ಜಲ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಟ್ಟಗಳು ಜಲ ಸಬಲೀಕರಣದ ಮಿತ್ರನಾಗಿ ಕಾರ್ಯನಿರ್ವಹಿಸುತ್ತಿವೆ.
ಕಾಸರಗೋಡು ಜಿಲ್ಲೆಯ ಕುಂಬಾxಜೆ, ಎಣ್ಮಕಜೆ, ಕಾರಡ್ಕ, ದೇಲಂಪಾಡಿ, ಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯ ಅನೇಕ ತೋಡುಗಳಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸುವ ಕಟ್ಟಗಳನ್ನು ನಿರ್ಮಿಸಲಾಗುತ್ತಿದೆ. ನೀರಿನ ಕಟ್ಟಗಳ ನಿರ್ಮಾಣದಿಂದ ಪ್ರಾದೇಶಿಕವಾಗಿ ಜಲ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಕುಂಬಾxಜೆ ಗ್ರಾ. ಪಂ.ನ ಏತಡ್ಕ, ಕೀರಿಕ್ಕಾಡು, ಬೇರ್ಕಡವು, ನೇರಪ್ಪಾಡಿ, ಕೂಟೇಲು, ಬಲೆಕ್ಕಳ, ತಲೆಬೈಲು, ಮವ್ವಾರು, ಗೋಸಾಡ, ಮುಕ್ಕೂರು, ಉಬ್ರಂಗಳ, ಮೊಟ್ಟೆಕುಂಜ, ಪಾತೇರಿ, ಮಲತ್ತಿಲ, ಬೆಳ್ಳಿಗೆ, ಕೊರೆಕ್ಕಾನ, ಉಪ್ಪಂಗಳ, ಅಣ್ಣಡ್ಕ, ಕುಂಬಾxಜೆ ಸೇರಿದಂತೆ ಸುಮಾರು 68 ಕಡೆಗಳಲ್ಲಿ ತೋಡಿಗೆ ಅಡ್ಡವಾಗಿ ನೀರಿನ ಕಟ್ಟಗಳಿವೆ. ಈ ಕಟ್ಟಗಳು ಸುಮಾರು 3271 ಎಕರೆ ಕೃಷಿ ಭೂಮಿಗೆ ಜಲ ಪೂರೈಕೆ ಮಾಡುತ್ತವೆ. ಸುಮಾರು 37.75 ಕಿಲೋಮೀಟರ್ ಉದ್ದದ ತೋಡುಗಳಿಂದ ಈ ಪ್ರದೇಶದ ಶೇಕಡಾ 43ರಷ್ಟು ಶುಷ್ಕ ಭೂಮಿಗೆ ನೀರುಣಿಸಲಾಗುತ್ತಿದೆ.
ಜಿಲ್ಲೆಯ ಕಾನತ್ತೂರು ಪರಿಸರದ ಕಾಲಿಪಳ್ಳ ಹಾಗೂ ಕೂಡಾಲ ತೋಡುಗಳಿಗೆ ಮುನ್ನಾಡ್ ಪೀಪಲ್ಸ್ ಕಾಲೇಜಿನ ಸುಮಾರು 90 ಮಂದಿ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಯಂತೆ ನೀರಿನ ಕಟ್ಟಗಳನ್ನು ನಿರ್ಮಿಸಿದ್ದಾರೆ. ಕಾಸರ ಗೋಡು ಜಿಲ್ಲೆಯ ಅನೇಕ ಕೃಷಿ ಭೂಮಿ ಪ್ರತೀ ವರ್ಷವೂ ಜಲಕ್ಷಾಮದ ಭೀತಿ ಎದುರಿಸುತ್ತದೆ. ಪ್ರತೀ ವರ್ಷವೂ ಮಾರ್ಚ್ ಕೊನೆಯ ವಾರದಿಂದ 2 ತಿಂಗಳು ಬಿಸಿಲಿನಿಂದ ಕೃಷಿಯನ್ನು ರಕ್ಷಿಸುವುದು ಕಾಸರಗೋಡಿನ ಕೃಷಿಕರಿಗೆ ಸವಾಲಾಗುತ್ತಿದೆ. ಈ ಸಮಸ್ಯೆಯ ಪರಿಹಾರವಾಗಿ ಜಲ ಸಬಲೀಕರಣದ ನೀರಿನ ಕಟ್ಟ (ಒಡ್ಡು)ಗಳು ಬಹಳಷ್ಟು ಪರಿಣಾಮಕಾರಿಯಾಗಿವೆ. ಕೇರಳ ಸರಕಾರವೂ ಕೂಡಾ ವಿವಿಧ ಗ್ರಾ. ಪಂ.ಗಳಲ್ಲಿ ಹರಿಯುವ ತೋಡು ಹಾಗೂ ಹೊಳೆಗಳಿಗೆ ಸಿಮೆಂಟ್ ಬಳಸದೆ ಸಾಂಪ್ರದಾ ಯಿಕ ರೀತಿಯಲ್ಲಿ ನೀರಿನ ಕಟ್ಟಗಳನ್ನು ನಿರ್ಮಿಸಲು ನೂತನ ಯೋಜನೆ ರೂಪಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಈ ನೀರಿನ ಕಟ್ಟಗಳನ್ನು ಮಳೆಗಾಲ ಆರಂಭ ವಾಗುವ ಸಂದರ್ಭದಲ್ಲಿ ತೆರವುಗೊಳಿಸಿ ಮಳೆಗಾಲ ನೀರಿನ ಹರಿವಿಗೆ ಅವಕಾಶ ನೀಡಬೇಕು. ಕುಂಬಾxಜೆ ಗ್ರಾ. ಪಂ.ನ ಬೇರ್ಕಡವಿನಲ್ಲಿ ನಿರ್ಮಾಣವಾಗುವ ಕಟ್ಟಗಳು ಸುಮಾರು 100 ಅಡಿ ಉದ್ದವಿದೆ. 13 ಅಡಿ ಎತ್ತರವಿದೆ. ಇದರಲ್ಲಿ ಪ್ರತೀ ವರ್ಷ ಸುಮಾರು 2 ಕೋಟಿ ಲೀ. ನೀರನ್ನು ಸಂಗ್ರಹಿಸಿ ಸುಮಾರು 4 ಕಿ. ಮೀ. ವಿಸ್ತೀರ್ಣದ ಕೃಷಿಗೆ ಬಳಸಬಹುದು. ಕಟ್ಟ ನಿರ್ಮಿಸುವುದರಿಂದ ಸುಮಾರು 1.5 ಕಿ.ಮೀ.ವ್ಯಾಪ್ತಿಯಲ್ಲಿ ನೀರು ಸಂಗ್ರಹವಾಗುತ್ತದೆ. ಈ ಪ್ರದೇಶದ 11 ಮಂದಿ ಕೃಷಿಕರು ಸುಮಾರು 1.5 ಲಕ್ಷ ವೆಚ್ಚದಲ್ಲಿ ನೀರಿನ ಕಟ್ಟಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ಕೆಲವು ಗ್ರಾ. ಪಂ.ನಲ್ಲೂ ಕಟ್ಟಗಳ ನಿರ್ಮಾಣ ಆಗುತ್ತಿದೆ. ಆದರೆ ಬಹುತೇಕವಾಗಿ ಖಾಸಗಿಯಾಗಿ ನಡೆಯುತ್ತಿದೆ. ಇಂದಿನ ಕಾರ್ಮಿಕರ ದುಬಾರಿ ಸಂಬಳ, ಕಚ್ಚಾ ವಸ್ತುಗಳ ಕೊರತೆ, ಕೃಷಿಕರ ನಡುವಿನ ಒಗ್ಗಟ್ಟಿನ ಕೊರತೆ, ನುರಿತ ಕಾರ್ಮಿಕರ ಕೊರತೆಯಿಂದಾಗಿ ಕಟ್ಟಗಳ ನಿರ್ಮಾಣ ಕಾರ್ಯ ಕಡಿಮೆಯಾಗುತ್ತಿದೆ.
