Advertisement

ರೈತ ಚಳವಳಿಯ ಪ್ರಬಲ ಶಕ್ತಿ ಕ್ಷೀಣ

06:05 AM Feb 20, 2018 | Team Udayavani |

ಪಾಂಡವಪುರ: ರೈತ ಚಳವಳಿಗೆ ಬೆನ್ನೆಲುಬಾಗಿದ್ದ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯನವರ ಸಾವಿನಿಂದ ಹೋರಾಟದ
ಪ್ರಬಲ ಶಕ್ತಿಯೊಂದು ಕ್ಷೀಣಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು.

Advertisement

ಅಗಲಿದ ಗೆಳೆಯ ಶಾಸಕ ಪುಟ್ಟಣ್ಣಯ್ಯನವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಸಿಎಂ ಸಿದ್ದರಾಮಯ್ಯ
ಮೈಸೂರಿನಿಂದ ಕ್ಯಾತನಹಳ್ಳಿಗೆ ಸೋಮವಾರ ಆಗಮಿಸಿದ್ದರು. ಬೆಳಗ್ಗೆ 11.30ರ ವೇಳೆಗೆ ಮೈಸೂರಿನಿಂದ ಆಗಮಿಸಿದ
ಸಿದ್ದರಾಮಯ್ಯ, ಪುಟ್ಟಣ್ಣಯ್ಯರ ಪಾರ್ಥಿವ ಶರೀರಕ್ಕೆ ಪುಷ್ಪಗುತ್ಛ ಇರಿಸಿ ನಮನ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪುಟ್ಟಣ್ಣಯ್ಯನವರ ಸಾವು ತೀರಾ ನೋವು ತಂದಿದೆ. ನಾನೂ ರೈತ
ಹೋರಾಟದಲ್ಲಿದ್ದವನು. ಅವರ ಪ್ರಗತಿಪರ ಚಿಂತನೆಗಳು, ಸಾಮಾಜಿಕ ಬದ್ಧತೆಗಳನ್ನು ಸಮೀಪದಿಂದ ಬಲ್ಲವನು ಎಂದು ಹೇಳಿದರು.

ಮೊನ್ನೆಯಷ್ಟೆ ಬಜೆಟ್‌ ಮಂಡನೆ ಸಂದರ್ಭದಲ್ಲಿ ನನ್ನ ಜತೆ ಸುದೀರ್ಘ‌ವಾಗಿ ಮಾತನಾಡಿದ್ದರು. ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವಂತಹ ಅಂಶಗಳನ್ನು ಸೇರಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಮನವಿ
ಮಾಡಿದ್ದರು. ತಾಲೂಕಿನ ಜನರ ಒತ್ತಾಯದ ಮೇರೆಗೆ ಪಾಂಡವಪುರದಲ್ಲಿ ಪುಟ್ಟಣ್ಣಯ್ಯರ ಪ್ರತಿಮೆ ಸ್ಥಾಪಿಸುವುದಾಗಿ
ಸಿಎಂ ಭರವಸೆ ನೀಡಿದರು.

ನಾಡಿದ್ದು ಅಂತ್ಯಕ್ರಿಯೆ
ಕೆ.ಎಸ್‌.ಪುಟ್ಟಣ್ಣಯ್ಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ಫೆ.22ರಂದು ತಾಲೂಕಿನ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ
ನೆರವೇರಲಿದೆ. 

Advertisement

ಅಂದು ಬೆಳಗಿನ ಜಾವ 6 ಗಂಟೆಯಿಂದ 12 ಗಂಟೆಯವರೆಗೆ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ
ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ
ಮೆರವಣಿಗೆ ನಡೆಸಿ ಕ್ಯಾತನಹಳ್ಳಿ ಗ್ರಾಮಕ್ಕೆ ಕೊಂಡೊಯ್ಯಲಾಗುವುದು. 

ನಂತರ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರ ಆಪ್ತ ವರ್ಗ ತಿಳಿಸಿದೆ. ಪುಟ್ಟಣ್ಣಯ್ಯ ಅವರ ಪುತ್ರಿಯರಾದ ಅಕ್ಷತಾ ಮತ್ತು ಸ್ಮಿತಾ ಕೆನಡಾದಲ್ಲಿ ನೆಲೆಸಿದ್ದಾರೆ. ಪುತ್ರಿಯರು-ಅಳಿಯಂದಿರ ಪೈಕಿ ಕೆಲವರು ಮಂಗಳವಾರ ಹಾಗೂ ಉಳಿದವರು ಬುಧವಾರ ಆಗಮಿಸಲಿದ್ದಾರೆ. ಹಾಗಾಗಿ ಎಲ್ಲರ ಆಗಮನದ ಬಳಿಕ ಪುಟ್ಟಣ್ಣಯ್ಯನವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಗುರುವಾರ ನಡೆಸಲು ನಿಶ್ಚಯಿಸಲಾಗಿದೆ.

ಶೋಕಸಾಗರದಲ್ಲಿ ಮುಳುಗಿದ ರೈತ ಸಮುದಾಯ
ಪಾಂಡವಪುರ:
ಕೆ.ಎಸ್‌.ಪುಟ್ಟಣ್ಣಯ್ಯನವರ ಸಾವಿನ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಒಡನಾಡಿಗಳು, ಹಿತೈಷಿಗಳು, ರೈತಸಂಘದ ಕಾರ್ಯಕರ್ತರು ಆಗಮಿಸಿ ಪಾರ್ಥಿವ ಶರೀರದ ದರ್ಶನ ಪಡೆದರು.

