Advertisement
ಚಿಕ್ಕಬಳ್ಳಾಪುರ: ಪ್ರತಿಭಟನಕಾರರಿಗೆ ಎಲ್ಲೆಡೆ ಪೊಲೀಸರ ದಿಗ್ಬಂಧನ, ರಸ್ತೆ ತಡೆ ನಡೆಸಿದ 200 ಕ್ಕೂ ಹೆಚ್ಚು ಕಾರ್ಮಿಕರ ಮುಖಂಡರ, ಕಾರ್ಯಕರ್ತರ ಬಂಧನ. ಪೊಲೀಸ್ ಬಲ ಪ್ರಯೋಗಕ್ಕೆ ಜಿಲ್ಲಾದ್ಯಂತ ಅಖೀಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ, ಮುಷ್ಕರ ನಡುವೆಯು ಜಿಲ್ಲಾದ್ಯಂತ ಜನ ಜೀವನ ಎಂದಿನಂತೆ ಯಥಾಸ್ಥಿತಿ, ಕಾರ್ಮಿಕ ಕಾನೂನುಗಳ ತಿದ್ದುಪಡಿಗೆ ಹೊರಟ ಕೇಂದ್ರದ ವಿರುದ್ಧ ಮೊಳಗಿದ ಆಕ್ರೋಶ. ಧಿಕ್ಕಾರ, ಕನಿಷ್ಠ ವೇತನ, ಸೇವಾ ಭದ್ರತೆಗೆ ಕಾರ್ಮಿಕರ ಒಕ್ಕೊರಲಿನ ಆಗ್ರಹ.
Related Articles
Advertisement
ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಅರ್ಧ ಬಂದ್ ಬಿಸಿ: ಜಿಲ್ಲೆಯಲ್ಲಿ ಎಡಪಕ್ಷಗಳ ಪ್ರಭಾವ ಇರುವ ಬಾಗೇಪಲ್ಲಿ, ಗುಡಿಬಂಡೆಯಲ್ಲಿ ಪ್ರತಿಭಟನಕಾರರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಎಡಪಕ್ಷಗಳ ಬೆಂಬಲಿತ ಅಂಗಡಿ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿಗಳ ಬಾಗಿಲು ತೆರೆಯದೇ ಬಂದ್‌ಗೆ ಬೆಂಬಲ ನೀಡಿದರು. ಗುಡಿಬಂಡೆಯಲ್ಲಿ ಮಧ್ಯಾಹ್ನದವರೆಗೂ ಸ್ವಲ್ಪ ಬಂದ್ ಬಿಸಿ ಇತ್ತು. ಉಳಿದಂತೆ ಶಿಡ್ಲಘಟ್ಟದಲ್ಲಿ ಅಂಗನವಾಡಿ, ಆಶಾ, ಗ್ರಾಪಂ ಹಾಗೂ ಬಿಸಿಯೂಟ ನೌಕರರು ನೂರಾರು ಸಂಖ್ಯೆಯಲ್ಲಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದರು.
ಚಿಂತಾಮಣಿಯಲ್ಲಿ ಗ್ರಾಪಂ, ಡಿವೈಎಫ್ಐ ಹಾಗೂ ರೈತಪರ ಸಂಘಟನೆಗಳ ಕಾರ್ಯಕರ್ತರು ನಗರದ ಮುಖ್ಯ ರಸ್ತೆಗಳಲ್ಲಿ ರ್ಯಾಲಿ ನಡೆಸಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಗೌರಿಬಿದನೂರಲ್ಲಿ ಸಹ ಸಿಐಟಿಯು, ಗ್ರಾಪಂ ನೌಕರರು, ಸಿಪಿಎಂ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಕೇಂದ್ರದ ಕಾರ್ಮಿಕ ನೀತಿಗಳನ್ನು ಖಂಡಿಸಿದರು.
