Advertisement

ನಕ್ಸಲರ ವಿರುದ್ಧ ಕಠಿನ ಕ್ರಮ ಅನಿವಾರ್ಯ

10:45 PM Apr 10, 2019 | Team Udayavani |

ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ನಕ್ಸಲ್‌ ಹಾವಳಿಯನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಛತ್ತೀಸ್‌ಗಢದ ದಂತೇವಾಡದಲ್ಲಿ ಮಂಗಳವಾರ ನಕ್ಸಲರು ನೆಲಬಾಂಬ್‌ ಸ್ಫೋಟಿಸಿ ಓರ್ವ ಬಿಜೆಪಿ ಶಾಸಕ ಮತ್ತು ನಾಲ್ವರು ಭದ್ರತಾ ಸಿಬಂದಿಗಳನ್ನು ಹತ್ಯೆಗೈದಿರುವ ಘಟನೆ ಆಘಾತಕಾರಿಯಾದದ್ದು. ಈ ಮೂಲಕ ನಕ್ಸಲರು ತಮ್ಮ ಶಕ್ತಿಯಿನ್ನೂ ಕುಂದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಹಿಂದಿನಿಂದಲೂ ಛತ್ತೀಸ್‌ಗಢದ ಈ ಭಾಗ ನಕ್ಸಲ್‌ ಆಕ್ರಮಣಗಳಿಂದಾಗಿ ಕುಪ್ರಸಿದ್ಧವಾಗಿದೆ. 2017ರಲ್ಲಿ 29 ಸಿಆರ್‌ಪಿಎಫ್ ಯೋಧರನ್ನು ಸುಮಾರು 300 ಮಂದಿಯಿದ್ದ ನಕ್ಸಲರ ತಂಡವೊಂದು ಬರ್ಬರವಾಗಿ ಸಾಯಿಸಿದ ಬಳಿಕ ನಕ್ಸಲ್‌ ನಿಗ್ರಹದ ಕುರಿತು ಗಂಭೀರವಾದ ಚರ್ಚೆಗಳಾಗಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದರೂ ಅವುಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವುದಕ್ಕೆ ಮಂಗಳವಾರ ನಡೆದ ದಾಳಿಯೇ ಸಾಕ್ಷಿ.

Advertisement

ಕೆಲ ದಿನಗಳ ಹಿಂದೆಯಷ್ಟೇ ನಕ್ಸಲರು ಐವರು ಭದ್ರತಾ ಸಿಬಂದಿಗಳನ್ನು ಸಾಯಿಸಿದ್ದರೂ ಈ ಘಟನೆ ಹೆಚ್ಚು ಸುದ್ದಿಯಾಗಿರಲಿಲ್ಲ.ಈ ಮಾದರಿಯ ದಾಳಿಗಳು ಈ ಪ್ರದೇಶದಲ್ಲಿ ಆಗಾಗ ಆಗುತ್ತಿರುತ್ತದೆ. ಆದರೆ ಮಂಗಳವಾರದ ದಾಳಿಯಲ್ಲಿ ಓರ್ವ ರಾಜಕೀಯ ನಾಯಕ ಬಲಿಯಾಗಿದ್ದಾರೆ ಎಂಬ ಕಾರಣಕ್ಕೆ ಈ ಘಟನೆ ರಾಷ್ಟ್ರೀಯ ಮಹತ್ವವನ್ನು ಪಡೆದುಕೊಂಡಿದೆಯಷ್ಟೆ.

