ನರೇಗಲ್ಲ: ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ಅಬ್ಬರ ತಾರಕಕ್ಕೇರಿದ್ದು, ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 5 ಗಂಟೆಗೆ ತೆರೆ ಬೀಳಲಿದೆ. ವಿವಿಧ ಪಕ್ಷಗಳ ಮುಂಖಡರು ಹಾಗೂ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಜತೆ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳು ಗೆಲುವಿಗಾಗಿ ತಮಗೆ ನೀಡಿದ ಚಿಹ್ನೆ ಆಧರಿಸಿ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಪಟ್ಟಣ ಪಂಚಾಯತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 53 ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ವ ರ್ಧಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬಿಜೆಪಿ, ಕಾಂಗ್ರೆಸ್‌ನಿಂದ ಟಿಕೆಟ್ ಸಿಗಲಿಲ್ಲ ಎಂದು ಅಸಮಾಧಾನಗೊಂಡು ಪಕ್ಷೇತರರಾಗಿ ಕಣಕ್ಕಿಳಿದಿರುವ 18 ಮಂದಿಯೂ ಈ ಪಟ್ಟಿಯಲ್ಲಿದ್ದಾರೆ. ಪಟ್ಟಣದ ವಾರ್ಡ್ ನಂ. 1, ವಾರ್ಡ್ ನಂ. 3, ವಾರ್ಡ್ ನಂ. 4, ವಾರ್ಡ್ ನಂ. 10, ವಾರ್ಡ್ ನಂ. 15, ವಾರ್ಡ್ ನಂ. 16 ಸೇರಿ ಕೆಲ ವಾರ್ಡ್‌ಗಳಲ್ಲಿ ಪಕ್ಷೇತರರ ವರ್ಚಸ್ಸು ಕಂಡುಬರುತ್ತಿದೆ.
ಈ ಬಾರಿ ಭಾರೀ ಬಹಿರಂಗ ಸಭೆಗಳು ಅಷ್ಟಾಗಿ ಕಂಡು ಬರದಿದ್ದರೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವುದು ಹೆಚ್ಚಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ಕೂಡ ಪರಸ್ಪರ ಪೈಪೋಟಿಗಿಳಿದು ಪ್ರಚಾರ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರ ಆರೋಪ, ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಕಿತ್ತಾಟದ ಮಧ್ಯೆ ಪಕ್ಷೇತರ ಅಭ್ಯರ್ಥಿಗಳು ಮಾತ್ರ ತಮ್ಮ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.
ಕೆಲವು ವಾರ್ಡ್‌ಗಳಲ್ಲಿ ಪಕ್ಷಗಳ ಹುರಿಯಾಳುಗಳಿಗೆ ಪಕ್ಷೇತರ ಅಭ್ಯರ್ಥಿಗಳು ತೀವ್ರ ಪೈಪೋಟಿ ನೀಡಲಿದ್ದಾರೆ. ಬಂಡಾಯಗಾರರು ಕಣಕ್ಕಿಳಿದಿರುವ ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ಹರಸಾಹಸ ಪಡಬೇಕಿದೆ. ಹಿಂದಿನ ರಾಜಕಾರಣಿಗಳು ಜನರಿಗೆ ಮಾಡಿದ ಮೋಸ, ಅಭಿವೃದ್ಧಿ ಕಡೆಗಣಿಸಿದ ಬಗ್ಗೆ ಮನವರಿಕೆ ಮಾಡಿಕೊಡುತ್ತಾ, ತಮ್ಮದೇ ಪ್ರಣಾಳಿಕೆ ತಯಾರಿಸಿ ಜನರ ಮುಂದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪ್ರಚಾರಕ್ಕೆ ಹೋಗುತ್ತಿದ್ದಾರೆ.
ಮತದಾರರ ಓಲೈಕೆ: ತಮಗೆ ನೀಡಿದ ಚಿಹ್ನೆಗಳನ್ನು ವಾರ್ಡ್‌ಗಳಲ್ಲಿ ಪ್ರಚಾರ ಮಾಡುತ್ತಾ ಮತದಾರರ ಓಲೈಕೆಯಲ್ಲಿ ಅಭ್ಯರ್ಥಿಗಳು ತಲ್ಲೀನರಾಗಿದ್ದಾರೆ. ಈ ಬಾರಿಯ ಫಲಿತಾಂಶ ಅಚ್ಚರಿ ತರಲಿದೆ ಎನ್ನುವ ಮಾತುಗಳು ಪಕ್ಷೇತರ ಅಭ್ಯರ್ಥಿಗಳಲ್ಲಿ ಕೇಳಿ ಬರುತ್ತಿದೆ. ಗೆಲುವು ನಮ್ಮದೇ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮತ್ತೊಂದೆಡೆ ಬೀಗುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಗೆ ಸ್ಥಳೀಯ ಚುನಾವಣೆ ದಿಕ್ಸೂಚಿಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದರೂ. ಸ್ಥಳೀಯ ಚುನಾವಣೆಯಲ್ಲಿ ಕೆಲವ ಜೆಡಿಎಸ್ ಪಕ್ಷದಿಂದ ಒಬ್ಬ ಅಭ್ಯರ್ಥಿ ಮಾತ್ರ ಸ್ಪರ್ಧಿಸಿದ್ದಾರೆ. ಆ. 31 ರಂದು ಚುನಾವಣೆ ನಡೆಯಲಿದ್ದು, ಸೆ. 3 ರಂದು ಹೊರ ಬೀಳಲಿರುವ ಫಲಿತಾಂಶ ಹೊಸ ರಾಜಕೀಯ ಪಲ್ಲಟಕ್ಕೆ ಕಾರಣವಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.
ಸಿಕಂದರ ಎಂ. ಆರಿ