Advertisement

ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಿ

02:01 PM May 10, 2022 | Team Udayavani |

ಚಿತ್ರದುರ್ಗ: ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಪಕ್ಷದ ಎಲ್ಲಾ ಘಟಕಗಳು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್. ನವೀನ್‌ ಕರೆ ನೀಡಿದರು.

Advertisement

ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ ನಡೆದ ಪ್ರಕೋಷ್ಠಗಳ ಜಿಲ್ಲಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪೂರ್ಣ ಪ್ರಮಾಣದ ಅಧಿಕಾರ ಪಡೆಯಬೇಕು ಎಂದರು.

ಪ್ರಕೋಷ್ಠಗಳ ರಾಜ್ಯ ಸಹ ಸಂಯೋಜಕ ಡಾ| ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಬಿಜೆಪಿಯಲ್ಲಿ 24 ಪ್ರಕೋಷ್ಠಗಳಿವೆ. ಪ್ರಕೋಷ್ಠಗಳ ಜಿಲ್ಲಾ ಸಮಾವೇಶಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಿಯೋಜನೆಯಾಗಿವೆ. ಮೇ 7 ರಂದು ತುಮಕೂರಿನಲ್ಲಿ ಜಿಲ್ಲಾ ಸಮಾವೇಶವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಉದ್ಘಾಟಿಸಿದ್ದಾರೆ. ಮೇ 31ರಂದು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಸಮಾವೇಶದ ಮೂಲಕ ಸಮಾರೋಪ ನಡೆಯಲಿದೆ. ಚಿತ್ರದುರ್ಗದಲ್ಲೂ ಶೀಘ್ರದಲ್ಲೇ ಪ್ರಕೋಷ್ಠಗಳ ಸಮಾವೇಶ ನಡೆಸಲಾಗುವುದು ಎಂದರು.

ಪೂರ್ವಭಾವಿ ಸಭೆಯಲ್ಲಿ ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಎ.ಬಿ. ಹನುಮಂತಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಬಾಳೆಕಾಯಿ ರಾಮದಾಸ್‌, ಸಂಪತ್‌ ಕುಮಾರ್‌, ಚಂದ್ರಿಕಾ ಲೋಕನಾಥ್‌, ಜಿಲ್ಲಾ ಕಾರ್ಯದರ್ಶಿ ಸಿಂಧು, ವಕ್ತಾರ ನಾಗರಾಜ್‌ ಬೇದ್ರೆ ಇದ್ದರು.

ನಮೋ ಕಪ್‌ ನಾಲ್ಕು ತಂಡಗಳಿಗೆ ಹಂಚಿಕೆ

Advertisement

ಜಿಲ್ಲಾ ಬಿಜೆಪಿಯಿಂದ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ನಮೋ ಕಪ್‌ ಅನ್ನು ನಾಲ್ಕು ತಂಡಗಳಿಗೆ ಸಮನಾಗಿ ಹಂಚಿಕೆ ಮಾಡಲಾಗಿದೆ.

ಮಳೆಯ ಕಾರಣದಿಂದ ಅಂತಿಮ ಪಂದ್ಯಗಳು ರದ್ದಾಗಿದ್ದು ಉತ್ತಮ ಆಟ ಪ್ರದರ್ಶಿಸಿ ಫೈನಲ್‌ ಪ್ರವೇಶಿಸಿದ್ದ ಚಿತ್ರದುರ್ಗ ನಗರ, ಮೊಳಕಾಲ್ಮೂರು ತಾಲೂಕು, ಎಸ್‌ಟಿ ಮೋರ್ಚಾ ಹಾಗೂ ಚಳ್ಳಕರೆ ತಾಲೂಕು ತಂಡಗಳಿಗೆ ಹಂಚಿಕೆ ಮಾಡಲಾಗಿದೆ. ಮಹಿಳಾ ತಂಡಗಳಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ತಂಡದ ನಡುವೆ ಅಂತಿಮ ಪಂದ್ಯ ನಡೆದಿದ್ದು, ಝಾನ್ಸಿರಾಣಿ ಲಕ್ಷ್ಮೀಬಾಯಿ ತಂಡ ಜಯ ಸಾಧಿಸಿ ಕಪ್‌ ತನ್ನದಾಗಿಸಿಕೊಂಡಿತು. ಈ ವೇಳೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌, ಜಿಲ್ಲಾಧ್ಯಕ್ಷ ಎ. ಮುರಳಿ, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ವಿಧಾನ ಪರಿಷತ್‌ ಸದಸ್ಯ ಕೆ.ಎಸ್. ನವೀನ್‌, ಖನಿಜ ನಿಗಮ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ಬಿಜೆಪಿ ಮುಖಂಡ ಟಿ.ಜಿ. ನರೇಂದ್ರನಾಥ್‌, ಪ್ರಾಯೋಜಕರಾದ ಜಿ.ಎಸ್. ಅನಿತ್‌ಕುಮಾರ್‌, ರಘುಚಂದನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next