Advertisement

ಬಲಿಷ್ಠವಾಗಿದೆ ದೇಶದ ಅರ್ಥ ವ್ಯವಸ್ಥೆ

06:00 AM Aug 16, 2018 | |

ನವದೆಹಲಿ: ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಅವಧಿಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ದೇಶದ ಅರ್ಥ ವ್ಯವಸ್ಥೆ ಬಲಿಷ್ಠವಾಗಿದೆ. ಈ ಬೃಹತ್‌ ವ್ಯವಸ್ಥೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಕೆಂಪು ಕೋಟೆಯಿಂದ ಬುಧವಾರ 72ನೇ ಸ್ವಾತಂತ್ರ್ಯ ದಿನ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಮಾಡಿದ ಬಳಿಕ ಅವರು ಮಾತಾಡಿದರು. “ಕೆಲ ವರ್ಷಗಳ ಹಿಂದೆ ಭಾರತ, ಜಗತ್ತಿನ ಐದು ದುರ್ಬಲ ಆರ್ಥಿಕ ರಾಷ್ಟ್ರಗಳಲ್ಲೊಂದಾಗಿತ್ತು. ಆದ ರೀಗ ಮಲ್ಟಿ ಟ್ರಿಲಿಯನ್‌ ಡಾಲರ್‌ ಹೂಡಿಕೆಯ ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ. ಈಗ ಭಾರತ ದೇಶ  ಸುಧಾರಣೆ, ನಿರ್ವಹಣೆ ಹಾಗೂ ಪರಿವರ್ತನೆಗಳ ರಾಷ್ಟ್ರವಾಗಿ ಮಾರ್ಪಟ್ಟಿದೆ’ ಎಂದಿದ್ದಾರೆ. 

Advertisement

ಅತ್ಯಾಚಾರಿಗಳಿಗೆ ಎಚ್ಚರಿಕೆ: ಅತ್ಯಾಚಾರದಂಥ ಪಾತಕಕೃತ್ಯಗಳನ್ನು ಮಾಡುವವರಿಗೆ ತ್ವರಿತವಾಗಿ ಅತ್ಯುಗ್ರ ಶಿಕ್ಷೆಯನ್ನು ನೀಡಲು ಸರ್ಕಾರ ಕಟಿ ಬದ್ಧವಾಗಿದೆ. ಮಧ್ಯಪ್ರದೇಶದ ಕಂಠಿ ಜಿಲ್ಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿ ಕೊಂದವರಿಗೆ ಕೋರ್ಟ್‌ ಐದೇ ದಿನದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ನೀಡಿದೆ. ಕಾನೂನು ಅತ್ಯಂತ ಮಹತ್ವ ಮತ್ತು ಅಂತಿಮವಾದದ್ದು. ಅದನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದಿದ್ದಾರೆ. 

ಫ‌ಲಾನುಭವಿಗಳಿಗೇ ನೇರ ಸಂದಾಯ: ಈ ಬಾರಿಯ ಸ್ವಾತಂತ್ರ್ಯೋತ್ಸವದೊಂದಿಗೆ, ದೇಶವು ಪ್ರಾಮಾಣಿಕತೆಯ ಉತ್ಸವವನ್ನೂ ಆಚರಿಸುತ್ತಿದೆ. ಹಾಲಿ ಸರ್ಕಾರದ ಅವಧಿಯಲ್ಲಿ ದೆಹಲಿಯಲ್ಲಿ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿದ್ದವರನ್ನು ತಡೆಯಲಾಗಿದೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಆಗುತ್ತಿದ್ದ ಧಾನ್ಯಗಳ ಕಳ್ಳತನಕ್ಕೆ ತಡೆಯೊಡ್ಡಲಾಗಿದೆ. ಬಡವರಿಗೆ ಪಡಿತರದ ಜತೆಗೆ ಎಲ್‌ಪಿಜಿ, ಪಿಂಚಣಿ, ವಿದ್ಯಾರ್ಥಿ ವೇತನದಂತಹ ಉತ್ತಮ ಸೌಲಭ್ಯಗಳನ್ನು ನೇರವಾಗಿ ತಲುಪುವಂತೆ ಮಾಡಿ ಮದ್ಯವರ್ತಿಗಳಿಗೆ ಸೋರಿ ಹೋಗುತ್ತಿದ್ದ ಸುಮಾರು 90 ಸಾವಿರ ರೂ. ಹಣವನ್ನು ಉಳಿತಾಯ ಮಾಡಿದ್ದೇವೆ ಎಂದರು. 

