Advertisement

ಕಡಿಮೆ ವೆಚ್ಚ-ತ್ವರಿತ ನ್ಯಾಯದಾನಕ್ಕೆ ಶ್ರಮಿಸಿ: ರಾಜ್ಯಪಾಲ ಗೆಹ್ಲೋತ್‌

10:21 AM Mar 27, 2022 | Team Udayavani |

ಧಾರವಾಡ: ವಿಶ್ವದಲ್ಲಿಯೇ ಅತ್ಯಂತ ಹಳೆಯ ಮತ್ತು ಬಲಿಷ್ಠ ನ್ಯಾಯ ವ್ಯವಸ್ಥೆ ಹೊಂದಿರುವ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿ, ಕಡಿಮೆ ವೆಚ್ಚ ಮತ್ತು ತ್ವರಿತಗತಿಯ ನ್ಯಾಯದಾನಕ್ಕೆ ಕಾನೂನು ಪದವೀಧರರು ಶ್ರಮಿಸಬೇಕು ಎಂದು ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಕಾನೂನು ವಿವಿಯ ಐದನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಘಟಿಕೋತ್ಸವ ಒಂದು ಭಾವನಾತ್ಮಕ ಕ್ಷಣ. ಈ ದಿನ ಪದವಿ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಜೀವನ ರೂಪಿಸಿದ ಶಿಕ್ಷಕರಿಗೆ, ಪೋಷಕರಿಗೆ ಹೆಮ್ಮೆಯ ಕ್ಷಣವಾಗಿದೆ. ಇಂದು ಎಲ್ಲಾ ಕಾನೂನು ಪದವೀಧರರು ಜೀವನದ ಹೊಸ ಸವಾಲು ಎದುರಿಸಲು, ಹೊಸ ವಾತಾವರಣ ಪ್ರವೇಶಿಸುತ್ತಿದ್ದಾರೆ. ಯುವ ಪದವೀಧರರು ದೇಶದ ಭವಿಷ್ಯ-ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ. ನ್ಯಾಯಾಂಗವನ್ನು ಹೆಚ್ಚು ಶಕ್ತಿಯುತವಾಗಿ, ಪ್ರಜಾಪ್ರಭುತ್ವದ ಪ್ರಮುಖ ಸ್ತಂಭವನ್ನಾಗಿ ಮಾಡಲು ಕೊಡುಗೆ ನೀಡಬೇಕು ಎಂದರು.

ಮಾನವೀಯತೆ ದೊಡ್ಡದು: ಘಟಿಕೋತ್ಸವ ಭಾಷಣ ಮಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ್‌ ವೈ. ಚಂದ್ರಚೂಡ್‌ ವರ್ಚುವಲ್‌ ಪರದೆ ಮೂಲಕ ಮಾತನಾಡಿ, ಯುವ ವಕೀಲರು ವೃತ್ತಿ ಘನತೆ, ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ವಕೀಲರಿಗೆ ಸಿಗುತ್ತಿರುವ ವೇತನ ಕಡಿಮೆ ಇದೆ. ಅದಕ್ಕಾಗಿ ಬಹಳ ಜನ ವಕೀಲಿ ವೃತ್ತಿ ತೊರೆದು ಕಾರ್ಪೊರೆಟ್‌ ಸಂಸ್ಥೆಗಳ ಕಾನೂನು ಸಲಹೆಗಾರರಾಗುತ್ತಿದ್ದಾರೆ. ಯಾವುದೇ ವೃತ್ತಿ ಆಯ್ದುಕೊಂಡರೂ ಮಾನವೀಯ ಮೌಲ್ಯಗಳನ್ನು ಆಧರಿಸಿಯೇ ವಕೀಲಿ ವೃತ್ತಿ ನಡೆಸಬೇಕೆಂದು ಕಿವಿಮಾತು ಹೇಳಿದರು.

ಪೋಷಕರಿಗೆ ಆಸರೆಯಾಗಿ: ಕಾನೂನು, ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಇಂದು ಪದವಿ ಪಡೆದು ವೃತ್ತಿಗೆ ಪ್ರವೇಶಿಸುತ್ತಿರುವ ಕಾನೂನು ಪದವೀಧರರು ತಮ್ಮನ್ನು ಈ ಹಂತಕ್ಕೆ ತಲುಪಿಸಿದ ಪಾಲಕರ-ಪೋಷಕರ ತ್ಯಾಗವನ್ನರಿತು ಅವರಿಗೆ ಆಸರೆಯಾಗಬೇಕು. ನ್ಯಾಯ-ಸಮಾನತೆ ಎತ್ತಿ ಹಿಡಿಯಲು ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಹಣ ಗಳಿಕೆಯೇ ಮುಖ್ಯವಲ್ಲ. ಪ್ರತಿಭೆ, ಅಧ್ಯಯನದಿಂದ ಸಮಾಜದಲ್ಲಿ ಗುರುತಿಸಿಕೊಂಡು ಗೌರವ ಪಡೆಯಬೇಕು ಎಂಬ ಮಹಾದಾಸೆಯೊಂದಿಗೆ ಈ ವೃತ್ತಿ ಆಯ್ದುಕೊಂಡಿರುತ್ತೇವೆ. ವಕೀಲರಿಗೆ ಪ್ರಕರಣ ನೀಡಿ, ಶುಲ್ಕ ಕಟ್ಟಿ ಬದುಕು ನಿರ್ವಹಣೆಗೆ ಕಾರಣವಾಗುವ ಕಕ್ಷಿದಾರರನ್ನು ಗೌರವದಿಂದ ಕಾಣಬೇಕು ಎಂದರು.

