Advertisement

ಪೌರತ್ವ ತಿದ್ದುಪಡಿ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ಮಠಾಧೀಶರ ಆಗ್ರಹ

10:22 AM Dec 19, 2019 | sudhir |

ಕಲಬುರಗಿ:  ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಒತ್ತಡಕ್ಕೆ ಮಣಿಯದೆ, ಬದಲಾವಣೆ ಮಾಡದೆ ಯಥಾವತ್ತಾಗಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಕಲಬುರಗಿ ಜಿಲ್ಲೆಯ ವಿವಿಧ ಮಠಾಧೀಶರು ಆಗ್ರಹಿದ್ದಾರೆ.

Advertisement

ನಗರದಲ್ಲಿ ಬುಧವಾರ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂದೋಲದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ, ದೇಶದ ಸುರಕ್ಷತೆ, ಭದ್ರತೆ ಹಾಗೂ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿನ ಹಿಂದೂಗಳು ಸೇರಿ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಸಹಕಾರಿಯಾಗಿದೆ. ಇಂತಹ ಕಾಯ್ದೆ ಜಾರಿಗೆ ತಂದ ಕೇಂದ್ರ ಸರ್ಕಾರ ಕ್ರಮ ಸ್ವಾಗತಾರ್ಹವಾಗಿದೆ ಎಂದರು.

ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರು ಮತಾಂಧ ಸಂಘಟನೆಗಳು. ವಿಶ್ವವಿದ್ಯಾಲಯಗಳಲ್ಲಿ‌ ವಿದ್ಯಾರ್ಥಿಗಳ ಪ್ರತಿಭಟನೆಗೆ ವಿರೋಧ ಪಕ್ಷಗಳ ಬೆಂಬಲ‌ ಇದೆ. ಗಲಭೆಗಳ ಹಿಂದೆ ಪಾಕಿಸ್ತಾನದ ಕುತಂತ್ರ ಅಡಗಿದೆ ಎಂದು ದೂರಿದರು.

ಈ ದೇಶದ ಅನ್ನ, ನೀರು ಸೇವಿಸುವವರು ದೇಶದ ಸಂವಿಧಾನಕ್ಕೂ ಬದ್ಧರಾಗಿರಬೇಕು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅನಾಗರಿಕರಲ್ಲ.‌ ಹಿಂಸಾಚಾರಕ್ಕೆ ವಿದ್ಯಾರ್ಥಿಗಳು ಅವಕಾಶ ಮಾಡಿ ಕೊಡಬಾರದು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರಗಳು ನಡೆಯುತ್ತಿವೆ. ಇಂತಹ ಕೆಲಸ ಮತಾಂಧ ಸಂಘಟನೆಗಳು ‌ಮಾಡುತ್ತಲೇ ಬರುತ್ತಿವೆ ಎಂದು ಕಿಡಿಕಾರಿದರು.

ಈ ಹಿಂದೆ ತ್ರಿವಳಿ ತಲಾಖ್ ರದ್ದು ‌ ಮತ್ತು ಅಯೋಧ್ಯೆ ವಿಚಾರದಲ್ಲಿ ಗಲಭೆ ಎಬ್ಬಿಸುವುದಕ್ಕೆ ಪ್ರಯತ್ನ ‌ಪಟ್ಟಿದ್ದರೂ, ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಪೌರತ್ವ ಕಾಯ್ದೆ ವಿಚಾರವನ್ನು ಇಟ್ಟುಕೊಂಡು ಗಲಭೆ, ಹಿಂಸಾಚಾರಕ್ಕೆ ಮುಂದಾಗಿವೆ. ಮೋದಿ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ವಿಪಕ್ಷಗಳು ಮತ್ತು ಮತಾಂಧ ವಿಶ್ವವಿದ್ಯಾಲಯಗಳು ಕುತಂತ್ರದಲ್ಲಿ ತೊಡಗಿವೆ. ಕಾಶ್ಮೀರದಲ್ಲಿ ನಡೆಯುತ್ತಿದ್ದ ಗಲಾಟೆಗಳನ್ನು ಈಗ ದೆಹಲಿಯಲ್ಲಿ ಮಾಡಲು ಹೊರಟಿವೆ. ಇದಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಮಣಿಯಬಾರದು ಎಂದು ಒತ್ತಾಯಿಸಿದರು.

Advertisement

ಬಂದ್ ಗೆ ಅವಕಾಶ ಕೊಡಬೇಡಿ: ಪೌರತ್ವ ಕಾಯ್ದೆ ವಿರೋಧಿಸಿ ಪೀಪಲ್ಸ್ ಫೋರಂ ಮತ್ತು ಎಡಪಕ್ಷಗಳು ಗುರುವಾರ ಕರೆ ಕೊಟ್ಟಿರುವ ಬಂದ್ ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ನಿಷೇಧಾಜ್ಞೆ ಜಾರಿ ಮಾಡಬೇಕು. ನಾಗರಿಕರಿಗೆ ತೊಂದರೆ ಆಗದಂತೆ ರಕ್ಷತೆ ಕೊಡುವುದು ಜಿಲ್ಲಾಡಳಿತ ಹೊಣೆ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು. ‌

ಸುದ್ದಿಗೋಷ್ಠಿಯಲ್ಲಿ‌ ಬಬಲಾದ ಬ್ರಹನ್ಮಠದ ರೇವಣಸಿದ್ದ ಶಿವಾಚಾರ್ಯರು, ನಾಗಣಸೂರದ ಶ್ರೀಕಂಠ ಶಿವಾಚಾರ್ಯರು, ಅಷ್ಟಗಿ-ಬಡದಾಳ ಹಿರೇಮಠದ ನಿಜಲಿಂಗ ಶಿವಾಚಾರ್ಯರು, ಬಂದರವಾಡದ ಸುರಗಿ ಮಠದ ಶಾಂತವೀರ ಶಿವಾಚಾರ್ಯರು, ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next