ಕಾಳ ಧನಿಕರ ಬಿಡೆವು
ಕಾಳ ಧನಿಕರನ್ನು, ಉದ್ದೇಶ ಪೂರ್ವಕ ವಿತ್ತೀಯ ಮೋಸಗಾರರನ್ನು ಸರ್ಕಾರ ಸುಮ್ಮನೇ ಬಿಡುವುದಿಲ್ಲ ಎಂದಿದ್ದಾರೆ. ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿದ್ದರಿಂದ  2014ರಲ್ಲಿ 3.4 ರಿಂದ 4 ಕೋಟಿಯಷ್ಟಿದ್ದ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ 6.75 ಕೋಟಿಗೆ ಏರಿದೆ.  ಜಿಎಸ್‌ಟಿಯಿಂದಾಗಿ ನೇರ ತೆರಿಗೆದಾರರ ಸಂಖ್ಯೆ 70 ಲಕ್ಷದಿಂದ 1.16 ಕೋಟಿಗೆ ಮುಟ್ಟಿದೆ ಎಂದರು. 

ಪ್ರಧಾನಿಯ ಮೂರನೇ ಅತಿ ದೀರ್ಘ‌ ಭಾಷಣ
ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಾಡಿದ ಸ್ವಾತಂತ್ರ್ಯ ದಿನದ ಭಾಷಣ ಮೂರನೇ ಅತಿ ದೀರ್ಘಾವಧಿಯ ಭಾಷಣವಾಗಿದೆ. ಅವರು ಬೆಳಗ್ಗೆ 7.33ಕ್ಕೆ ತಮ್ಮ ಮಾತು ಆರಂಭಿಸಿ 8.55ಕ್ಕೆ ಮುಕ್ತಾಯಗೊಳಿಸಿದರು. ಅವರು ಒಟ್ಟು 80 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. 2016ರಲ್ಲಿ ಮೋದಿಯವರೇ ಮಾಡಿದ್ದ 96 ನಿಮಿಷಗಳ ಭಾಷಣ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 2015ರಲ್ಲಿ ಅವರು ಮಾಡಿದ್ದ 86 ನಿಮಿಷಗಳ ಭಾಷಣ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಕಳೆದ ವರ್ಷ ಅವರು 57 ನಿಮಿಷಗಳ ಕಾಲ ಮಾತನಾಡಿದ್ದರು. ಐದು ವರ್ಷಗಳಲ್ಲಿ ಅದು ಸ್ವಾತಂತ್ರ್ಯ ದಿನ ನಿಮಿತ್ತದ ಸಣ್ಣ ಅವಧಿಯ ಭಾಷಣ.  1947ರಲ್ಲಿ ಜವಾಹರ್‌ಲಾಲ್‌ ನೆಹರೂ 72 ನಿಮಿಷಗಳ ಕಾಲ ಮಾತನಾಡಿದ್ದು 2015ರ ವರೆಗೆ ದೀರ್ಘ‌ ಕಾಲದ ಭಾಷಣ ಮಾಡಿದ್ದು ದಾಖಲೆಯಾಗಿತ್ತು.

Advertisement

ಸಾಮಾಜಿಕ ನ್ಯಾಯಕ್ಕೆ ಆದ್ಯತೆ
ಆ.10ರಂದು ಮುಕ್ತಾಯಗೊಂಡ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಈಡೇರಿಸಲಾಗಿದೆ ಎಂದಿದ್ದಾರೆ. ಹೀಗಾಗಿ ಈ ಅಧಿವೇಶನವನ್ನು ಸಾಮಾಜಿಕ ನ್ಯಾಯಕ್ಕೆ ಮೀಸಲಾಗಿ ಇರಿಸಲಾಗಿತ್ತು ಎಂದಿದ್ದಾರೆ. ಮುಕ್ತಾಯಗೊಂಡ ಸಂಸತ್‌ ಅಧಿವೇಶನ ಸಾಮಾಜಿಕ ನ್ಯಾಯಕ್ಕಾಗಿಯೇ ಮೀಸಲಾಗಿ ಇರಿಸಲಾಗಿತ್ತು. ದಲಿತರು, ತುಳಿತಕ್ಕೊಳಗಾದವರು, ಮಹಿಳೆಯರು ಹೀಗೆ ಯಾರೇ ಇರಲಿ ಅವರ ನೋವಿಗೆ ಸರ್ಕಾರ ಸ್ಪಂದಿಸುತ್ತದೆ ಎಂದಿದ್ದಾರೆ ಪ್ರಧಾನಿ.

