ಕಳೆದ ಶುಕ್ರವಾರ ಪ್ರವೀಣ್ ತೇಜ್ ಅಭಿನಯದ “ಸ್ಟ್ರೈಕರ್’ ಚಿತ್ರ ರಾಜ್ಯಾದ್ಯಂತ ಸುಮಾರು 60ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಅದ್ಧೂರಿಯಾಗಿ ತೆರೆಗೆ ಬಂದಿದೆ. ಇನ್ನು “ಸ್ಟ್ರೈಕರ್’ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತ ಎರಡನೇ ವಾರಕ್ಕೆ ಕಾಲಿಡುತ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಈ ವಾರ ಇನ್ನಷ್ಟು ಚಿತ್ರಮಂದಿರಗಳಲ್ಲಿ “ಸ್ಟ್ರೈಕರ್’ ಬಿಡುಗಡೆ ಮಾಡುತ್ತಿದೆ. ಜೊತೆಗೆ “ಸ್ಟ್ರೈಕರ್’ ಚಿತ್ರಕ್ಕೆ ತೆಲೂಗಿನಲ್ಲೂ ಭಾರೀ ಬೇಡಿಕೆ ಬರುತ್ತಿದ್ದು, ಚಿತ್ರವನ್ನು ತೆಲುಗಿಗೂ ಡಬ್ ಮಾಡುವ ಯೋಜನೆಯಲ್ಲಿದೆ. ತೆಲುಗಿನ “ಯವಡೇ ಸುಬ್ರಮಣ್ಯಂ’, “ಮಹಾನಟಿ’ ಚಿತ್ರಗಳ ಖ್ಯಾತಿಯ ನಿರ್ದೇಶಕ, ನಿರ್ಮಾಪಕ ನಾಗ್ ಅಶ್ವಿನ್, “ಸ್ಟ್ರೈಕರ್’ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದು, ತೆಲುಗಿಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ. ಸದ್ಯ ತೆಲುಗು ಡಬ್ಬಿಂಗ್ ಕೆಲಸಗಳು ಆರಂಭಗೊಂಡಿದ್ದು, ಒಂದೆರಡು ತಿಂಗಳಿನಲ್ಲಿ ಚಿತ್ರ “ಸ್ಟ್ರೈಕರ್’ ಚಿತ್ರ ತೆಲುಗಿನಲ್ಲೂ ತೆರೆಕಾಣಲಿದೆ ಎನ್ನುತ್ತಿವೆ ಚಿತ್ರದ ಮೂಲಗಳು. ಇದರೊಂದಿಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಮತ್ತು ತಮಿಳು ಡಬ್ಬಿಂಗ್, ರಿಮೇಕ್ ರೈಟ್ಸ್‌ಗೂ ಬೇಡಿಕೆ ಬರುತ್ತಿದ್ದು, ಎಲ್ಲವೂ ಇನ್ನೂ ಮಾತುಕತೆಯ ಹಂತದಲ್ಲಿದೆ ಎಂದಿದೆ ಚಿತ್ರತಂಡ.
“ಸ್ಟ್ರೈಕರ್’ ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ನಿರ್ದೇಶಕ ಪವನ್ ತ್ರಿವಿಕ್ರಮ್, “”ಸ್ಟ್ರೈಕರ್’ ಬಿಡುಗಡೆಗೂ ಮುನ್ನ ದಿನ ನಿದ್ದೆ ಮಾಡಿರಲಿಲ್ಲ. ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ, ಏನೋ, ಎಂಬ ಭಯವಿತ್ತು. ಆದರ ಚಿತ್ರದ ಫಸ್ಟ್ ಡೇ, ಫಸ್ಟ್ ಶೋ ನೋಡಿದ ಪ್ರೇಕ್ಷಕರಿಂದ ಬಂದ ಪ್ರತಿಕ್ರಿಯೆ ಕೇಳಿದ ನಂತರ ಆ ಭಯ ಕಡಿಮೆಯಾಯಿತು. ಸದ್ಯ ಚಿತ್ರವನ್ನು ನೋಡಿದ ಪ್ರೇಕ್ಷಕರು, ಮಾಧ್ಯಮಗಳು, ವಿಮರ್ಶಕರಿಂದ “ಸ್ಟ್ರೈಕರ್’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವುದರಿಂದ ಖುಷಿಯಾಗುತ್ತಿದೆ. ಚಿತ್ರದ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು’ ಎಂದರು.
