ಹೊಸಪೇಟೆ: ಕೇಂದ್ರ ಸರ್ಕಾರದ ಖಾಸಗೀಕರಣ ಹಾಗೂ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ವತಿಯಿಂದ ಜ. 8ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಕರ್ನಾಟಕ ರಾಜ್ಯಾಧ್ಯಕ್ಷ ಎಸ್.ಎಸ್. ಪ್ರಕಾಶಂ ಹೇಳಿದರು.
ನಗರದ ಪ್ರವಾಸ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕಾರ್ಮಿಕರ ವಿರೋಧಿ ನೀತಿಯನ್ನು ಖಂಡಿಸಿ, ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಅಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಳ್ಳಾರಿ ಹಾಗೂ ಹೊಸಪೇಟೆ ನಗರದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.
ಎಲ್‌ಐಸಿ ಹಾಗೂ ಬಿಎಸ್‌ಎನ್‌ಎಲ್, ಏರ್‌ಇಂಡಿಯಾ ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಹೊರಟಿದೆ. ಕಾರ್ಮಿಕರಿಂದ ಏರ್‌ಇಂಡಿಯಾ ನಷ್ಟದಲ್ಲಿದೇ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಕಾರ್ಮಿಕರು ಕೆಲಸ ಮಾಡುತ್ತಾರೆ. ಆಡಳಿತವನ್ನು ಕೇಂದ್ರ ಸರಕಾರ ಮಾಡುತ್ತದೆ. ಕೇಂದ್ರ ಸರಕಾರ ಕಾರ್ಮಿಕರ ಮೇಲೆ ನಷ್ಟ ಹೊರೆಯನ್ನು ಹಾಕಿ, ಎಸ್ಕೇಪ್ ಆಗಲು ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಏರ್‌ಇಂಡಿಯಾ 700 ಕೋಟಿ ರೂ.ನಷ್ಟವಾಗಿರುವುದು ಸರಕಾರಿ ನೌಕರರಿಂದ. ಪ್ರಯಾಣಿಸಿದ ಹಣವನ್ನು ಸರಿಯಾಗಿ ಸರಕಾರಕ್ಕೆ ಪಾವತಿಸಿಲ್ಲ. ಹೀಗಾಗಿ ನಷ್ಟ ಅನುಭವಿಸುವಂತಾಗಿದೆ ಎಂದರು. ಸರಕಾರಿ ಪಿಎಫ್ ಹಣ ಹಾಗೂ ಕಟ್ಟಡ ಕಾರ್ಮಿಕರ ಮಂಡಳಿಯ 8 ಸಾವಿರ ಕೋಟಿ ಹಣವನ್ನು ಬೇರೆ ಕಡೆ ಬಂಡವಾಳ ಹೂಡಲು ಸರಕಾರ ನಿರ್ಧರಿಸಿದೆ. ಇತರನಾಗಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದರು.
ಸ್ಥಳೀಯ ಶಾಸಕ ಆನಂದ ಸಿಂಗ್ ಕಾರ್ಮಿರ ಹಿತಕಾಪಡುವಲ್ಲಿ ವಿಫಲರಾಗಿದ್ದಾರೆ. ದಿನಕ್ಕೊಂದು ಪಕ್ಷ ಬದಲಾವಣೆ ಮಾಡುತ್ತಿದ್ದಾರೆ. ಸಂಸದ ವೈ.ದೇವೇಂದ್ರಪ್ಪ ಸಂಸತ್‌ನಲ್ಲಿ ಜನರಿಗಾಗಿ ಪ್ರಶ್ನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರಲು ಸಿದ್ದರಾಮಯ್ಯ ಅವರು ಮುಂದಾಗಿದ್ದರು. ಅದನ್ನು ಕಾಫಿ ಮಾಡಿಕೊಂಡು ನರೇಂದ್ರ ಮೋದಿ ಅವರು ರೈತರಿಗೆ ಪಿಂಚಣಿ ಸೌಲಭ್ಯ ಒದಗಿಸುತ್ತಿದೆ. ಆದರೆ, ಸಿದ್ದರಾಮಯ್ಯ ಪಿಂಚಣಿ ಯೋಜನೆ ನರೇಂದ್ರ ಮೋದಿ ಅವರು ಒಪ್ಪಿಗೆ ನೀಡಲಿಲ್ಲ ಎಂದರು.
150 ರೈಲುಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಹೊರಟಿದೆ. ಇದು ಸರಿಯಾದ ನಡೆಯಲ್ಲ. ಈ ಹಿಂದೆ ಕಾಂಗ್ರೆಸ್ ಸರಕಾರ ರೈಲ್ವೆದಿಂದ ಲಾಭ ಬಯಸಿರಲಿಲ್ಲ. ಆದರೆ, ಮೋದಿ ಸರಕಾರ ನಷ್ಟದಲ್ಲಿದೆ ಎಂದು ಖಾಸಗೀರಣ ಮಾಡಲು ಹೊರಟಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖಂಡರಾದ ಜಯಕುಮಾರನಾಯ್ಡು, ಕೆ.ತಾಯಪ್ಪ, ನಾಗರಾಜ ಗುಜ್ಜಲ್, ಎಸ್.ಪಿ.ಮಂಜುನಾಥ, ಶ್ರೀನಿವಾಸ ಇನ್ನಿತರರಿದ್ದರು.