ಬೆಳಗಾವಿ: ಕೊರೊನಾ ಸೊಂಕು ಹರಡದಂತೆ ತಡೆಯಲು ಸರ್ಕಾರ ವಿಧಿಸಿರುವ ಕೊರೊನಾ ಕರ್ಫ್ಯೂ ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ಬಂದಿದ್ದು, ಮೊದಲ ದಿನವಾದ ಬುಧವಾರ ಬೆಳಗ್ಗೆ 10 ಗಂಟೆಯ ನಂತರ ಹೊರ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಮಂಗಳವಾರ ರಾತ್ರಿ 9 ಗಂಟೆಯಿಂದ ಜಾರಿಗೆ ಬಂದಿರುವ ಕರ್ಫ್ಯೂಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ-ಮುಂಗಟ್ಟುಗಳು, ವ್ಯಾಪಾರ ವಹಿವಾಟು, ವಾಹನ ಸಂಚಾರ ಸಂಪೂರ್ಣ ಸ್ತಬ್ದವಾಗಿದೆ. ಬುಧವಾರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು.
ಅಗತ್ಯ ವಸ್ತುಗಳ ಖರೀದಿಗೆ ಅಂದುಕೊಂಡಷ್ಟು ಜನರು ಸೇರಿರಲಿಲ್ಲ. ಆದರೂ ಕೆಲವು ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅಗತ್ಯ ವಸ್ತುಗಳಾದ ದಿನಸಿ, ಹಾಲು, ತರಕಾರಿ, ಮೀನು, ಮಾಂಸ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿ ಮನೆಗೆ ಮರಳಿದರು. 10 ಗಂಟೆ ಮುಂಚೆಯಿಂದಲೇ ಜನರನ್ನು ಪೊಲೀಸರು ಚದುರಿಸಿ ವಾಪಸ್ಸು ಕಳುಹಿಸಿದರು.
ಬೆಳಗ್ಗೆ 10 ಗಂಟೆ ನಂತರವೂ ನಗರದಲ್ಲಿ ವಾಹನಗಳ ಓಡಾಟ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂತು. ನಗರದ ಪ್ರವೇಶದ್ವಾರದ ಕೋಟೆ ಕೆರೆಯ ಅಶೋಕ ವೃತ್ತದ ಬಳಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ವಾಹನ ದಟ್ಟಣೆ ಆಗಿತ್ತು. ವಾಹನ ಸವಾರರು ನಗರದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದರು. ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದರು. ಈವೇಳೆ ಬ್ಯಾರಿಕೇಡ್‌ಗಳನ್ನು ದಾಟಿ ಒಳ ನುಗ್ಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ತಮ್ಮ ಕೆಲಸದ ಗುರುತಿನ ಚೀಟಿಗಳನ್ನು ತೋರಿಸಿ ಒಳಗೆ ಹೋಗುತ್ತಿದ್ದರು.
ಸಾರಿಗೆ ಬಸ್, ಖಾಸಗಿ ವಾಹನಗಳ ಓಡಾಟ ಇಲ್ಲದೇ ನಗರದ ರಸ್ತೆಗಳೆಲ್ಲವೂ ಬಿಕೋ ಎನುತ್ತಿದ್ದವು. ಪೊಲೀಸರು ನಗರದಲ್ಲಿಯೂ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಎಲ್ಲಿಯೂ ಜನರು ಓಡಾಡದಂತೆ ನೋಡಿಕೊಳ್ಳಲು ಬಿಗಿ ಕ್ರಮ ಕೈಗೊಂಡಿದ್ದಾರೆ. ಗುರುವಾರ ಮತ್ತೆ ಬೆಳಗ್ಗೆ 6ರಿಂದ ಮಾರುಕಟ್ಟೆ ತೆರೆಯವುದರಿಂದ ರಸ್ತೆಗಳನ್ನು ಖುಲ್ಲಾ ಮಾಡಲಿದ್ದಾರೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಕೇಂದ್ರ ಹಾಗೂ ನಗರ ಬಸ್ ನಿಲ್ದಾಣ ಬೀಕೋ ಎನ್ನುತ್ತಿವೆ. ಬಸ್‌ಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಆಟೋ ರಿûಾ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.