Advertisement

5188 ವಿದ್ಯಾರ್ಥಿಗಳಿಗೆ ಪದವಿ: 2355 ವಿದ್ಯಾರ್ಥಿಗಳು ಪ್ರತ್ಯಕ್ಷ ಹಾಗೂ ಗೈರು ಹಾಜರಿಯಲ್ಲಿ 2745 ವಿದ್ಯಾರ್ಥಿಗಳು ಸೇರಿ ಒಟ್ಟು 5188 ವಿದ್ಯಾರ್ಥಿಗಳಿಗೆ ವಿವಿಧ ಪದವಿ, ಸ್ನಾತಕೋತ್ತರ ಪದವಿ, ಸ್ವರ್ಣ ಪದಕಗಳು, ಓರ್ವರಿಗೆ ಪಿಎಚ್‌ಡಿ ಪದವಿಯನ್ನು ರಾಜ್ಯಪಾಲರು ಪ್ರದಾನ ಮಾಡಿದರು. ವಿವಿ ಕುಲಪತಿ ಪ್ರೊ| ಈಶ್ವರ ಭಟ್‌, ಮೌಲ್ಯಮಾಪನ ಕುಲಸಚಿವ ಪ್ರೊ| ಜೆ.ಬಿ. ಪಾಟೀಲ, ಕುಲಸಚಿವ ಮಹ್ಮದ್‌ ಜುಬೇರ್‌, ಡೀನ್‌ ರತ್ನಾ ಭರಮಗೌಡರ ಸೇರಿ ವಿವಿಧ ವಿಭಾಗಗಳ ಮುಖ್ಯಸ್ಥರಿದ್ದರು.

ವಿದೇಶಿ ವಿದ್ಯಾರ್ಥಿಗಳೊಂದಿಗೆ ರಾಜ್ಯಪಾಲರ ಸಂವಾದ: ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳೂ ಆದ ಥಾವರಚಂದ್‌ ಗೆಹ್ಲೋತ್‌ ಅವರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿವಿಯ ಪ್ರಯೋಗಾಲಯ ವೀಕ್ಷಿಸಿದರು. ಕುಲಪತಿ ಪ್ರೊ| ಎಂ.ಬಿ.ಚೆಟ್ಟಿ, ಮಹಾನಗರ ಪಾಲಿಕೆ ಅಪರ್‌ ಆಯುಕ್ತ ಮಾಧವ ಗಿತ್ತೆ ಮತ್ತಿತರರು ಇದ್ದರು. ಇದಕ್ಕೂ ಮುನ್ನ ರಾಜ್ಯಪಾಲರಿಗೆ ಗೌರವ ರಕ್ಷೆ ನೀಡಲಾಯಿತು.

 

ತಡವಾಗಿ ನೀಡಿದ ನ್ಯಾಯವೂ ಅನ್ಯಾಯವೇ ಎಂದು ಹೇಳಲಾಗುತ್ತದೆ. ಬಡವರಿಗೆ ಸಕಾಲದಲ್ಲಿ ನ್ಯಾಯ ಒದಗಿಸುವಲ್ಲಿ ಕಾನೂನು ಪದವೀಧರರು ಸಂಕಲ್ಪ ಮಾಡಬೇಕು. ಸಾಮಾಜಿಕ-ಆರ್ಥಿಕ ಅಸಮಾನತೆಗಳು ನಿರ್ಮೂಲನೆಯಾಗಬೇಕು. ಸಮಾಜವನ್ನೊಳಗೊಳ್ಳುವ ಮತ್ತು ಸಂಪನ್ಮೂಲಗಳ ವಿತರಣೆ ಸಾರ್ವತ್ರಿಕ ಅಂಗೀಕಾರ ಆಧಾರದ ಮೇಲೆ ಇರಬೇಕು.

 ಥಾವರಚಂದ ಗೆಹ್ಲೋತ್‌, ರಾಜ್ಯಪಾಲ.

 

ಗದ್ಗದಿತರಾದ ಸುನಿತಾ ಶಾಂತನಗೌಡರ: ಹೆಸರಾಂತ ಕಾನೂನು ತಜ್ಞ, ದಿ| ನ್ಯಾ| ಮೋಹನ್‌ ಎಂ. ಶಾಂತನಗೌಡರ ಅವರ ಅತ್ಯುತ್ತಮ ಕೆಲಸ ಮತ್ತು ಸೇವೆಗಳಿಗಾಗಿ ಮರಣೋತ್ತರವಾಗಿ ನೀಡಿರುವ ಗೌರವ ಡಾಕ್ಟರೇಟ್‌ ಪದವಿಯನ್ನು ಅವರ ಪತ್ನಿ ಸುನಿತಾ ಮೋಹನ್‌ ಶಾಂತನಗೌಡರ ಸ್ವೀಕರಿಸುವಾಗ ಭಾವಪರವಶರಾಗಿ ಗದ್ಗದಿತರಾದರು.

Advertisement

Udayavani is now on Telegram. Click here to join our channel and stay updated with the latest news.

Next