ಅಫಜಲಪುರ: ಬಿಜೆಪಿ ಹೊರತು ಪಡಿಸಿ ಬೇರಾವ ಪಕ್ಷದಲ್ಲೂ ಕೆಳ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ದೊಡ್ಡ ಜವಾಬ್ದಾರಿ ನೀಡುವ ಪರಂಪರೆ ಇಲ್ಲ. ಹೀಗಾಗಿ ಪಕ್ಷಕ್ಕಾಗಿ ಶೃದ್ಧೆಯಿಂದ ಕೆಲಸ ಮಾಡಿ, ಪಕ್ಷ ನಿಮ್ಮ ಸೇವೆ ಗುರುತಿಸಿ ಜವಾಬ್ದಾರಿ ನೀಡಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರನಾಥ ಪಾಟೀಲ ಹೇಳಿದರು.
ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ನಮ್ಮದು ಕಾರ್ಯಕರ್ತರ ಪಕ್ಷ, ಕಾರ್ಯಕರ್ತರೇ ಪಕ್ಷದ ನರನಾಡಿಗಳು. ಹೀಗಾಗಿ ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ಹೆಚ್ಚು ಸಮಯ ನೀಡುತ್ತಿದ್ದಾರೆ ಎಂದರು.
ಬಿಜೆಪಿ ಧ್ಯೇಯ ಉದ್ದೇಶ ಸದೃಢ ದೇಶ ಕಟ್ಟುವುದಾಗಿದೆ. ದೇಶದ ಒಳಿತಿಗಾಗಿ ಅನೇಕ ಕಠಿಣ ಕ್ರಮಗಳನ್ನು ಮೋದಿ ಸರ್ಕಾರ ಕೈಗೊಂಡಿದೆ. ಅಲ್ಲದೆ ದೊಡ್ಡ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಬಲಿಷ್ಠಗೊಳಿಸಿದೆ. ಅವರ ಕೆಲಸಗಳನ್ನು ಜಗತ್ತು ಹೊಗಳುತ್ತಿದೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಮ ಮಂದಿರ ನಿರ್ಮಾಣ, ಕೊರೊನಾ ಸಂದರ್ಭದಲ್ಲಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ, ನರೇಗಾ ಬೋಗಸ್ ತಡೆಯಲು ಬೋಗಸ್ ರೇಷನ್ ಕಾರ್ಡ್ ರದ್ದುಗೊಳಿಸಿದ್ದರ ಪರಿಣಾಮ ಬೊಕ್ಕಸಕ್ಕೆ 1.80 ಲಕ್ಷ ಕೋಟಿ ರೂ. ಉಳಿತಾಯವಾಗಿದೆ. ಇವೆಲ್ಲ ಹೊರತು ಪಡಿಸಿ ಇನ್ನು ಸಾಕಷ್ಟು ಅಭಿವೃದ್ದಿ ಕೆಲಸಗಳು ನಡಯುತ್ತಿವೆ. ಪಕ್ಷದ ಕಾರ್ಯಕರ್ತರು ಇವುಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಸುಭಾಷ ಪ್ಯಾಟಿ, ಸೂರ್ಯಕಾಂತ ನಾಕೇದಾರ, ಸಚೀನ ರಾಠೊಡ, ಮಲ್ಲಿಕಾರ್ಜುನ ನಿಂಗದಳ್ಳಿ, ಸಂಜಯ ಮಿಸ್ಕಿನ್, ಸುರೇಖಾ ಪದಕಿ, ಸುನೀಲ ಶೆಟ್ಟಿ, ಭಾಗೇಶ ಬೋರೆಗಾಂವ್, ಧಾನು ಪತಾಟೆ, ನಾಮದೇವ ರಾಠೊಡ, ರಾಮಣ್ಣ ನಾಯ್ಕೋಡಿ, ವಿಠೊಬಾ ಹಿರೇಕುರುಬರ, ಆನಂದ ಶೆಟ್ಟಿ, ಗುರುಬಾಳಪ್ಪ ಜಕಾಪುರ, ಶಿವು ಪದಕಿ, ಮನೋಹರ ರಾಠೊಡ, ಗಂಗಾಧರ ಶ್ರೀಗಿರಿ, ಶ್ರೀಶೈಲ ಬಳೂರ್ಗಿ, ಪ್ರಭಾವತಿ ಮೇತ್ರಿ ಮತ್ತಿತರರು ಇದ್ದರು.
ಕಾರ್ಯಕಾರಿಣಿ ಸಭೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಕಡ್ಡಾಯವಾಗಿ ಹಾಜರಾಗಬೇಕು. ಆದರೆ ಇವತ್ತಿನ ಕಾರ್ಯಕಾರಿಣಿಯಲ್ಲಿ ಖಾಲಿ ಕುರ್ಚಿಗಳೆ ಹೆಚ್ಚಾಗಿವೆ. ಇದು ಯಾಕೋ ಸರಿ ಎನಿಸುತ್ತಿಲ್ಲ. ಮುಂದಿನ ಕಾರ್ಯಕಾರಿಣಿ ಹಾಗೂ ಪಕ್ಷದ ಸಂಘಟನೆ ಕೆಲಸಗಳು ಕ್ಷೇತ್ರದ ಮಾಜಿ ಶಾಸಕ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ನೇತೃತ್ವದಲ್ಲಿ ನಡೆಯಲಿವೆ. ಮುಂದಿನ ಸಭೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಹಾಜರಿರಬೇಕು. ಅಲ್ಲದೇ ನಿಮ್ಮ ಕಾರ್ಯವೈಖರಿ ರಿಪೋರ್ಟ್ ಕಾರ್ಡ್‌ನೊಂದಿಗೆ ಬರಬೇಕು.
-ಅಮರನಾಥ ಪಾಟೀಲ, ಮಾಜಿ ಎಂಎಲ್‌ಸಿ