ಈ ಸರ್ಕಾರದಲ್ಲೇ ಹೆಚ್ಚು ಅಭಿವೃದ್ಧಿ
ಹಾಲಿ ಸರ್ಕಾರದ ಅವಧಿಯಲ್ಲಿಯೇ ದೇಶ ಹೆಚ್ಚು ಅಭಿವೃದ್ಧಿ ಸಾಧಿಸಿದೆ. ಹಿಂದಿನ ಯುಪಿಎ ಅವಧಿಯಲ್ಲಿ ಇದ್ದ ನೀತಿ ಗ್ರಹಣ ವಿಚಾರ ಈಗ ಇಲ್ಲ ಎಂದಿದ್ದಾರೆ ಪ್ರಧಾನಿ. 125 ಕೋಟಿ ಜನರು ನಿರ್ದಿಷ್ಟ ಗುರಿಯತ್ತ ಸಾಗುತ್ತಿದ್ದಾರೆ ಎಂದರೆ ಅದನ್ನು ತಡೆಯಲು ಸಾಧ್ಯವಿಲ್ಲ. 2014ರಲ್ಲಿ ದೇಶದ ಜನರು ಸರ್ಕಾರವನ್ನು ರಚಿಸುವಲ್ಲಿಯೇ ನಿಲ್ಲಲಿಲ್ಲ, ಅವರು ದೇಶ ಕಟ್ಟುವ ಕೆಲಸದಲ್ಲಿ ಕೈಜೋಡಿಸುತ್ತಾ ಬಂದಿದ್ದಾರೆ. ಅವರು ಅದನ್ನು ಮುಂದುವರಿಸಲಿದ್ದಾರೆ.’ ಎಂದರು. 

ಕೆಂಪು ಕೋಟೆಗೆ ಸಿಕ್ಕಿತು ಮಹಿಳಾ ಭದ್ರತೆ
ಪ್ರಸಕ್ತ ಸಾಲಿನ ಸ್ವಾತಂತ್ರ್ಯ ದಿನದ ಭದ್ರತಾ ವ್ಯವಸ್ಥೆಯ ವಿಶೇಷ ದೇಶದ ಮೊತ್ತ ಮೊದಲ ಸಂಪೂರ್ಣ ಮಹಿಳಾ ಭದ್ರತಾ ತಂಡ. ಮೂವತ್ತಾರು ಮಂದಿ ಸದಸ್ಯರಿರುವ ಸೆಷಲ್‌ ವೆಪನ್ಸ್‌ ಆ್ಯಂಡ್‌ ಟಾಕ್ಟಿಕ್ಸ್‌ (ಎಸ್‌ಡಬ್ಲೂಎಟಿ- ಸ್ವಾಟ್‌)ಕೆಂಪು ಕೋಟೆಯ ಆವರಣದಲ್ಲಿ ನಡೆದ ಕಾರ್ಯಕ್ರಮದ ಭದ್ರತೆ ಯ ಪ್ರಮುಖ ಉಸ್ತುವಾರಿ ವಹಿಸಿತ್ತು. ದೆಹಲಿ ಪೊಲೀಸರ ವಿಶೇಷ ವಿಭಾ ಗದ ವ್ಯಾಪ್ತಿಯಲ್ಲಿ ಬರುವ ಈ ತಂಡಕ್ಕೆ ನ್ಯಾಷನಲ್‌ ಸೆಕ್ಯುರಿಟಿ ಗಾರ್ಡ್ಸ್‌ (ಎನ್‌ಎಸ್‌ಜಿ) ಉಗ್ರ ನಿಗ್ರಹ ವ್ಯವಸ್ಥೆ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ತರಬೇತಿ ನೀಡಿದೆ. 

