ಚಿಕ್ಕಬಳ್ಳಾಪುರ: ಕೇಂದ್ರದ ಬಿಜೆಪಿ ಸರ್ಕಾರ ದಮನ ಮಾಡುತ್ತಿರುವ ಕಾರ್ಮಿಕ ಕಾನೂನುಗಳನ್ನು ರಕ್ಷಿಸುವ ದಿಸೆಯಲ್ಲಿ ದೇಶದ 11 ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜ.8ಕ್ಕೆ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಜಿಲ್ಲಾದ್ಯಂತ ಆಚರಿಸಲಾಗುವುದು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ತಿಳಿಸಿದರು.
ನಗರದ ವಾಪಸಂದ್ರದಲ್ಲಿರುವ ಸಿಐಟಿಯು ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಸಿಐಟಿಯು ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ವೇತನ ನೀಡಲಿ: ಕೇಂದ್ರ ಸರ್ಕಾರ 1948ರ ಕಾರ್ಮಿಕ ಕಾನೂನುಗಳನ್ನು ರಕ್ಷಣೆ ಮಾಡಬೇಕಿದೆ. ತಿದ್ದುಪಡಿ ತರಲು ಉದ್ದೇಶಿಸಿರುವ ಕಾನೂನುಗಳನ್ನು ಕೂಡಲೇ ಕೈ ಬಿಡಬೇಕು. ಸ್ಕೀಂ ವರ್ಕರ್ ಎಂದು ಹೇಳುವ ಅಂಗನವಾಡಿ, ಆಶಾ, ಅಕ್ಷರ ದಾಸೋಹ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಕನಿಷ್ಠ ವೇತನ ನೀಡಬೇಕೆಂದರು.
21 ಸಾವಿರ ರೂ. ನಿಗದಿಗೊಳಿಸಿ: ಗ್ರಾಪಂ ನೌಕರರಿಗೆ ಆನ್‌ಲೈನ್ ಮುಖಾಂತರ ಕನಿಷ್ಠ ವೇತನವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿ ಮಾಡಬೇಕು. ಪ್ರತಿ ಕಾರ್ಮಿಕನಿಗೆ ಕನಿಷ್ಠ 21 ಸಾವಿರ ರೂ. ವೇತನ ನಿಗದಿಗೊಳಿಸುವ ಬಗ್ಗೆ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಅಖಿಲ ಭಾರತ ಕಾರ್ಮಿಕ ಸಮ್ಮೇಳನದ ನಿರ್ಣಯವನ್ನು ಜಾರಿಗೆ ತರಬೇಕೆಂದು ಸಿದ್ದಗಂಗಪ್ಪ ಆಗ್ರಹಿಸಿದರು.
ಕಾನೂನು ದುರ್ಬಲಗೊಳಿಸಲು ಯತ್ನ: ಕಾರ್ಮಿಕರಿಗೆ ಸಿಗುತ್ತಿರುವ ಅಲ್ಪವೇತನ ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಮಕ್ಕಳ ಶಿಕ್ಷಣ ಶುಲ್ಕದಿಂದ ಹಿಡಿದು ಮನೆ ಬಾಡಿಗೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಾರ್ಮಿಕರ ರಕ್ಷಣೆಗೆ ಇರುವ ಕಾನೂನುಗಳನ್ನು ತಿದ್ದುಪಡಿ ಹೆಸರಿನಲ್ಲಿ ಇನ್ನಷ್ಟು ರ್ದುಬಲಗೊಳಿಸುವ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಟೀಕಿಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಸಾರ್ವತ್ರಿಕ ಮುಷ್ಕರವನ್ನು ಜಿಲ್ಲಾದ್ಯಂತ ಯಶಸ್ವಿಗೊಳಿಸಲು ಸಿಐಟಿಯು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದಕ್ಕಾಗಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಪೂರ್ವಭಾವಿ ಸಭೆ ನಡೆಸಿ ದುಡಿಯುವ ವರ್ಗವಾದ ಕೃಷಿ ಕೂಲಿ ಕಾರ್ಮಿಕರನ್ನು ಹಾಗೂ ಮಹಿಳೆಯರನ್ನು ಹೋರಾಟಕ್ಕೆ ಅಣಿಗೊಳಿಸಲಾಗುವುದು ಎಂದರು.
ಸಾರ್ವತ್ರಿಕ ಮುಷ್ಕರ ಹಿನ್ನಲೆಯಲ್ಲಿ ಡಿ.30 ರಂದು ಗೌರಿಬಿದನೂರು, 31ಕ್ಕೆ ಚಿಂತಾಮಣಿ, ಜ.2ಕ್ಕೆ ಚಿಕ್ಕಬಳ್ಳಾಪುರದಲ್ಲಿ ತಾಲೂಕು ಮಟ್ಟದ ಸಮಾವೇಶ ನಡೆಸಿ ಕಾರ್ಮಿಕರಲ್ಲಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲಾಗುವುದು ಎಂದರು. ಸಭೆಯಲ್ಲಿ ಚಿಂತಾಮಣಿ ಅಧ್ಯಕ್ಷ ನಾಗರಾಜ್, ತಿಪ್ಪಣ್ಣ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಆಂಜನೇಯರೆಡ್ಡಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.