ನವದೆಹಲಿ: ಇತ್ತೀಚೆಗೆ ನ್ಯಾಯಾಧೀಶರನ್ನೇ ಅಣಕಿಸುವುದು, ಅವರನ್ನೇ ಬೆದರಿಸುವುದು ಹೆಚ್ಚಾಗಿದೆ. ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ಜಿಲ್ಲಾ ನ್ಯಾಯಾಧೀಶರಿಗಂತೂ ಭದ್ರತೆಯೇ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಮದ್ರಾಸ್ ಉಚ್ಚ ನ್ಯಾಯಾಲಯ ವಕೀಲರೊಬ್ಬರಿಗೆ 15 ದಿನಗಳ ಜೈಲುವಾಸ ವಿಧಿಸಿದ್ದನ್ನು ಎತ್ತಿಹಿಡಿದ ಬಳಿಕ ನ್ಯಾ.ಡಿ.ವೈ.ಚಂದ್ರಚೂಡ್ ಮೇಲಿನಂತೆ ನುಡಿದರು.
ನ್ಯಾಯಮೂರ್ತಿಗಳು ಎಷ್ಟು ಗಟ್ಟಿಯಾಗಿರುತ್ತಾರೋ, ಅವರನ್ನು ನಿಂದಿಸುವ ಪ್ರಕರಣಗಳೂ ಅಷ್ಟೇ ಕಡಿಮೆಯಾಗುತ್ತವೆ. ಪ್ರಸ್ತುತ ಜೈಲುಶಿಕ್ಷೆಗೊಳಗಾಗಿರುವ ವಕೀಲ ನ್ಯಾಯವ್ಯವಸ್ಥೆಗೇ ಒಂದು ಕಲೆಯಿದ್ದಂತೆ. ಅವರನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ನ್ಯಾ.ಚಂದ್ರಚೂಡ್ ಹೇಳಿದರು. ಮಾತ್ರವಲ್ಲ ವಕೀಲನನ್ನು ಬಂಧಿಸಲು ಹೈಕೋರ್ಟ್ ನೀಡಿದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದರು.
ಈ ವಕೀಲನ ವಿರುದ್ಧ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಾಮೀನುರಹಿತ ವಾರಂಟ್ ಜಾರಿ ಮಾಡಿದ್ದರು. ಸನಿಹದ ಟೀ ಅಂಗಡಿಯೊಂದರಲ್ಲಿ ಈ ವಕೀಲರು ಕುಳಿತಿದ್ದಾಗ ಅವರಿಗೆ ವಾರಂಟ್ ನೀಡಲು ಯತ್ನಿಸಲಾಗಿತ್ತು.
ಆದರೆ 100 ವಕೀಲರು ಅವರನ್ನು ಸುತ್ತುವರಿದು ವಾರೆಂಟ್ ನೀಡದಂತೆ ತಡೆದರು. ಅದಾದ ಮೇಲೆ ನಿರ್ದಿಷ್ಟ ವಕೀಲ, ನ್ಯಾಯಮೂರ್ತಿ ಪಿ.ಟಿ.ಆಶಾ ವಿರುದ್ಧವೇ ಆರೋಪ ಮಾಡಿದರು. ಇದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ನ್ಯಾ.ಚಂದ್ರಚೂಡ್ ಹೇಳಿದ್ದಾರೆ.