Advertisement

ಗಣಿ ಆಡಳಿತ ವರ್ಗಕ್ಕೆ ಮುಷ್ಕರದ ನೋಟಿಸ್‌

12:53 PM Nov 10, 2018 | Team Udayavani |

ಹಟ್ಟಿ ಚಿನ್ನದ ಗಣಿ: ಟಿಯುಸಿಐ ನೇತೃತ್ವದ ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಮುಖಂಡರು ಗುರುವಾರ ನಡೆಸಿದ ಕಾರ್ಮಿಕರ ಸಾಮಾನ್ಯ ಸಭೆಯಲ್ಲಿನ ನಿರ್ಣಯದಂತೆ ಗಣಿ ಕಂಪನಿ ಆಡಳಿತ ವರ್ಗಕ್ಕೆ 14 ದಿನಗಳ ಮುಷ್ಕರದ ನೋಟಿಸ್‌ನ್ನು ಶುಕ್ರವಾರ ಸಲ್ಲಿಸಿದರು.

Advertisement

ಕಾರ್ಮಿಕ ಸಂಘದ ಅಧಿಕೃತ ಕಚೇರಿಯಾದ ಪೈಭವನದಿಂದ ಗಣಿ ಕಂಪನಿವರೆಗೆ ಮೆರೆವಣಿಗೆ ಮೂಲಕ ತೆರಳಿದರು. ಕಂಪನಿ ಮುಖ್ಯ ಆಡಳಿತಾಧಿಕಾರಿಗಳ ಕಚೇರಿ ಬಳಿ ಬಂದು ಮುಷ್ಕರದ ನೋಟಿಸ್‌ ಓದಿ ಪ್ರಧಾನ ವ್ಯವಸ್ಥಾಪಕ(ಗಣಿ) ಪ್ರಕಾಶ ಬಹದ್ದೂರ್‌ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ವ್ಯವಸ್ಥಾಪಕ(ಗಣಿ) ಪ್ರಕಾಶ ಬಹದ್ದೂರ್‌, ಗಣಿ ಆಡಳಿತ ವರ್ಗ ಆದಷ್ಟು ಶೀಘ್ರದಲ್ಲಿ ಕಾರ್ಮಿಕರ ವೇತನ ಒಪ್ಪಂದ ಜಾರಿಗೆ ತರಲಿದೆ. ದುಡುಕಿ ಮುಷ್ಕರದಂತ ಚಳವಳಿಗೆ ಇಳಿಯಬೇಡಿ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ಹೇಳಿದರು. 

ಇದರಿಂದ ಆಕ್ರೋಶರಾದ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಮಹ್ಮದ್‌ ಅಮೀರಅಲಿ, ಇಷ್ಟು ಹೇಳುವ ನೀವು ವೇತನ ಒಪ್ಪಂದ ಜಾರಿಗೆ ಯಾಕಿಷ್ಟು ವಿಳಂಬವಾಗುತ್ತಿದೆ. ನಿರ್ದೇಶಕ ಮಂಡಳಿ ಸದಸ್ಯರಿಗೆ ತಿಳಿಹೇಳಿ ಅದನ್ನು ಜಾರಿಗೆ ತರಬೇಕಾಗಿತ್ತಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಮರು ಉತ್ತರ ನೀಡಿದ ಪ್ರಧಾನ ವ್ಯವಸ್ಥಾಪಕ, ಇದೊಂದು ಸರಕಾರಿ ಕಂಪನಿಯಾಗಿದೆ. ಆದ್ದರಿಂದ ಸರಕಾರದ ನಿಯಮ ಪಾಲಿಸಬೇಕಾಗುತ್ತದೆ. ನಿರ್ದೇಶಕ ಮಂಡಳಿ ಒಪ್ಪಿಗೆ ನೀಡಿದ ನಂತರ ಸರಕಾರದ ವಿವಿಧ ಇಲಾಖೆಗಳಲ್ಲಿ ತಡವಾಗಬಾರದು ಎಂಬ ಉದ್ದೇಶದಿಂದ ಸಂಪೂರ್ಣವಾಗಿ ಪರಿಶೀಲಿಸಲು
ಅಧ್ಯಯನಕ್ಕಾಗಿ ಸಮಿತಿ ಹಾಗೂ ಉಪ ಸಮಿತಿ ನೇಮಿಸಿದೆ. ಆದಷ್ಟು ಶೀಘ್ರ ವೇತನ ಒಪ್ಪಂದ ಜಾರಿಯಾಗಲಿದೆ ಎಂದು ಹೇಳಿದರು. 