ಗ್ರಾಮೀಣ ಪ್ರದೇಶದ ಪರಿಕರಗಳನ್ನು ಉಪ ಯೋಗಿಸಿ, ನಡೆಸುವ ನೀರಿನ ಕಟ್ಟಗಳ ನಿರ್ವಹಣ ವೆಚ್ಚ ಕಡಿಮೆ. ಆದರೆ ಕಾರ್ಮಿಕರಿಗೆ ನೈಪುಣ್ಯತೆ ಬೇಕು. ಪ್ರಾದೇಶಿಕವಾಗಿ ದೊರೆಯುವ ಉಂಡೆಕಲ್ಲುಗಳು, ಅಂಟುಮಣ್ಣು ಪ್ರಮುಖ ಕಚ್ಚಾ ವಸ್ತುಗಳು. ಈ ಕಟ್ಟಗಳನ್ನು ಹಂತಹಂತವಾಗಿ ಗಟ್ಟಿಯಾಗಿ ನಿರ್ಮಿಸ ಬೇಕು. ಕಾಸರಗೋಡಿನ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಂಗ್ರಹದ ಹಿನ್ನೆಲೆಯಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ನೀರಿನ ಕಟ್ಟಗಳನ್ನು ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲೂ ಜಿ.ಪಂ. ಆಸಕ್ತಿ ವಹಿಸಿ ಸಾಂಪ್ರದಾ ಯಿಕ ರೀತಿಯಲ್ಲಿ ನಿರ್ಮಿಸಲು ಯೋಜನೆಗಳನ್ನು ರೂಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಕಾಸರಗೋಡು ಜಿಲ್ಲೆಯಲ್ಲಿ ಹಿಂದೆ 500ರಷ್ಟು ನೀರಿನ ಕಟ್ಟಗಳಿತ್ತು. ಆದರೆ ಈಗ ಅದು ಕಾರ್ಮಿಕರ ಕೊರತೆಯಿಂದ 150ಕ್ಕೆ ಇಳಿದಿದೆ. ಬೈಹುಲ್ಲು, ಪ್ಲಾಸ್ಟಿಕ್ ಗೋಣಿ, ಮಣ್ಣು ಹಾಗೂ ಕಲ್ಲುಗಳನ್ನು ಉಪಯೋಗಿಸಿ ತೋಡಿಗೆ ಅಡ್ಡವಾಗಿ ಕಟ್ಟಗಳನ್ನು ನಿರ್ಮಿಸಲಾಗುವುದು. ಇಂತಹ ಕಟ್ಟಗಳನ್ನು ಪ್ಲಾಸ್ಟಿಕ್ ಗೋಣಿಯಲ್ಲಿ ಮರಳು ತುಂಬಿಸಿ, ಅದನ್ನು ಹೊಳೆ ಅಥವಾ ತೋಡಿಗೆ ಅಡ್ಡವಾಗಿ ಇರಿಸಿ ಕಟ್ಟಗಳನ್ನು ಕಟ್ಟಲಾಗುವುದು. ಕೆಲವು ಕಡೆಗಳಲ್ಲಿ ಸಿಮೆಂಟ್ ಕಂಬಗಳನ್ನು ಮಾಡಿ ಅದಕ್ಕೆ ಮರದ ಹಲಗೆಯನ್ನು ಅಡ್ಡವಾಗಿ ಇರಿಸಿ ಕಟ್ಟಗಳನ್ನು ಕಟ್ಟಲಾಗುತ್ತಿದೆ. ಆದರೆ ಇವುಗಳು ಸಂಪೂರ್ಣವಾಗಿ ಫಲಪ್ರದವಾಗಿಲ್ಲ ಎನ್ನಲಾಗಿದೆ.
ಒಡ್ಡುಗಳಿಂದ ಜಲಮಟ್ಟ ಏರಿಕೆ
ತೋಡಿಗೆ ನೀರಿನ ಒಡ್ಡುಗಳನ್ನು ನಿರ್ಮಿಸುವುದರಿಂದ ಆ ಪ್ರದೇಶದ ಸುಮಾರು 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಬಹಳಷ್ಟು ಏರಿಕೆಯಾಗುತ್ತದೆ. ಕೆರೆ, ಬಾವಿ, ಹಳ್ಳಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತದೆ.
– ಚಂದ್ರಶೇಖರ ಏತಡ್ಕ,
ಖ್ಯಾತ ಜಲತಜ್ಞ.