ಏನಿದು ನೀಲಕುರಿಂಜಿ ಪುಷ್ಪ?
ಪ್ರಧಾನಿ ಮೋದಿ ತಮ್ಮ ಭಾಷಣದ ಆರಂಭದಲ್ಲಿ 12 ವರ್ಷಗಳಿಗೆ ಒಂದು ಬಾರಿ ಅರಳುವ ನೀಲಕುರಿಂಜಿ ಪುಷ್ಪದ ಬಗ್ಗೆ ಉಲ್ಲೇಖೀಸಿದ್ದಾರೆ. 12 ವರ್ಷಗಳಿಗೆ ಒಮ್ಮೆ ನೀಲಕುರಿಂಜಿ ಹೇಗೆ ಅರಳುತ್ತದೆಯೋ ಹಾಗೆ 2014ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸಿದ ಕಾರ್ಯಕ್ರಮಗಳ ಫ‌ಲ ಈಗ ಸಿಗುತ್ತಿದೆ ಎಂಬರ್ಥದಲ್ಲಿ ಹೂವಿನ ವಿಚಾರ ಪ್ರಸ್ತಾಪಿಸಿದ್ದಾರೆ.

ಅದು ಎಲ್ಲಿ ಬೆಳೆಯುತ್ತದೆ?: ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ನೀಲಿಗಿರಿ ಬೆಟ್ಟ ಪ್ರದೇಶದಲ್ಲಿ ಅದು ಅರಳುತ್ತದೆ. ಅದು ನೇರಳೆ ಬಣ್ಣದಲ್ಲಿದೆ. ನೀಲಕುರಿಂಜಿ ಎನ್ನುವುದು “ಪ್ಲೆ„ಟೆಸಿಯಲ್ಸ್‌ (ಟlಜಿಛಿಠಿಛಿsಜಿಚls )ಎಂಬ ವರ್ಗಕ್ಕೆ ಸೇರಿದೆ. ಅದರಲ್ಲಿ ಬೇರೆ ಬೇರೆ ಪ್ರಭೇದಗಳಿವೆ. ಹೀಗಾಗಿ, ಹೂ ಬಿಡುವ ಸಮಯವೂ ವ್ಯತ್ಯಾಸ ವಾಗುತ್ತದೆ. ಸಮುದ್ರ ಮಟ್ಟದಿಂದ 1,300-2,400 ಮೀಟರ್‌ ಎತ್ತರದಲ್ಲಿ ಬೆಳೆಯುತ್ತದೆ. 

ಸ್ವಾತಂತ್ರ್ಯದ ಬಳಿಕ 6 ಬಾರಿ: 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಈ ವಿಶೇಷ ಹೂ ಆರನೇ ಬಾರಿಗೆ ಅರಳುತ್ತಿದೆ. 1947ರ ಬಳಿಕ 1958, 1970, 1982, 1994, 2006 ಮತ್ತು ಹಾಲಿ ವರ್ಷ ಅಂದರೆ 2018ರಲ್ಲಿ ಅರಳಿದೆ.

ಪ್ರವಾಹದ ಪ್ರಸ್ತಾಪ
 ಕೇರಳ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪ್ರವಾಹದಿಂದ ಉಂಟಾದ ಪರಿಸ್ಥಿತಿ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದ್ದಾರೆ. ಕುಟುಂಬ ಸದಸ್ಯರನ್ನು ಮತ್ತು ಜೀವನಾವಶ್ಯಕ ವಸ್ತುಗಳನ್ನು ಕಳೆದುಕೊಂಡ ವರ ಜತೆ ದೇಶ ಸದಾ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. 

