ಮೈಸೂರು: ಭೈರಪ್ಪ ಅವರಿಗೆ ಇನ್ನೂ ಏಕೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿಲ್ಲ?, ದಸರಾ ಉದ್ಘಾಟನೆಗೆ ಭೈರಪ್ಪ ಅವರನ್ನೇಕೆ ಆಹ್ವಾನಿಸಿಲ್ಲ? ಎನ್ನುವ ಸಂಗತಿಗಳು ಸರ್ಕಾರದ ವಿರುದ್ಧ ಜನರು ಕ್ರೋಧಗೊಳ್ಳಲು ಕಾರಣವಾಗಿದೆ ಎಂದು ಹಾಸ್ಯಗಾರ ಗಂಗಾವತಿ ಪ್ರಾಣೇಶ್ ಹೇಳಿದರು.
ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭಾನುವಾರ ಭೈರಪ್ಪ ಅವರ ಸಾಹಿತ್ಯ ಚಿಂತನೆಯನ್ನು ನವೀರಾದ ಹಾಸ್ಯದೊಂದಿಗೆ ಪ್ರಸ್ತುತ ಪಡಿಸಿದರು.
ಭೈರಪ್ಪ ಅವರ ಪ್ರತಿಯೊಂದು ಕಾದಂಬರಿಯಲ್ಲೂ ಗಟ್ಟಿತನವಿದೆ. ಅವರ ಅನುಭವ ಸಾರ ಇದೆ. ಓದು, ಸಂಶೋಧನೆ ಮತ್ತು ತಿರುಗಾಟದಿಂದ ಅವರಿಗೆ ಈ ಅನುಭವ ಸಾರ ದೊರೆತಿದೆ. ಇದರ ಮುಂದೆ ಅವರಿಗೆೆ ಪದವಿ, ಪ್ರಶಸ್ತಿ ಪುರಸ್ಕಾರಗಳೆಲ್ಲ ಕ್ಷುಲ್ಲಕ ಎನಿಸುತ್ತದೆ ಎಂದು ಹೇಳಿದರು.
ಕುವೆಂಪು, ಕಾರಂತರು, ಭೈರಪ್ಪ ಅವರ ಕೃತಿಯ ಓದುಗರು ಧಾರವಾಹಿ ನೋಡಲ್ಲ ಎನ್ನುವುದು ನನ್ನ ಅಭಿಪ್ರಾಯ. ಧಾರವಾಹಿಯಲ್ಲಿ ಒಂದು ಘಟನೆಯನ್ನು ಆರು ತಿಂಗಳು ತೋರಿಸುತ್ತಾರೆ. ಆದರೆ, ಭೈರಪ್ಪ ಅವರು ತಮ್ಮ ಕೃತಿಗಳಲ್ಲಿ ಸಣ್ಣದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ನಾಯಿ-ನೆರಳು ಕಾದಂಬರಿ ಕುಂಭಮೇಳದ ಕಲ್ಪನೆಯನ್ನು ಕಟ್ಟಿಕೊಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೇಷ್ಠ ಸಾಹಿತ್ಯ ಕೃತಿಯನ್ನು ಸಿನಿಮಾ ಮಾಡಬಾರದು. ಸಿನಿಮಾದಲ್ಲಿ ಪಾತ್ರಗಳಿಗೆ ಭಾವ ತುಂಬಲಾಗಲ್ಲ. ಹೀಗಾಗಿ ಕಥೆ ಜೀವಸ್ವತ ಕಳೆದುಕೊಳ್ಳುತ್ತದೆ. ಕಪ್ಪು ಬಿಳುಪಿನ ಕಲಾತ್ಮಕ ಸಿನಿಮಾಕ್ಕೆ ಪ್ರಶಸ್ತಿ ಬರುತ್ತದೆ, ದೂರದರ್ಶನದಲ್ಲಿ ಮಾತ್ರ ಇವುಗಳು ಪ್ರಸಾರವಾಗುವುದರಿಂದ ಯಾರೂ ನೋಡಲ್ಲ ಎಂದರು.
ಮದ್ಯದಿಂದಷ್ಟೇ ಕಿಕ್ ಹೊಡೆಯುವುದಿಲ್ಲ. ಕೆಲ ಉತ್ತಮ ಕೃತಿಗಳು ಕೂಡ ಕಿಕ್ ಹೊಡೆಸುತ್ತವೆ. ಪುಸ್ತಕದಷ್ಟು ಉತ್ತಮ ಸ್ನೇಹಿತ ಮತ್ತೂಬ್ಬನಿಲ್ಲ. ಆದ್ದರಿಂದ ಮಕ್ಕಳ ಕೈಗೆ ಮೊಬೈಲ್ ಕೊಡದೆ, ಪುಸ್ತಕಗಳನ್ನು ಕೊಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.