ಬಂದ್‌ಗೆ ವಿವಿಧ ಸಂಘಟನೆಗಳ ಬಲ: ಜಿಲ್ಲೆಯಲ್ಲಿ ಪ್ರಮುಖವಾಗಿ ಸಿಪಿಎಂ, ಸಿಐಟಿಯು, ಕೃಷಿ ಕೂಲಿಕಾರರ ಸಂಘ, ಪ್ರಾಂತ ರೈತ ಸಂಘ, ಗ್ರಾಪಂ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಆಶಾ ಕಾರ್ಯಕರ್ತೆಯರು, ಡಿವೈಎಫ್ಐ, ಎಸ್‌ಎಫ್ಐ, ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಬಿಗಿ ಪೊಲೀಸ್ ಭದ್ರತೆ: ಮುಷ್ಕರ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾದ್ಯಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಸಿಪಿಐ ಸುದರ್ಶನ್, ಪಿಎಸ್‌ಐ ವರುಣ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ವಹಿಸಿದ್ದರು. ಭದ್ರತೆಗೆ ಸುಮಾರು 500 ಕ್ಕೂ ಹೆಚ್ಚು ಪೊಲೀಸರನ್ನು ಹಾಗೂ 6 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಪ್ರತಿಭಟನಕಾರರಿಂದ ರಸ್ತೆಯಲ್ಲಿ ಊಟ: ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ತೀವ್ರ ಪ್ರತಿಭಟನೆ ದಾಖಲಿಸಿದ ಜಿಲ್ಲೆಯ ಅಂಗನವಾಡಿ, ಬಿಸಿಯೂಟ ಹಾಗೂ ಗ್ರಾಪಂ ನೌಕರರು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸುವ ಮೂಲಕ ಕೇಂದ್ರದ ವಿರುದ್ಧ ಬಿಸಿಲಿನಲ್ಲಿಯೇ ಕೂತು ರಸ್ತೆ ತಡೆ ನಡೆಸಿದರು. ರಸ್ತೆಯಲ್ಲಿ ಕುಳಿತು ಉಟ ಮಾಡಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೂ ರಸ್ತೆಯಲ್ಲಿಯೇ ಕುಳಿತು ಧರಣಿ ನಡೆಸಿ ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸುವಂತೆ ಹಾಗೂ ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸುವಂತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಕಡಿತ ಮಾಡಿರುವ ಅನುದಾನವನ್ನು ವಾಪಸ್ಸು ಕೊಡುವಂತೆ ಕೇಂದ್ರ ಸರ್ಕಾರ ಆಗ್ರಹಿಸಿ ಘೋಷಣೆ ಕೂಗಿ ಗಮನ ಸೆಳೆದರು.
200 ಮಂದಿ ಪ್ರತಿಭಟನಕಾರರ ಬಂಧನ: ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಸುಮಾರು 200 ಕ್ಕೂ ಹೆಚ್ಚು ಎಡಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಸಂಜೆ 4 ಗಂಟೆಗೆ ಬಿಡುಗಡೆಗೊಳಿಸಿದರು. ನಗರದ ಎಂಜಿ ರಸ್ತೆಗೆ ಅಡ್ಡವಾಗಿ ಪ್ರತಿಭಟನೆ ನಡೆಸಿದ ಕೃಷಿ ಕೂಲಿಕಾರರ ಸಂಘದ ಮುಖಂಡ ಎಂ.ಪಿ.ಮುನಿವೆಂಕಟಪ್ಪ, ಸಿಪಿಎಂ ಜಿಲ್ಲಾಧ್ಯಕ್ಷ ಜಯರಾಮರೆಡ್ಡಿ, ಡಾ.ಅನಿಲ್ ಕುಮಾರ್,
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುಳಾ, ಎಸ್‌ಎಫ್ಐ ಜಿಲ್ಲಾ ಸಂಚಾಲಕ ಸೋಮಶೇಖರ್ ಸೇರಿದಂತೆ ಗ್ರಾಪಂ ಹಾಗೂ ಅಂಗನವಾಡಿ ನೌಕರರ ಸಂಘದ ಮುಖಂಡರನ್ನು ಪೊಲೀಸರು ಬಂಧಿಸಿದರು. ಕೆಎಸ್‌ಆರ್‌ಪಿ ವಾಹನಕ್ಕೆ ಪ್ರತಿಭಟನಕಾರನ್ನು ತುಂಬಿಸಿದರೂ ಸಾಲದಿದ್ದಕ್ಕೆ ಖಾಸಗಿ ಬಸ್ ಕರೆಸಿ ಪ್ರತಿಭಟಕಾರನ್ನು ನಗರ ಠಾಣೆಗೆ ಕರೆದೊಯ್ದರು.
ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ ರೈತರ, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಕಾರ್ಮಿಕ ಕಾನೂನುಗಳ ತಿದ್ದುಪಡಿ ಹೆಸರಿನಲ್ಲಿ ಕಾರ್ಮಿಕರಿಗೆ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನ ಕೊಡದೇ ದ್ರೋಹ ಬಗೆಯುತ್ತಿದೆ. ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದರಿಂದ ದೇಶದಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿ ಉದ್ಯೋಗ ನಾಶವಾಗಿದೆ. -ಎಂ.ಪಿ.ಮುನಿವೆಂಕಟಪ್ಪ, ಕೃಷಿ ಕೂಲಿಕಾರರ ಸಂಘದ ಮುಖಂಡರು ನಮ್ಮ ಹೋರಾಟವನ್ನು ಎದುರಿಸಲಾಗದೇ ಸಿಎಂ ಯಡಿಯೂರಪ್ಪ ಪೊಲೀಸ್ ಬಲ ಪ್ರಯೋಗದಿಂದ ಮುಷ್ಕರವನ್ನು ವಿಫಲಗೊಳಿಸಿದ್ದಾರೆ. ಮುಂದೊಂದು ದಿನ ದೇಶದ ಆರ್ಥಿಕ ನೀತಿಗಳ ವಿರುದ್ಧ ಕೃಷಿ ಕೂಲಿ ಕಾರ್ಮಿಕರು, ವರ್ತಕರೇ ಬೀದಿಗೆ ಬಂದು ಹೋರಾಟ ನಡೆಸುವ ದಿನಗಳು ದೂರವಿಲ್ಲ. ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿರುವ ಕೇಂದ್ರ ಸರ್ಕಾರಕ್ಕೆ ಉಳಿಗಾವಿಲ್ಲ.
-ಡಾ.ಅನಿಲ್ ಕುಮಾರ್, ಸಾಮಾಜಿಕ ಹೋರಾಟಗಾರರು ಜಿಲ್ಲೆಯಲ್ಲಿ ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಶಾಂತಿಯುತವಾಗಿ ನಡೆದಿದೆ. ನಾವು ಯಾರನ್ನು ಬಲವಂತದಿಂದ ಮನೆಗಳಿಗೆ ನುಗ್ಗಿ ಹೋರಾಟಗಾರರನ್ನು ಬಂಧಿಸಿಲ್ಲ. ಹೋರಾಟಗಾರರು ಕೂಡ ನಮಗೆ ಸಹಕರಿಸಿ ಶಾಂತಿಯುವಾಗಿ ಪ್ರತಿಭಟನಾ ಧರಣಿ ನಡೆಸಿದ್ದಾರೆ. ಎಲ್ಲೂ ಕೂಡ ಅಹಿತಕರ ಘಟನೆಗಳು ನಡೆದಿಲ್ಲ. ಮುಷ್ಕರ ಶಾಂತಿಯುತವಾಗಿ ಮುಗಿದಿದೆ.
-ಅಭಿನವ ಖರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ * ಕಾಗತಿ ನಾಗರಾಜಪ್ಪ