ಹಿಂಸೆ, ಬೈಗುಳ ಬೇಡ
ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮಾತುಗಳನ್ನು ಪ್ರಸ್ತಾಪಿಸಿದ ಅವರು, ಗುಂಡಿನ ದಾಳಿ ಮತ್ತು ಬೈಗುಳ‌ದ ಬದಲಾಗಿ ಎಲ್ಲರನ್ನೂ ಒಗ್ಗೂಡಿಸಿ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಇನ್ಸಾನಿಯತ್‌ (ಮಾನವೀಯತೆ), ಕಶ್ಮೀರಿಯತ್‌ (ಕಾಶ್ಮೀರ ಸಂಸ್ಕೃತಿ ಮತ್ತು ಜಾತ್ಯತೀತತೆ), ಜಮೂರಿಯತ್‌ (ಪ್ರಜಾಪ್ರಭುತ್ವ) ಮೂಲಕ ಸಮಸ್ಯೆ ಪರಿಹರಿಸಲು ಯತ್ನಿಸಲಾಗುತ್ತದೆ ಎಂದಿದ್ದಾರೆ. 

ಗೂಗಲ್‌ ಡೂಡಲ್‌ಸ್ವಾತಂತ್ರ್ಯ ಸಂಭ್ರಮ
ಇಂಟರ್‌ನೆಟ್‌ ಸರ್ಚ್‌ ಎಂಜಿನ್‌ ಗೂಗಲ್‌ 72ನೇ ಸ್ವಾತಂತ್ರ್ಯ ದಿನ ನಿಮಿತ್ತ ಚಿತ್ರ ಪ್ರದರ್ಶಿಸಿತ್ತು. ಲಾರಿ ಗಳ ಮೇಲೆ ಇರುವ ಚಿತ್ರದಿಂದ ಸ್ಫೂರ್ತಿಗೊಂಡು ಡೂಡಲ್‌ ರಚಿಸಲಾಗಿದೆ. ಹೆಚ್ಚಿನ ಸಮಯವನ್ನು ರಸ್ತೆಯಲ್ಲಿಯೇ ಕಳೆಯುವ ಚಾಲಕರಿಗೆ  ಅರ್ಪಿಸಲಾಗಿದೆ ಎಂದು ಗೂಗಲ್‌ ಹೇಳಿಕೊಂಡಿದೆ. 

ಕೇಸರಿ ಪೇಟಾ ಧರಿಸಿದ ಪ್ರಧಾನಿ ಮೋದಿ
ಸ್ವಾತಂತ್ರ್ಯ ದಿನ ಪೇಟಾ ಧರಿಸುವ ಸಂಪ್ರದಾಯವನ್ನು ಈ ಬಾರಿಯೂ ಮುಂದುವರಿಸಿದ್ದಾರೆ. ಬುಧವಾರದ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಪೇಟಾ ಧರಿಸಿದ್ದರು. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಯಾಗಿ ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸುವ ಸಂದರ್ಭದಲ್ಲಿ ಕಿತ್ತಳೆ ಮತ್ತು ನೀಲಿ ಬಣ್ಣದಿಂದ ಕೂಡಿದ ಜೋಧ್‌ಪುರಿ ಸಂಪ್ರದಾಯದ ಪೇಟಾ ಧರಿಸಿದ್ದರು.

ಗಣ್ಯರಿಗೆ ಗಾಳಿ ಬೀಸಿದ ಬಂಗಾಳ ಬೀಸಣಿಕೆ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬುಧವಾರ ಮೋಡ ಮುಸುಕಿದ ವಾತಾವರಣ ಇತ್ತು. ಹೀಗಾಗಿ ಕೆಂಪು ಕೋಟೆಯ ಆವರಣದಲ್ಲಿ ಸೇರಿದ್ದ ಪ್ರಮುಖ ರೆಲ್ಲ ಸೆಖೆಯಿಂದ ಪರಿತಪಿಸುತ್ತಿದ್ದ ದೃಶ್ಯಾವಳಿಗಳು ಟಿವಿ ಚಾನೆಲ್‌ಗ‌ಳ ಮೂಲಕ ದೇಶವೇ ನೋಡುತ್ತಿತ್ತು. ಪಶ್ಚಿಮ ಬಂಗಾಳದ ಮಹಾಲಿ ಬುಡಕಟ್ಟು ಜನಾಂಗದವರು ಸಿದ್ಧಪಡಿಸಿದ ಆಕರ್ಷಕ ಸಣ್ಣ ಬೀಸಣಿಕೆಯನ್ನು ಆಹ್ವಾನಿತರಿಗೆ ನೀಡಲಾಗಿತ್ತು.

