Advertisement

ಬೂತ್‌ಗಳಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು

05:01 PM Oct 19, 2017 | Team Udayavani |

ಉಪ್ಪಿನಂಗಡಿ: ಬೂತ್‌ ಸಮಿತಿಗಳು ಸದೃಢವಾಗಿದ್ದಾಗ ಮಾತ್ರ ಪಕ್ಷ ಗಟ್ಟಿಗೊಳ್ಳಲು ಸಾಧ್ಯ. ಇದು ಪಕ್ಷದ ತಳಪಾಯವಿದ್ದಂತೆ. ಆದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ತಮ್ಮ ಬೂತ್‌ಗಳಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದು ಸುಳ್ಯ- ಪುತ್ತೂರು ತಾಲೂಕುಗಳ ಕಾಂಗ್ರೆಸ್‌ ಉಸ್ತುವಾರಿ ಸವಿತಾ ರಮೇಶ್‌ ತಿಳಿಸಿದರು.

Advertisement

ಉಪ್ಪಿನಂಗಡಿಯ ಮಠ ಬೂತ್‌ ಮೀಟ್‌ ಕಾರ್ಯಕ್ರಮದಂಗವಾಗಿ ಮಠದ ಕೆರೆಮೂಲೆಯಲ್ಲಿ ನಡೆದ ‘ಮನೆ ಮನೆಗೆ ಕಾಂಗ್ರೆಸ್‌’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ರಾಜ್ಯ ಸರಕಾರದ ಸಾಧನೆಗಳನ್ನು ಹಾಗೂ ಕೇಂದ್ರ ಸರಕಾರದ ನ್ಯೂನತೆಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದಾಗಬೇಕು. ಮತ್ತೂಮ್ಮೆ ಕಾಂಗ್ರೆಸ್‌ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದ್ದು, ಅದಕ್ಕಾಗಿ ನಮ್ಮನಮ್ಮೊಳಗೆ ಏನಾದರೂ ಭಿನ್ನಾಭಿಪ್ರಾಯವಿದ್ದರೆ, ಅದನ್ನು ನಾವೇ ಕೂತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ವಿಟ್ಲ- ಉಪ್ಪಿನಂಗಡಿ ಬ್ಲಾಕ್‌ವ್ಯಾಪ್ತಿ ದೊಡ್ಡದಿರುವುದರಿಂದ ಅದನ್ನು ಪ್ರತ್ಯೇಕಿಸಿ ಉಪ್ಪಿನಂಗಡಿಗೆ ಹಾಗೂ ವಿಟ್ಲಕ್ಕೆ ಬ್ಲಾಕ್‌ ಅಧ್ಯಕ್ಷರನ್ನು ಬೇರೆ ಬೇರೆಯಾಗಿ ಆಯ್ಕೆಮಾಡಿ ಅಧಿಕಾರ ವಿಕೇಂದ್ರೀಕರಣ ಮಾಡಲು ಚಿಂತನೆ ನಡೆಸಲಾಗಿದೆ. ಅಲ್ಲದೇ, ವಲಯಗಳಿಗೆ ಎರಡು ಪರಿಶೀಲಕರನ್ನು ಕೂಡ ನೇಮಿಸಲಾಗುವುದು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್‌. ಮುಹಮ್ಮದ್‌ ಮಾತನಾಡಿ, ಕೇಂದ್ರದ ಆಡಳಿತದ ಬಗ್ಗೆ ಜನರು ಬೇಸತ್ತಿದ್ದಾರೆ. ಬಿಜೆಪಿಯವರಲ್ಲಿ ಜನರ ಬಳಿ ಹೇಳಲು ಯಾವುದೇ ಸಾಧನೆಗಳಿಲ್ಲ. ಹೀಗಾಗಿ ಬಿಜೆಪಿಯವರು ಕಾಂಗ್ರೆಸ್‌ ಬಗ್ಗೆ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯ ಸರಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಬೇಕು ಎಂದರು.

ಉಪ್ಪಿನಂಗಡಿ-ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳೀಧರ ರೈ ಕೋಡಿಂಬಾಡಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಪ್ರತಿ ಗ್ರಾಮದಲ್ಲೂ ಅಭಿವೃದ್ಧಿಯಾಗಿದೆ. ಹೀಗಾಗಿ ಜನತೆಯ ಬಳಿ ಹೋಗಲು ಕಾಂಗ್ರೆಸ್‌ ಕಾರ್ಯಕರ್ತರಿಗೆ ಯಾವುದೇ ಅಂಜಿಕೆಯಿಲ್ಲ. ಆದ್ದರಿಂದ ಪ್ರತಿಯೋ ರ್ವನಿಗೂ ಕಾಂಗ್ರೆಸ್‌ನ ಸಾಧನೆಗಳನ್ನು ಮುಟ್ಟಿಸುವ ಕೆಲಸ ಕಾರ್ಯಕರ್ತರಿಂದಾಗಬೇಕು ಎಂದರು.

Advertisement

ವಿಟ್ಲ- ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ನಿಕಟಪೂರ್ವಾಧ್ಯಕ್ಷ ಪ್ರವೀಣ್‌ ಚಂದ್ರ ಆಳ್ವ, ಉಪಾಧ್ಯಕ್ಷ ಅಶ್ರಫ್ ಬಸ್ತಿಕ್ಕಾರ್‌, ಇಂಟಕ್‌ನ ರಾಜ್ಯ ಸಂಘಟನ ಕಾರ್ಯದರ್ಶಿ ನಝೀರ್‌ ಮಠ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಉಮೇಶ್‌ ಗೌಡ, ಜಮೀಳಾ, ಸುಶೀಲಾ, ಮುಖಂಡರಾದ ಅಲಿಮಾರ್‌ ರಘುನಾಥ ರೈ, ಮಾಣಿಕ್ಯರಾಜ್‌ ಪಡಿವಾಳ್‌, ಆದಂ ಕೊಪ್ಪಳ, ಮುರಳೀಧರ ಶೆಟ್ಟಿ, ಅಬ್ದುಲ್‌ ನಝೀರ್‌ ಮತ್ತಿತರರು ಉಪಸ್ಥಿತರಿದ್ದರು. ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಸ್ವಾಗತಿಸಿದರು. ಯುವ ಕಾಂಗ್ರೆಸ್‌ ಕಾರ್ಯದರ್ಶಿ ನಝೀ ಬೆದ್ರೋಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next