ಸಿದ್ದಾಪುರ: ಸಂಚಾರಕ್ಕೆ ಕಂಟಕವಾಗಿರುವ ರಸ್ತೆಗಳ ಹೊಂಡ, ತಗ್ಗುಗಳಿಗೆ ಮಣ್ಣು ತುಂಬಿ ಸರಿಪಡಿಸುವ ಕಾರ್ಯಕ್ಕೆ ಮುಂದಾಗುವ ಮೂಲಕ ತಾಲೂಕಿನ ಟೆಂಪೋ ಮಾಲಕ, ಚಾಲಕರ ಸಂಘದ ಸದಸ್ಯರು ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿದರು.
ತಮ್ಮ ಕಾರ್ಯದ ಮೂಲಕ ಮುಷ್ಕರ, ಪ್ರತಿಭಟನೆಗಳಿಗೆ ಹೊಸ ಮಾದರಿ ಕೊಟ್ಟರು. ದಿನ ನಿತ್ಯದ ಆದಾಯ, ವೇತನ ನಂಬಿಕೊಂಡ ಟೆಂಪೋ ಮಾಲಕ, ಚಾಲಕರು ಆ ಬಗ್ಗೆ ಚಿಂತಿಸದೇ ಇಡೀ ದಿನ ರಸ್ತೆ ದುರಸ್ತಿ ಮಾಡಿ ಸರಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿದ್ದಾರೆ.
ಹೊಂಡಗಳಿಗೆ ಮಣ್ಣು ತುಂಬಿ ಸರಿಪಡಿಸಲು ಸುಮಾರು 30 ಸದಸ್ಯರಿರುವ ಸಂಘ ನಿತ್ಯದ ದುಡಿಮೆ ಪರಿಗಣಿಸದೇ ಮಂಗಳವಾರ ಬೆಳಗ್ಗೆ 9ರಿಂದ ಸಿದ್ದಾಪುರ- ಕುಮಟಾ ರಾಜ್ಯ ಹೆದ್ದಾರಿಯ ಕೆಇಬಿ ಗ್ರೀಡ್ ಬಳಿಯಿಂದ ಪಿಕಾಸಿ, ಗುದ್ದಲಿ, ಬುಟ್ಟಿ ಹಿಡಿದು ಕೆಲಸ ಆರಂಭಿಸಿದರು. ಲೋಕೋಪಯೋಗಿ ಇಲಾಖೆ ಮಾಡುವ ಕಾಟಾಚಾರದ ಕೆಲಸದ ಬದಲಾಗಿ ಸಮರ್ಪಕವಾಗಿ ಮಣ್ಣು ತುಂಬಿ ಸರಿಪಡಿಸಿದರು.
ಅಲ್ಲಿಗೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಸಂಘದ ಅಧ್ಯಕ್ಷ ಗಣೇಶ ಪಿ.ಭಟ್ಟ ಮಾತನಾಡಿ, ಕುಮಟಾ ರಸ್ತೆ ಮಾತ್ರವಲ್ಲದೇ ತಾಲೂಕಿನ ಬಹುತೇಕ ಎಲ್ಲ ರಸ್ತೆಗಳು ಹೊಂಡ ಬಿದ್ದು ಹಾಳಾಗಿವೆ. ವಾಹನ ಸಂಚಾರಕ್ಕೆ ಕಷ್ಟವಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ಸರಿಪಡಿಸಬಹುದು ಎಂದು ಸಾಕಷ್ಟು ಕಾದರೂ ಅದಕ್ಕೆ ಇಲಾಖೆ ಮುಂದಾಗಲಿಲ್ಲ. ಸರಕಾರಕ್ಕೆ ಈ ಬಗ್ಗೆ ಹಲವು ಬಾರಿ ಬೇಡಿಕೆ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಕೇವಲ ಮುಷ್ಕರ ಮಾಡುವ ಬದಲು ನಮ್ಮ ಶ್ರಮ ಸಾರ್ಥಕವಾಗಬೇಕು ಎನ್ನುವ ದೃಷ್ಟಿಯಿಂದ ಈ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದೇವೆ. ನಮ್ಮಲ್ಲಿ 16 ಟೆಂಪೋಗಳಿದ್ದು ನಮ್ಮ ವಾಹನಗಳ ಸಂಚಾರವನ್ನು ನಿಲ್ಲಿಸಿ ಇಡೀದಿನ ಎಷ್ಟು ಸಾಧ್ಯವೋ ಅಷ್ಟು ರಸ್ತೆಯ ಹೊಂಡಗಳನ್ನು ತುಂಬುತ್ತೇವೆ. ಸರಕಾರ ರಸ್ತೆಗಳ ದುರಸ್ತಿಗೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಇನ್ನಿತರ ರಸ್ತೆಗಳ ಹೊಂಡಗಳನ್ನ ಸರಿಪಡಿಸುವ ಉದ್ದೇಶವಿದೆ ಎಂದರು.
ಲೋಕೋಪಯೋಗಿ ಇಲಾಖೆ ನಿಷ್ಕಾಳಜಿ: ಹಲವು ತಿಂಗಳಿಂದ ತಾಲೂಕಿನ ಎಲ್ಲ ರಸ್ತೆಗಳು ಹಾಳಾಗಿ, ಸಂಚಾರಕ್ಕೆ ಸಮಸ್ಯೆಯಾಗಿದ್ದರೂ ಲೋಕೋಪಯೋಗಿ ಇಲಾಖೆ ಮಾತ್ರ ಕಣ್ಣುಮುಚ್ಚಿ ಕೂತಿದೆ ಎಂದು ಸಾರ್ವಜನಿಕರು ಸಾಕಷ್ಟು ಬಾರಿ ಹೇಳಿದ್ದರು. ಆಗ ಇಲಾಖೆ ಅಧಿಕಾರಿಗಳು ಕೆಲವೆಡೆ ಹೊಂಡ ತುಂಬಿ ಜನರ ಕಣ್ಣು ಕಟ್ಟುವ ಪ್ರಯತ್ನ ಮಾಡಿದ್ದರು.
ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಶೀಘ್ರವಾಗಿ ಕೆಲಸ ಆರಂಭಿಸುತ್ತೇವೆ ಎಂದುಹೇಳಿ ನುಣುಚಿಕೊಂಡಿದ್ದರೇ ಹೊರತು ಎಲ್ಲಿಯೂ ಕಾಮಗಾರಿ ಆರಂಭಿಸಿಲ್ಲ. ಇಲ್ಲಿಯ ಜನಪ್ರತಿನಿಧಿಗಳೂ ಅಧಿಕಾರಿಗಳ ಮಾತುಗಳನ್ನು ಕೇಳಿ ಸುಮ್ಮನುಳಿದರೇ ವಿನಃ ಕಾಮಗಾರಿ ಬಗ್ಗೆ ಗಮನ ಕೊಟ್ಟಿಲ್ಲ. ಈಗ ಟೆಂಪೋ ಸಂಘದವರು ಮಾಡಿದ ಕೆಲಸಕ್ಕೂ ಬಿಲ್ ಹಾಕಿ ಹಣ ಹೊಡೆಯುವ ಸಾಧ್ಯತೆಯೂ ಇದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.