Advertisement

ಕೋವಿಡ್‌-19 ತಡೆಗಟ್ಟಲು ಕಟ್ಟುನಿಟ್ಟಾಗಿ ನಿಯಮ ಪಾಲಿಸಿ

02:12 PM Jun 28, 2020 | Suhan S |

ಬನಹಟ್ಟಿ: ತಾಲೂಕಿನಾದ್ಯಂತ ಕೋವಿಡ್‌-19 ಸಮುದಾಯದತ್ತ ಹರಡದಂತೆ ಮುಂಜಾಗ್ರತೆ ವಹಿಸಲು ಎಲ್ಲ ಅಧಿಕಾರಿಗಳು ಸರಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ. ಹೋಮ್‌ಕ್ವಾರಂಟೈನ್‌ ವಿಷಯದಲ್ಲಿ ತಪ್ಪಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ನಗರದ ನಗರಸಭೆ ಸಭಾಭವನದಲ್ಲಿ ನಡೆದ ಕೋವಿಡ್‌-19 ನಿಯಂತ್ರಣ, ಪ್ರಕೃತಿ ವಿಕೋಪ ಹಾಗೂ ಪ್ರವಾಹ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಪಿಡಿಒಗಳ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಸೋಂಕು ಹರಡದಂತೆ ನಿಯಂತ್ರಣ ಮಾಡುವುದು ನಮ್ಮ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಯಾರಿಗೂ ಹೆದರದೇ ಮೇಲಧಿಕಾರಿಗಳಿಗೆ ನಿಖರ ಮಾಹಿತಿ ನೀಡಿ. ಅದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ. ನಿಷ್ಕಾಳಜಿ ವಹಿಸಿದರೆ ನೀವೇ ಜವಾಬ್ದಾರರಾಗುತ್ತೀರಿ. ಸಂತೆ, ಮದುವೆ, ಸಭೆ ಸಮಾರಂಭಗಳಲ್ಲಿ ಜನಸಂದಣಿ ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಿ. ಕಳೆದ ಎರಡು ದಿನಗಳಿಂದ ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಹಾನಿಗಳ ಬಗ್ಗೆ ಸರ್ವೇ ಮಾಡುತ್ತಿದ್ದು ಶೀಘ್ರ ಪರಿಹಾರ ನೀಡಲಾಗುವುದು. ಕೃಷ್ಣಾ ಮತ್ತು ಘಟಪ್ರಭಾ ಪ್ರವಾಹ ಎದುರಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸನ್ನದ್ಧರಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ರಬಕವಿ-ಬನಹಟ್ಟಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಮಾತನಾಡಿ, ತಾಲೂಕಿನಲ್ಲಿ ಒಟ್ಟು 104 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದ್ದು, 189 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಹೋಂಕ್ವಾರಂಟೈನ್‌ ಮಾಡಿದವರು ಅನವಶ್ಯಕವಾಗಿ ಮನೆ ಬಿಟ್ಟು ಬಂದರೆ ಅಂತವರ ವಿರುದ್ಧ ಮತ್ತು ಅಂತ್ಯ ಸಂಸ್ಕಾರದಲ್ಲಿ 20ಕ್ಕಿಂತ ಹೆಚು ಜನ ಸೇರುವುದನ್ನು ಮಾಡಿದರೆ ಎಫ್‌ಐಆರ್‌ ದಾಖಲಿಸಲಾಗುವುದು ಎಂದರು.

ವಿವಾಹ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮೋದನೆ ಹಾಗೂ ಸ್ಥಳಿಯ ಆಡಳಿತದಿಂದ ಪರವಾನಗಿ ಅಗತ್ಯ. ಅಲ್ಲದೇ ಮದುವೆ ಸಂದರ್ಭದಲ್ಲಿ ಸರಕಾರದಿಂದ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗುವುದು. ಅವರು ಮದುವೆಯ ಎಲ್ಲ ಆಗು-ಹೋಗುಗಳ ಬಗ್ಗೆ ನಿಖರವಾದ ಮಾಹಿತಿ ನೀಡುತ್ತಾರೆ ಎಂದರು.

Advertisement

ಕಳೆದ ಎರಡು ದಿನಗಳಿಂದ ಸುರಿದ ಗಾಳಿ ಹಾಗೂ ಮಳೆಯಿಂದಾಗಿ ತಾಲೂಕಿನಲ್ಲಿ ಪ್ರಾಥಮಿಕ ಹಂತದ ಮಾಹಿತಿಯಂತೆ ಒಟ್ಟು 68 ಮನೆಗಳ ಒಟ್ಟು 32 ಲಕ್ಷ 75 ಸಾವಿರ ಹಾನಿಯಾಗಿದೆ. ಹಳಿಂಗಳಿಯಲ್ಲಿ 4 ಎಕರೆ, ಚಿಮ್ಮಡದಲ್ಲಿ 5 ಎಕರೆ, ಬುದ್ನಿ ಪಿಡಿಯಲ್ಲಿ 8 ಎಕರೆ, ಕೆಸರಗೊಪ್ಪದಲ್ಲಿ 9 ಎಕರೆ ಬಾಳೆ ಹಾನಿಯಾದ ವರದಿಯಾಗಿದ್ದು, ಮನೆಗಳಿಗೆ ಸಂಬಂಧಿಸಿದಂತೆ ನಿಖರ ಮಾಹಿತಿಯನ್ನು ಕಲೆ ಹಾಕಿ ತಾಲೂಕು ಉಪವಿಭಾಗಾಧಿಕಾರಿಯವರ ಅನುಮೋದನೆಯೊಂದಿಗೆ ಸಂಬಂಧ ಪಟ್ಟವರಿಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದರು.

ಕೃಷ್ಣಾ ಹಾಗೂ ಘಟಪ್ರಭಾ ನದಿಗಳ ಪ್ರವಾಹ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಲೈಫ್‌ಜಾಕೆಟ್‌, ಗಂಜಿ ಕೇಂದ್ರಗಳು ಸೇರಿದಂತೆ ಅಗತ್ಯ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಾಗಶಃ ಹಾಗೂ ಪೂರ್ಣ ಮುಳುಗಡೆಯಾಗುವ ಗ್ರಾಮಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು. ಆರೋಗ್ಯಾಧಿಕಾರಿ ಜಿ. ಎಚ್‌. ಗಲಗಲಿ, ಇಒ ಸಂಜೀವ ಹಿಪ್ಪರಗಿ, ಸಿಪಿಐ ಜೆ. ಕರುಣೇಶಗೌಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಶಿರಸ್ತೆದಾರರಾದ ಬಸವರಾಜ ಬಿಜ್ಜರಗಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next