Advertisement

ಸ್ರ್ತೀಶೋಷಣೆ ತಡೆಗೆ ಶ್ರಮಿಸಿ: ನ್ಯಾ|ಗಿರೀಶ್‌

04:49 PM Mar 31, 2022 | Team Udayavani |

ಚಿತ್ರದುರ್ಗ: ಶೋಷಣೆಗೆ ಸಿಲುಕಿದ ಮಹಿಳೆಯರನ್ನು ರಕ್ಷಣೆ ನೀಡಲು ಸಾಂತ್ವನ ಕೇಂದ್ರಗಳಿವೆ. ಮಹಿಳೆಯರ ಏಳ್ಗೆಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಹೆಣ್ಣಿನ ಮೇಲೆ ಆಗುವ ಶೋಷಣೆಯನ್ನು ತಪ್ಪಿಸಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಬಿ.ಕೆ. ಗಿರೀಶ್‌ ಹೇಳಿದರು.

Advertisement

ಸರಸ್ವತಿ ಕಾನೂನು ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ದಂಡಿನಕುರುಬರಹಟ್ಟಿ ಗ್ರಾಮ ಪಂಚಾಯಿತಿ, ಕರ್ನಾಟಕ ಬ್ಯಾಂಕ್‌ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇಶದಲ್ಲಿ ಮಹಿಳೆಯರಿಗೆ ವಿಶೇಷ ಗೌರವ ಇದೆ. ಅವರನ್ನು ಪ್ರೀತಿ- ವಿಶ್ವಾಸದಿಂದ ಕಾಣುವ ಅಗತ್ಯವಿದೆ. ಮಹಿಳೆಯ ಮೇಲೆ ಶೋಷಣೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ನಾಗರಿಕ ಸಮಾಜದ ಜವಾಬ್ದಾರಿ ಎಂದರು.

ಇಂದು ಅಂತರ್ಜಲದ ಬಳಕೆ ಹೆಚ್ಚಾಗುತ್ತಿದ್ದು, ಇನ್ನಾದರೂ ನೀರಿನ ಮಿತ ಬಳಕೆ ಬಗ್ಗೆ ಗಮನ ಹರಿಸಬೇಕು. ಗ್ರಾಮೀಣ ಭಾಗದಲ್ಲಿ ಶುದ್ಧೀಕರಿಸಿದ ನೀರು ಸೇವಿಸುವುದರಿಂದ ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡಿ ಗ್ರಾಮದ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ. ಶಿವು ಯಾದವ್‌ ಮಾತನಾಡಿ, ಗ್ರಾಮದಲ್ಲಿ ಉಂಟಾಗುವ ಸಣ್ಣ ಪುಟ್ಟ ಸಮಸ್ಯೆಗಳು ಪೊಲೀಸ್‌ ಠಾಣೆ, ನ್ಯಾಯಾಲಯದವರೆಗೆ ಬರುವ ಸ್ಥಿತಿ ನಿರ್ಮಾಣವಾಗಬಾರದು. ಕಾನೂನುಗಳ ಬಗ್ಗೆ ಅರಿವು ಮೂಡಿಸಿಕೊಂಡರೆ ವ್ಯಾಜ್ಯಗಳಿಂದ ದೂರವಿರಬಹುದು ಎಂದರು.

ಕಾನೂನು ಸೇವಾ ಪ್ರಾಧಿಕಾರದಿಂದ ಬಡವರಿಗೆ ನೆರವು ನೀಡಲಾಗುತ್ತಿದೆ. ವಾಹನ ಸವಾರರು ಸಂಚಾರಿ ನಿಯಮಗಳ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು. ಚಾಲನಾ ಪರವಾನಗಿ ಹಾಗೂ ವಾಹನದ ದಾಖಲೆಗಳಿಲ್ಲದೆ ವಾಹನ ಚಲಾಯಿಸಬಾರದು. ಇದರಿಂದ ಅಪಘಾತ ಸಂಭವಿಸಿದರೆ ವಾಹನದ ಮಾಲೀಕರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಸರಸ್ವತಿ ಕಾನೂನು ಕಾಲೇಜು ಪ್ರಾಚಾರ್ಯೆ ಡಾ| ಎಂ.ಎಸ್‌. ಸುಧಾದೇವಿ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಸಿ. ದಯಾನಂದ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಭಾರತಿ, ಅಬ್ದುಲ್‌ ರೆಹಮಾನ್‌, ಎಂ.ಮೂರ್ತಿ ಮತ್ತಿತರರು ಇದ್ದರು.

ಕಾನೂನುಗಳ ಬಗ್ಗೆ ಪ್ರತಿಯೊಬ್ಬರೂ ಅರಿವು ಮೂಡಿಸಿಕೊಂಡಾಗ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು. ಮನುಷ್ಯ ಹುಟ್ಟಿದ ಕ್ಷಣದಿಂದ ಸಾಯುವವರೆಗೆ ಕಾನೂನು ರಕ್ಷಣೆ ನೀಡುತ್ತದೆ. ಇದರೊಟ್ಟಿಗೆ ನಮ್ಮ ಕರ್ತವ್ಯವನ್ನೂ ಕೂಡ ಮರೆಯಬಾರದು. ಪ್ರೊ| ಡಿ.ಎಚ್‌. ನಟರಾಜ್‌ ಆಡಳಿತಾಧಿಕಾರಿ, ಸರಸ್ವತಿ ಕಾನೂನು ಕಾಲೇಜ್

Advertisement

Udayavani is now on Telegram. Click here to join our channel and stay updated with the latest news.

Next