Advertisement

ಅನಗತ್ಯ ಸಂಚಾರಕ್ಕೆ ನಿರ್ಬಂಧ-ವಾಹನ ಜಪ್ತಿ

11:11 AM May 11, 2021 | Team Udayavani |

ಕೊಪ್ಪಳ: ಕೊರೊನಾ ಕರ್ಫ್ಯೂಗೆ ಜನರ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಸೋಮವಾರದಿಂದ ರಾಜ್ಯ ಸರ್ಕಾರ 14 ದಿನಗಳ ಕಾಲ ಕಠಿಣ ನಿಯಮ ಜಾರಿಗೊಳಿಸಿದ್ದರೂ ಜನರು ಸಂಪೂರ್ಣ ಸಹಕಾರ ನೀಡುತ್ತಿಲ್ಲ. ಬೆಳಗ್ಗೆ ಜನದಟ್ಟಣೆಯು ಕಂಡು ಬಂದರೆ, ಮಧ್ಯಾಹ್ನ ಬಂದ್‌ ಆಯಿತು. ಅನಗತ್ಯವಾಗಿ ಸುತ್ತಾಡುವವರ ಬೈಕ್‌ ಗಳನ್ನು ಜಪ್ತಿ ಮಾಡಿ ಠಾಣೆಗೆ ಒಯ್ಯಲಾಯಿತು.

Advertisement

ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ನಡೆಸಿದರೂ ಕಳೆದ ವರ್ಷದಂತೆ ಜನತಾ ಕರ್ಫ್ಯೂ ಹಾಗೂ ಕೊರೊನಾ ಕರ್ಫ್ಯೂಗೆ ಜಿಲ್ಲೆಯ ಜನರು ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ. ಸೋಮವಾರದಿಂದ 14 ದಿನಗಳ ಕಾಲವೂ ಕೊರೊನಾ ಕರ್ಫ್ಯೂ ಮತಷ್ಟು ಕಠಿಣ ನಿಯಮದಿಂದಿಗೆ ಜಾರಿಯಲ್ಲಿದೆ ಎಂದು ಸರ್ಕಾರ ಘೋಷಿಸಿದೆ. ಮನೆಯಿಂದ ಹೊರ ಬರುವವರು ನಡೆದುಕೊಂಡೇ ಬರಬೇಕು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಜನ ಸೋಮವಾರ ಸುತ್ತಾಡುವುದನ್ನು ನಿಲ್ಲಿಸಲಿಲ್ಲ.

ಕೊಪ್ಪಳದ ಅಶೋಕ ವೃತ್ತ, ಬಸವೇಶ್ವರ ವೃತ್ತ, ಭೀಮರಾವ್‌ ವೃತ್ತ, ಭಾಗ್ಯನಗರ ರೈಲ್ವೇ ಸೇತುವೆ, ಲೇಬರ್‌ ಸರ್ಕಲ್‌ ಸೇರಿ ಅಷ್ಟ ದಿಕ್ಕುಗಳಲ್ಲೂ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಸಂಚಾರಕ್ಕೆ ಬ್ರೇಕ್‌ ಹಾಕಿದ್ದರು. ಪೊಲೀಸರು ಸ್ಥಳದಲ್ಲಿದ್ದಾಗ ಸುಮ್ಮನಿರುತ್ತಿದ್ದ ಜನರು ಅವರಿಲ್ಲದಿದ್ದಾಗ ಬ್ಯಾರಿಕೇಡ್‌ ಪಕ್ಕಕ್ಕೆ ತಳ್ಳಿ ವಾಹನ ಚಲಾಯಿಸಿಕೊಂಡು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಬೆಳಗ್ಗೆಯಿಂದಲೂ ಜನ ಸಂಚಾರ ನಡದೇ ಇತ್ತು. ಅನ್ಯ ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಟ್ಟಿದ್ದರೂ ಜಿಲ್ಲೆಯಲ್ಲಿ ಕಟ್ಟುನಿಟ್ಟು ಕಾಣಲಿಲ್ಲ. ಮಧ್ಯಾಹ್ನ 1 ಗಂಟೆ ವೇಳೆಗೆ ಡಿಎಸ್‌ಪಿ ಗೀತಾ ಅವರು ಭೀಮರಾವ್‌ ವೃತ್ತದಲ್ಲಿ ಕೆಲ ಗಂಟೆಗಳ ಕಾಲ ವಾಹನಗಳ ಸಂಚಾರ ತಡೆದು ಜನರಿಗೆ ಬಿಸಿ ಮುಟ್ಟಿಸಿದರು.

ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲ ವಾಹನಗಳನ್ನೂ ತಡೆದು ದಂಡ ಹಾಕದೇ ನೇರವಾಗಿ ಸಂಚಾರಿ ಪೊಲೀಸ್‌ ಠಾಣೆಗೆ ಕಳುಹಿಸುತ್ತಿದ್ದರು. ಗ್ರಾಮೀಣ ಭಾಗದ ರೈತರು, ಕೂಲಿ ಕೆಲಸಗಾರು, ಮಹಿಳೆಯರು, ಆಟೋ ಚಾಲಕರು ಪೊಲೀಸರನ್ನು ಎಷ್ಟೇ ಕೇಳಿಕೊಂಡರೂ ಪೊಲೀಸರು ಮಾತ್ರ ಜಪ್ಪಯ್ನಾ ಎನ್ನದೇ ನೇರ ಠಾಣೆಗೆ ನಡೆಯಿರಿ. ಅನಗತ್ಯ ಸುತ್ತಾಟ ನಡೆಸಬೇಡಿ ಎಂದರೂ ಸುತ್ತಾಡುತ್ತಿದ್ದೀರಿ. ನಿಮಗೆ ದಂಡ ಹಾಕಿದ ಮೇಲೆ ಬುದ್ಧಿ ಬರುತ್ತದೆ ಎಂದು ಬೈಕ್‌ ಸವಾರರಿಗೆ ಗದರಿಸಿದ ಪ್ರಸಂಗವೂ ನಡೆಯಿತು. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮೊದಲ ದಿನದ ಕೊರೊನಾ ಕರ್ಫ್ಯೂನಲ್ಲಿ ಜನರೂ ಅಷ್ಟೊಂದು ಪರಿಣಾಮಕಾರಿಯಾಗಿ ಸಹಕಾರ ನೀಡಿದ್ದು ಕಂಡು ಬರಲಿಲ್ಲ. ಪೊಲೀಸರ ಭಯವಿದ್ದರೂ ಬೈಕ್‌ಗಳ ಸುತ್ತಾಟ, ಸಂಚಾರ ಮಾತ್ರ ನಿಂತಿರಲಿಲ್ಲ. ಪೊಲೀಸರು ಅಷ್ಟ ದಿಕ್ಕುಗಳಲ್ಲೂ ನಾಕಾಬಂದಿ ಹಾಕಿ ಸಂಚಾರಕ್ಕೆ ಬ್ರೇಕ್‌ ಹಾಕಿದ್ದು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next