ಚುನಾವಣೆ ಸನ್ನಿಹಿತವಾಗುತ್ತಿರುವಾಗಲೆಲ್ಲ ನಕ್ಸಲ್‌ ಚಟುವಟಿಕೆ ತೀವ್ರಗೊಳ್ಳುತ್ತಿರುವುದು ಗಮನಾರ್ಹ ಅಂಶ. ನಕ್ಸಲರು ಬಂದೂಕಿನ ಮೂಲಕ ಕ್ರಾಂತಿ ತರುವ ಬ್ರಾಂತಿ ಹೊಂದಿರುವವರು ಪ್ರಜಾತಂತ್ರ ಪ್ರಕ್ರಿಯೆಯಲ್ಲಿ ಅವರಿಗೆ ವಿಶ್ವಾಸವಿಲ್ಲ. ಹೀಗಾಗಿ ಪ್ರಜಾತಂತ್ರದ ಜೀವಾಳವಾದ ಚುನಾವಣೆಯನ್ನು ಭಂಗಪಡಿಸುವುದು ಅವರ ಗುರಿ. 2013ರಲ್ಲಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ನಕ್ಸಲರು ಇದೇ ಮಾದರಿಯಲ್ಲಿ ನೆಲಬಾಂಬ್‌ ಸ್ಫೋಟಿಸಿ ಹಲವು ಕಾಂಗ್ರೆಸ್‌ ನಾಯಕರನ್ನು ಸಾಯಿಸಿದ್ದರು. ನಕ್ಸಲ್‌ ನಿಗ್ರಹ ಚಳವಳಿ ಸಲ್ವಾ ಜುಡುಂ ರೂವಾರಿಯಾಗಿದ್ದ ಮಹೇಂದ್ರ ವರ್ಮ, ಶಾಸಕ ಉದಯ ಮುದಲಿಯಾರ್‌, ಕೇಂದ್ರದ ಮಾಜಿ ಸಚಿವ ವಿ.ಸಿ.ಶುಕ್ಲ ಸೇರಿ ಹಲವು ಮಂದಿ ಈ ದಾಳಿಗೆ ಬಲಿಯಾಗಿದ್ದರು. ಮಂಗಳವಾರ ನಡೆದ ದಾಳಿಗೂ 2013ರಲ್ಲಿ ನಡೆದ ದಾಳಿಗೂ ಹಲವು ಸಾಮ್ಯತೆಗಳಿವೆ. ಆದರೆ 2013ರಲ್ಲಿ ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಈಗ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಆಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್‌ ದಾಳಿಯ ಹಿಂದೆ ರಾಜಕೀಯ ಪಿತೂರಿಯನ್ನು ಶಂಕಿಸಿತ್ತು. ಪ್ರಕರಣದ ತನಿಖೆ ನಡೆಸಿದ ಎನ್‌ಐಎ ಹಲವು ಮಂದಿಯನ್ನು ಬಂಧಿಸಿದರೂ ಅವರೆಲ್ಲ ನಕ್ಸಲ್‌ ತಂಡಗಳ ಕೆಳಹಂತದ ಕಾಲಾಳುಗಳು ಮಾತ್ರ ಆಗಿದ್ದರು. ದಾಳಿಯ ರೂವಾರಿಗಳು ಇನ್ನೂ ಕಾನೂನಿನ ಬಲೆಗೆ ಬಿದ್ದಿಲ್ಲ. ಕಾಂಗ್ರೆಸ್‌ ಸರಕಾರ ಬರುತ್ತಲೇ ಈ ಘಟನೆಯ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿದರೂ ಎನ್‌ಐಎ ತನಿಖೆಯನ್ನು ಹಸ್ತಾಂತರಿಸಲು ನಿರಾಕರಿಸಿದೆ. ಹೀಗೆ ನಕ್ಸಲ್‌ ದಾಳಿ ಪ್ರಕರಣ ಛತ್ತೀಸ್‌ಗಢದಲ್ಲಿ ರಾಜಕೀಯ ಬಣ್ಣ ಪಡೆದುಕೊಳ್ಳುವುದೂ ಇದೆ. ಆದರೆ ಇದರಿಂದ ನೈಜ ಸಮಸ್ಯೆ ಮರೆಯಾಗಿ ನಕ್ಸಲರಿಗೆ ಪ್ರಯೋಜನವಾಗುತ್ತಿದೆ ಎನ್ನುವುದು ನಮ್ಮನ್ನಾಳುವವರಿಗೆ ಅರ್ಥವಾಗದಿರುವುದು ದುರದೃಷ್ಟಕರ.