ಪ್ರಧಾನ ವ್ಯವಸ್ಥಾಪಕರ ಮಾತು ಒಪ್ಪದ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ, ವೇತನ ಒಪ್ಪಂದದ ಮಾತುಕತೆ ಮುಗಿದು 5 ತಿಂಗಳಾಗಿವೆ. ಬರೀ ಭರವಸೆ ಕೇಳಿ ಇರಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಸಾಮಾನ್ಯ ಸಭೆ ನಡೆಸಿ ಮುಷ್ಕರದ ನೋಟಿಸ್‌ ನೀಡಿದ್ದೇವೆ. ಮುಷ್ಕರ ನಡೆದರೂ ಕಾಯ್ದೆ ಪ್ರಕಾರ ಕಾರ್ಮಿಕರಿಗೆ ವೇತನ ನೀಡಬೇಕಾಗುತ್ತದೆ ಎಂದು ಖಾರವಾಗಿ ಹೇಳಿದರು.

Advertisement

ಕಂಪನಿ ಮುಖ್ಯ ಆಡಳಿತಾಧಿಕಾರಿ ಡಾ| ಜಗದೀಶ ನಾಯ್ಕ ಮಾತನಾಡಿ, ಕಾರ್ಮಿಕರ ವೇತನ ಒಪ್ಪಂದ ವಿಳಂಬವಾಗದಂತೆ ಜಾರಿಗಾಗಿ ಕಂಪನಿ ಪ್ರಧಾನ ವ್ಯವಸ್ಥಾಪಕ(ಸಮನ್ವಯ) ಡಾ| ಪ್ರಭಾಕರ ಸಂಗೂರಮಠ ಈಗಾಗಲೇ ಬೆಂಗಳೂರಿಗೆ ತೆರಳಿದ್ದಾರೆ. ಮುಷ್ಕರ ನಡೆಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಮುಷ್ಕರದ ನೋಟಿಸ್‌ ನೀಡದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಮಹ್ಮದ್‌ ಅಮೀರಅಲಿ, ಧರಣಿ ನಂತರ ನೇರವಾಗಿ ಕಂಪನಿ ಬಂದ್‌ ಮಾಡುವಂತ ಮುಷ್ಕರಕ್ಕಿಳಿಯುವ ಬದಲಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬಹುದಿತ್ತಲ್ಲ ಎಂಬ ಪ್ರಶ್ನೆಗೆ, ನಾಲ್ಕು ಸಾವಿರ ಕಾರ್ಮಿಕರಿಗಾಗಿ ಉಪವಾಸ ಕುಳಿತು ನ್ಯಾವೇಕೆ ಸಾಯಬೇಕು. ಮಹಾತ್ಮಾ ಗಾಂಧೀಜಿ ಉಪವಾಸ ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿರಬಹುದು. ಆದರೆ ಈ ಮೋದಿ ಆಡಳಿತದಲ್ಲಿ ಉಪವಾಸ ಕುಳಿತವರಿಗೆ ಬೆಲೆ ಇಲ್ಲವಾಗಿದೆ. ಸತ್ತರೆ ಸಾಯಿಲಿ ಬಿಡಿ ಎಂದು ನಿರ್ಲಕ್ಷ್ಯವಹಿಸಲಾಗುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕ ಸಂಘದ ರೇವಣಸಿದ್ದಪ್ಪ, ಸೋಮಣ್ಣ ಪಾಟೀಲ ಜವಳಗೇರಾ, ಎಚ್‌.ಎ. ಲಿಂಗಪ್ಪ, ಬಾಬು ಭೂಪುರ, ಗುಡದಪ್ಪ, ನಾಗೇಶ್ವರರಾವ್‌, ಮುರಳಿಮೋಹನ, ಡಿ.ಕೆ. ಲಿಂಗಸುಗೂರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next