ಮೋದಿ ಶಾಯರಿ
“ಹಮ್‌ ತೋಡ್‌ ರಹೇ ಹೇ ಝಂಝೀರೇ, ಹಮ್‌ ಬದಲ್‌ ರಹೇ ಹೇ ತಸ್ವೀರೇ, ಯೇ ನಯೀ ಭಾರತ್‌ ಹೇ, ಖುದ್‌ ಲಿಖೇಂಗೆ ಅಪ್ನಿ ತಖ್‌ ದೀ ರೆ’ (ನಾವು ಸರಪಳಿಗಳನ್ನು ತುಂಡರಿಸುತ್ತಿದ್ದೇವೆ, ಚಿತ್ರಣಗಳನ್ನು ಬದಲಿಸುತ್ತಿದ್ದೇವೆ; ಇದು ನವ ಭಾರತ, ತನ್ನ ಹಣೆ ಬರಹವನ್ನು ಖುದ್ದು ಬರೆದುಕೊಳ್ಳಲಿದೆ) ಎಂಬ ಕವನವನ್ನು ತಮ್ಮ ಸರ್ಕಾರದ ಸಾಧನೆಗಳನ್ನು ಬಣ್ಣಿಸುವಾಗ ಪ್ರಧಾನಿ ನರೇಂದ್ರ ಮೋದಿ ಬಳಸಿದರು.

ಹಾಡಿಗೆ ಎಲ್ಲೆಡೆ ಮೆಚ್ಚುಗೆ
ಸ್ವಾತಂತ್ರ್ಯ ದಿನಕ್ಕಾಗಿ ಗಾಯಕ ಹಾಗೂ ಸಂಗೀತ ನಿರ್ದೇಶಕ ಶಂಕರ್‌ ಮಹದೇವನ್‌ರ ಜನಪ್ರಿಯ ವಾದ ಹಾಗೂ ಒಂದೇ ಉಸಿರಿನಲ್ಲಿ ಹಾಡಿದ ಬ್ರಿತ್‌ಲೆಸ್‌ ಹಾಡಿನ ಹೊಸ ಆವೃತ್ತಿ ಜನಪ್ರಿಯವಾಗಿದೆ. ದೇಶದ ಬಗ್ಗೆ, ಪ್ರಧಾನಿ ಮೋದಿ ಕೈಗೊಂಡ ಹೊಸ ಯೋಜನೆಗಳ ಹೆಸರುಗಳನ್ನುಳ್ಳ ಹೊಸ ಸಾಹಿತ್ಯವನ್ನು ಹಾಡಿನ ಹಳೆಯ ಟ್ಯೂನ್‌ಗೆ ರಚಿಸಲಾಗಿದೆ. ಇದರ ವಿಡಿಯೋ ಯೂಟ್ಯೂಬ್‌ನಲ್ಲಿ ಜನಪ್ರಿಯವಾಗಿದ್ದು, ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಯ ಮೂರನೇ ಅತಿ ದೀರ್ಘ‌ ಭಾಷಣ
ಮೋದಿ ಹಿಂದಿನ ಭಾಷಣದ ಅವಧಿ
ವರ್ಷ     ಅವಧಿ (ನಿಮಿಷಗಳಲ್ಲಿ)
2014    65
2015    86
2016    96
2017    57

ಡಾ.ಮನಮೋಹನ್‌ ಸಿಂಗ್‌
10           ಒಟ್ಟು ಭಾಷಣ
2ಬಾರಿ       50 ನಿಮಿಷ
8ಬಾರಿ        32 ರಿಂದ 42  ನಿಮಿಷಗಳು

ಅಟಲ್‌ ಬಿಹಾರಿ ವಾಜಪೇಯಿ
32 ರಿಂದ 42  ನಿಮಿಷಗಳು
30-35 ನಿಮಿಷ ಭಾಷಣದ ಅವಧಿ
25 ನಿಮಿಷ  2002ರಲ್ಲಿ ಮಾಡಿದ್ದ ಭಾಷಣದ ಅವಧಿ
30 ನಿಮಿಷ    2003ರಲ್ಲಿ ಮಾಡಿದ್ದ ಭಾಷಣದ ಅವಧಿ

Advertisement

Udayavani is now on Telegram. Click here to join our channel and stay updated with the latest news.

Next