ಚಿತ್ರದ ನಾಯಕ ಪ್ರವೀಣ್ ತೇಜ್ ಹೇಳುವಂತೆ, “ಸ್ಟ್ರೈಕರ್’ ಚಿತ್ರ ತೆರೆಗೆ ಮೇಲೆ ಹೇಗೆ ಬರಬಹುದು ಎಂಬ ಕುತೂಹಲ ಮತ್ತು ಹೊಸತಂಡವಾಗಿದ್ದರಿಂದ ಸ್ವಲ್ಪ ಆತಂಕ ಎರಡೂ ಒಟ್ಟಾಗಿತ್ತಂತೆ. ಈ ಬಗ್ಗೆ ಮಾತನಾಡುವ ಪ್ರವೀಣ್ ತೇಜ್, “ನಾನು ಈಗಾಗಲೇ ಐದಾರು ಚಿತ್ರಗಳಲ್ಲಿ ಅಭಿನಯಿಸಿರುವುದರಿಂದ ಒಂದು ಚಿತ್ರವನ್ನು ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದೇನೆ. ಚಿತ್ರ ಸರಿಯಾಗಿ ಮಾಡದಿದ್ದರೆ, ಅದು ದಾರಿ ತಪ್ಪುವುದನ್ನೂ ನೋಡಿದ್ದೇನೆ. ಹಾಗಾಗಿ ಈ ಚಿತ್ರವನ್ನು ಮಾಡುವಾಗ ಅದೇ ಭಯ ನನ್ನನ್ನು ಕಾಡುತ್ತಿತ್ತು. ಅದರಿಂದಾಗಿಯೇ, ನಿರ್ದೇಶಕರು, ಪ್ರೊಡಕ್ಷನ್ಸ್, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಲ್ಲೂ ನಾನು ಸ್ವಲ್ಪ ಹೆಚ್ಚಾಗಿಯೇ ಮೂಗು ತೋರಿಸುತ್ತಿದ್ದೆ. ಇದರಿಂದಾಗಿ ಎಷ್ಟೋ ಸಲ ನಾನು, ನಿರ್ದೇಶಕರು ಜಗಳ ಮಾಡಿಕೊಂಡಿದ್ದೂ ಉಂಟು. ಅಂತಿಮವಾಗಿ ಚಿತ್ರ ನಾವಂದುಕೊಂಡಂತೆ ತೆರೆಗೆ ಬಂದಿದೆ. ಚಿತ್ರ ತೆರೆಗೆ ಬರುವುದರವರೆಗೆ ಸಾಮಾನ್ಯವಾಗಿ ಎಲ್ಲರೂ ಒಗ್ಗಟ್ಟಾಗಿರುತ್ತಾರೆ. ಆದ್ರೆ ಚಿತ್ರ ತೆರೆಗೆ ಬಂದ ನಂತರ ಅಸಮಾಧಾನ ಚಿತ್ರತಂಡದ ಎಲ್ಲರಲ್ಲೂ ಬೇರೆ ಬೇರೆ ಮಾಡುವುದನ್ನು ನೋಡಿದ್ದೇನೆ. ಆದ್ರೆ ಸ್ಟ್ರೈಕರ್ ಚಿತ್ರ ತೆರೆಕಂಡ ನಂತರವೂ ನಾವೆಲ್ಲಾ ಒಂದಾಗಿದ್ದೇವೆ. ಒಳ್ಳೆಯ ಚಿತ್ರವನ್ನು ಕೊಟ್ಟಿದ್ದೇವೆ ಎಂಬ ಖುಷಿ ಇದೆ’ ಎಂದರು.
ಚಿತ್ರದ ನಾಯಕಿ ಶಿಲ್ಪಾ ಮಂಜುನಾಥ್, ನಟ ಧರ್ಮಣ್ಣ ಕಡೂರ್ “ಸ್ಟ್ರೈಕರ್’ ಚಿತ್ರದ ಯಶಸ್ಸಿಗೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು. “ಸ್ಟ್ರೈಕರ್’ ಚಿತ್ರದ ಯಶಸ್ವಿ ಪ್ರದರ್ಶನದ ಬಗ್ಗೆ ನಿರ್ಮಾಪಕರಾದ ಶಂಕರಣ್ಣ, ರಮೇಶ್ ಬಾಬು, ಸುರೇಶ್ ಬಾಬು ಸಂತಸವನ್ನು ಹಂಚಿಕೊಂಡರು.