ನಕ್ಸಲ್‌ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಮಾತುಕತೆ, ಸಂಧಾನ ಇವೆಲ್ಲ ಪ್ರಜಾತಂತ್ರದ ಜೀವಾಳ ಎನ್ನುವುದು ನಿಜ. ಆದರೆ ಬಂದೂಕು ಎತ್ತಿಕೊಂಡು ಗುಂಡಿನ ಸುರಿಮಳೆಗರೆಯುವವರ ಎದುರು ನಿಂತು ಶಾಂತಿ ಮಂತ್ರ ಪಠಿಸುವುದು ಸಾಧ್ಯವೆ? ನಕ್ಸಲ್‌ ದಾಳಿಯಲ್ಲಿ ಅನೇಕ ಅಮಾಯಕ ಜೀವಗಳು ಬಲಿಯಾಗಿವೆ. ಸುಮಾರು ನಾಲ್ಕು ದಶಕಗಳ ಹೋರಾಟದಲ್ಲಿ ನಕ್ಸಲರು ನೂರಾರು ಪೊಲೀಸರ ಮತ್ತು ಭದ್ರತಾ ಸಿಬಂದಿಗಳ ಪ್ರಾಣ ತೆಗೆದಿದ್ದಾರೆ. ಇಂಥವರ ಎದುರು ಶಾಂತಿಯ ಮಂತ್ರ ಜಪಿಸುವುದಕ್ಕಿಂತ ಅವರಿಗೆ ಅರ್ಥವಾಗುವ ಭಾಷೆಯಲ್ಲೇ ಪ್ರತಿಕ್ರಿಯೆ ನೀಡುವುದು ಹೆಚ್ಚು ಸೂಕ್ತ.

ಹಾಗೆಂದು ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಬಾರದು ಎಂದಲ್ಲ. ಇಂಥ ಪ್ರಯತ್ನಗಳು ಹಿಂದೆ ಬಹಳ ನಡೆದಿವೆ. ಕೆಲವು ಮಂದಿ ನಕ್ಸಲರು ಬಂದೂಕು ಕೆಳಗಿಟ್ಟು ನೆಲದ ಕಾನೂನನ್ನು ಒಪ್ಪಿಕೊಂಡು ಸಾಮಾನ್ಯ ನಾಗರಿಕ ಬದುಕಿಗೆ ಮರಳಿದ್ದಾರೆ. ಆದರೆ ಅವರ ಸಂಖ್ಯೆ ಬಹಳ ಕಡಿಮೆಯಿದೆ. ನಕ್ಸಲರ ಅಭಿವೃದ್ಧಿಗಾಗಿ ಸರಕಾರಗಳು ಅಪಾರ ಪ್ರಮಾಣದ ಹಣ ಖರ್ಚು ಮಾಡುತ್ತಿವೆ. ರಸ್ತೆ, ಶಾಲೆಗಳಂಥಹ ಮೂಲಸೌಕರ್ಯಗಳ ನಿರ್ಮಾಣವಾಗುತ್ತಿದೆ. ಆದರೆ ಅಭಿವೃದ್ಧಿ ಚಟುವಟಿಕೆಗಳಿಂದ ಸಂತ್ರಸ್ತರಾದವರು ನಕ್ಸಲರಾಗುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ಇದರಿಂದ ನಕ್ಸಲ್‌ ಬಾಧಿತ ಪ್ರದೇಶಗಳಲ್ಲಿ ಜಾರಿಯಾಗುತ್ತಿರುವ ಅಭಿವೃದ್ಧಿ ಯೋಜನೆಗಳಲ್ಲಿ ದೋಷವಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ನಕ್ಸಲರು ಹಿಂಸಾಮಾರ್ಗವನ್ನು ಅನುಸರಿಸಿದರೆ ಅವರನ್ನು ನಿಗ್ರಹಿಸಲು ಕಠಿಣ ದಂಡನಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಇದೇ ವೇಳೆ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಜತೆಯಾಗಿ ಸಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next