ಭಾನುವಾರ ರಾತ್ರಿ ಹಠಾತ್‌ ನಿಧನರಾದ ಪುಟ್ಟಣ್ಣಯ್ಯನವರ ಪಾರ್ಥಿವ ಶರೀರವನ್ನು ಕ್ಯಾತನಹಳ್ಳಿ ಗ್ರಾಮದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಪುಟ್ಟಣ್ಣಯ್ಯನವರ ಹಠಾತ್‌ ನಿಧನ ಎಲ್ಲರಲ್ಲೂ ದಿಗ್ಭ್ರಮೆ ಉಂಟುಮಾಡಿತ್ತು. ರಾತ್ರಿಯಿಂದಲೇ ಗುಂಪು ಗುಂಪಾಗಿ
ಬಂದ ಜನರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಪುಟ್ಟಣ್ಣಯ್ಯನವರ ಸಾವಿನಿಂದ ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ ಆವರಿಸಿತ್ತು.

ನಾಯಕನನ್ನು ಕಳೆದುಕೊಂಡ ರೈತಸಂಘದ ಕಾರ್ಯಕರ್ತರ ರೋದನ ಮುಗಿಲುಮುಟ್ಟಿತ್ತು. 

ಗಣ್ಯರ ದಂಡು: ಯತೀಂದ್ರ ಸಿದ್ದರಾಮಯ್ಯ, ಸಾಹಿತಿ ದೇವನೂರು ಮಹಾದೇವ, ಸಂಸದರಾದ ಸಿ.ಎಸ್‌.
ಪುಟ್ಟರಾಜು, ಧ್ರುವ ನಾರಾಯಣ್‌, ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಚ್‌.ವಿಜಯಶಂಕರ್‌, ಸಿ.ಟಿ.ರವಿ, ಚಿತ್ರನಟ ದರ್ಶನ್‌ ಆಗಮಿಸಿ ಅಂತಿಮ ದರ್ಶನ ಪಡೆದರು. 

ಜೆಎಸ್‌ಎಸ್‌ ಆಸ್ಪತ್ರೆಗೆ ರವಾನೆ: ಸೋಮವಾರ ಬೆಳಗ್ಗೆ 11.45ರ ವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ
ದರ್ಶನಕ್ಕೆ ಇಡಲಾಗಿತ್ತು. ನಂತರ ವೈದ್ಯರ ಸಲಹೆ ಮೇರೆಗೆ ವಿಶೇಷ ವಾಹನದಲ್ಲಿ ಮೈಸೂರು ಜೆಎಸ್‌ಎಸ್‌ ಆಸ್ಪತ್ರೆಗೆ
ರವಾನಿಸಲಾಯಿತು.

ಮೋದಿ ಸಂತಾಪ 
ಮೈಸೂರಿಗೆ ಸೋಮವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಭಾಷಣದ ಮಧ್ಯೆ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಅವರಿಗೆ ಸಂತಾಪ ಸೂಚಿಸಿದರು. ರೈತ ನಾಯಕರಾಗಿ, ರೈತರಿಗಾಗಿ ತಮ್ಮ ಜೀವನ 
ಮುಡುಪಾಗಿಟ್ಟಿದ್ದ ಪುಟ್ಟಣ್ಣಯ್ಯ ಅವರಿಂದ ಅನೇಕರು ಪ್ರೇರಣೆ ಪಡೆದಿದ್ದರು ಎಂದು ನೆನೆದರು.

ಅಂತ್ಯಕ್ರಿಯೆಗೆ ದುರ್ಗದ ಮಣ್ಣು
ಚಿತ್ರದುರ್ಗ:
ದುರ್ಗದ ಮಣ್ಣಿನೊಂದಿಗೆ ಭಾವನಾತ್ಮಕ ಸಂಬಂಧ ಇರಿಸಿಕೊಂಡಿದ್ದ ಕೆ.ಎಸ್‌. ಪುಟ್ಟಣ್ಣಯ್ಯ ಅವರ ಅಂತ್ಯಸಂಸ್ಕಾರಕ್ಕೆ ಬರಪೀಡಿತ ದುರ್ಗದ ಮಣ್ಣನ್ನು ತೆಗೆದುಕೊಂಡು ಹೋಗಲು ಇಲ್ಲಿನ ರೈತ ಮುಖಂಡರು
ನಿರ್ಧರಿಸಿದ್ದಾರೆ. 

ನಗರದಲ್ಲಿ ಸೋಮವಾರ ನಡೆದ “ನುಡಿ ನಮನ’ ಕಾರ್ಯಕ್ರಮದಲ್ಲಿ ಈ ನಿರ್ಧಾರ ಕೈಗೊಂಡಿರುವ ಮುಖಂಡರು ಬುಧವಾರ ನಡೆಯುವ ಅಂತ್ಯಕ್ರಿಯೆಗೆ ತೆರಳುವಾಗ ಮಣ್ಣು ಕೊಂಡೊಯ್ಯಲು ತೀರ್ಮಾನ ಕೈಗೊಂಡರು. ಪುಟ್ಟಣ್ಣಯ್ಯ ಅವರು ಬಯಲುಸೀಮೆಯ ಚಿತ್ರದುರ್ಗದ ನೆಲವನ್ನು ಬಹಳ ಪ್ರೀತಿಸುತ್ತಿದ್ದರು. ದುರ್ಗದ ನೆಲಕ್ಕೆ ಕಾಲಿಟ್ಟ ತಕ್ಷಣ ಹಿಡಿ ಮಣ್ಣು ಮುಟ್ಟಿ ನಮಸ್ಕಾರ ಮಾಡುತ್ತಿದ್ದರು ಎಂದು ರೈತ ಮುಖಂಡರು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next