Advertisement

ಎರಡು ಗುಂಪುಗಳ ಮಧ್ಯೆ ಗಲಾಟೆ: ಏಳು ಜನರ ಮೇಲೆ ಹಲ್ಲೆ

10:26 AM Jul 17, 2017 | Team Udayavani |

ಚಿಕ್ಕಮಗಳೂರು: ನಗರದ ಇಂದಿರಾ ಬಡಾವಣೆಯಲ್ಲಿ ಎರಡು ಗುಂಪಿನ ನಡುವೆ ಶನಿವಾರ ರಾತ್ರಿ ನಡೆದ ಮಾರಾಮಾರಿಯಲ್ಲಿ
ಮಹಿಳೆಯರೂ ಸೇರಿದಂತೆ 7 ಮಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. 

Advertisement

ಇಂದಿರಾ ಬಡಾವಣೆಯ ಶ್ರೀನಿವಾಸ್‌ ಮತ್ತು ಕಿರಣಗೆ ತಲೆಗೆ ತೀವ್ರ ಪೆಟ್ಟಾಗಿದೆ, ರಾಜು ಅವರ ಎಡಗೈ ಮುರಿದಿದೆ, ರೇವಂತ್‌, ಪ್ರದೀಪ್‌, ಮಮತ ಹಾಗೂ ರತ್ನ ಅವರಿಗೆ ಗಂಭೀರ ಗಾಯವಾಗಿದ್ದು ಎಲ್ಲರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆ ಮಾಹಿತಿ ತಿಳಿದು ಪೊಲೀಸರು ಬರುವ ಹೊತ್ತಿಗೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದರೆಂದು ಗಾಯಾಳುಗಳು ಹೇಳುತ್ತಾರೆ.

ದೊಣ್ಣೆ, ಕತ್ತಿ, ರಾಡು ಮತ್ತಿತರೆ ಮಾರಕಾಸ್ತ್ರಗಳಿಂದ ಬಂದಿದ್ದ 20ಕ್ಕೂ ಹೆಚ್ಚು ದುಷ್ಕರ್ಮಿಗಳು ಇಂದಿರಾ ಬಡಾವಣೆಯ
ರಾಜೇಶ್‌ ಎಂಬಾತನನ್ನು ಕೇಳಿದ್ದಾರೆ. ಆತ ಮನೆಯಲ್ಲಿಲ್ಲ ಎಂದು ಗೊತ್ತಾದಾಗ ಮನೆ ಮೇಲೆ ಕಲ್ಲೆಸೆದು ಕಿಟಕಿ ಗಾಜು ಪುಡಿ
ಮಾಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಬಡಿಗೆಯಿಂದ ನುಜ್ಜುಗುಜ್ಜು ಮಾಡಿದ್ದಾರೆ. ತನ್ನ ಮನೆ ಇಳಿಜಾರಿನಲ್ಲಿದ್ದರಿಂದ ದಿನನಿತ್ಯ ರಾಜೇಶನ ಮನೆ ಬಳಿ ಬೈಕ್‌ ನಿಲ್ಲಿಸುತ್ತಿದ್ದ ಶ್ರೀನಿವಾಸ್‌ ಬಂದು ತನ್ನ ಬೈಕ್‌ ಪುಡಿ ಮಾಡಿದ್ದೇಕೆ ಎಂದು ಕೇಳಿದಾಗ ಇಲ್ಲಿರುವ ಎಲ್ಲರನ್ನೂ ಥಳಿಸುತ್ತೇವೆ ಎಂದು ಬೆದರಿಸಿದ ಗುಂಪು ಶ್ರೀನಿವಾಸನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ತನ್ನ ಪತಿಯ ರಕ್ಷಣೆಗೆ ಬಂದ ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾರೆ.

ಗಲಾಟೆ ನೋಡಿ ಅಕ್ಕಪಕ್ಕದ ಮನೆಯವರು ಹೊರಬಂದು ಪ್ರಶ್ನಿಸಿದಾಗ ಸಿಕ್ಕಿಸಿಕ್ಕಿದವರ ಮೇಲೆ ಮನಬಂದಂತೆ ಥಳಿಸಿದ್ದಾರೆ. ಮಮತ ಎಂಬಾಕೆ ಪೆಟ್ಟು ತಿಂದ ನಂತರ ತನ್ನ ಪುಟ್ಟ ಮಗುವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಬಚ್ಚಿಟ್ಟುಕೊಂಡಿದ್ದಾಗಿ ಹೇಳುತ್ತಾರೆ. ಏನೂ ತಪ್ಪು ಮಾಡದೆ ವಿನಾ ಕಾರಣ ನಮ್ಮ ಮೇಲೆ ಹಲ್ಲೆ ನಡೆಸಿದರು, ಇದರಲ್ಲಿ ಕೆಲವರು ಪಾನಮತ್ತರಾಗಿದ್ದರು. ಕೆಲವರ ಪರಿಚಯವಿದೆ ಎಂದು ಕಿರಣ ಹೇಳುತ್ತಾರೆ. ಗಲಾಟೆಯಲ್ಲಿ ಮಹಿಳೆಯರ ಮಾಂಗಲ್ಯ ಸರ, ಮೊಬೈಲ್‌ ಕಿತ್ತುಕೊಂಡು ಹೋಗಿದ್ದಾರೆ ಎಂದು ಗಾಯಾಳು ಪ್ರದೀಪ್‌ ತಿಳಿಸಿದರು. ರಾಜೇಶ್‌ ಮೇಲಿನ ಹಳೆ ದ್ವೇಷವೆ ದಾಳಿಗೆ ಕಾರಣ ಎಂದು ಹೇಳಲಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಶಾಸಕ ಸಿ.ಟಿ.ರವಿ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಕಾರಣಕ್ಕೆ ಇಂದಿರಾ ಬಡಾವಣೆಯಲ್ಲಿ ಏಕಾಏಕಿ ದೊಡ್ಡ ಗಲಾಟೆ
ನಡೆದಿದೆ. ದಾಳಿ ಹಿಂದೆ ರಾಜಕೀಯ ಚಿತಾವಣೆಯಿದೆ ಎಂಬ ಆರೋಪವಿದೆ. ಅಮಾಯಕರ ಮೇಲೆ ದಾಳಿ ನಡೆಸುವುದು
ಹೇಯಕೃತ್ಯ, ಇದರ ಮೂಲ ತನಿಖೆ ಮಾಡಿ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು. ವೈಯಕ್ತಿಕ ವಿಚಾರವಾಗಿದ್ದರೆ ಪರಿಹರಿಸಿ ಕೊಳ್ಳಲು ಕಾನೂನು ಇದೆ. ಆದರೆ, ಸಂಬಂಧವೇ ಇಲ್ಲದವರ ಮೇಲೆ ಹಲ್ಲೆ ನಡೆಸಿರುವುದು ಯಾರಿಗೂ ಶ್ರೇಯಸ್ಸು ತಂದುಕೊಡುವುದಿಲ್ಲ ಎಂದರು.

Advertisement

ನಗರ ಬಿಜೆಪಿ ಅಧ್ಯಕ್ಷ ಕೋಟೆ ರಂಗನಾಥ್‌, ನಗರಸಭಾ ಸದಸ್ಯ ಮುತ್ತಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next