ಚಿಂಚೋಳಿ: ತಾಲೂಕು ತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ನೆರೆ ರಾಜ್ಯಗಳಿಂದ ಆಗಮಿಸುವ ಜನರ ಮೇಲೆ ಸಂಪೂರ್ಣ ನಿಗಾವಹಿಸಿ 3ನೇ ಅಲೆ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ| ಅವಿನಾಶ ಜಾಧವ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವೇಗವಾಗಿ ಕೊರೊನಾ ರೂಪಾಂತರ 3ನೇ ಅಲೆ ಸೋಂಕು ಹರಡುತ್ತಿದೆ. ಆದ್ದರಿಂದ ಇದರ ಹತೋಟಿಗಾಗಿ ತಾಲೂಕಿನಲ್ಲಿ ಪಿಡಿಒ, ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಮತ್ತು ಪೊಲೀಸರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಚಿಂಚೋಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಸಿಗೆ ಮತ್ತು ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರಿ ವಸತಿ ನಿಲಯಗಳನ್ನು ಸ್ಯಾನಿಟೈಸರ್ ಮಾಡಿಸಬೇಕು. ಮಾಸ್ಕ್ ಧರಿಸುವಂತೆ ಜನರಿಗೆ ತಿಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಕಳೆದ ವರ್ಷ ಕೊರೊನಾ 2ನೇ ಅಲೆ ಹರಡದಂತೆ ಸಾಕಷ್ಟು ಪ್ರಯತ್ನ ಮತ್ತು ಮುಂಜಾಗೃತಾ ಕ್ರಮ ಕೈಗೊಂಡಿದ್ದರಿಂದ ಅತಿ ಕಡಿಮೆ ಪ್ರಕರಣಗಳು ಕಂಡು ಬಂದವು. ಈಗಲೂ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜನರಿಗೆ ತಿಳಿಸಬೇಕು. ಹಳ್ಳಿ ಮತ್ತು ತಾಂಡಾಗಳಲ್ಲಿ ಜನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಅಂಜುಮ ತಬಸುಮ್, ತಾಪಂ ಇಒ ಅನಿಲಕುಮಾರ ರಾಠೊಡ, ಆರೋಗ್ಯಾಧಿಕಾರಿ ಡಾ|ಮಹಮ್ಮದ್ ಗಫಾರ, ಮಕ್ಕಳ ತಜ್ಞ ಡಾ|ಸಂತೋಷ ಪಾಟೀಲ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಎಇಇ ಶಿವಶರಣಪ್ಪ ಕೇಶ್ವಾರ, ಸಿಡಿಪಿಒ ಗುರುಪ್ರಸಾದ ಕವಿತಾಳ, ಎಇಇ ಮಹ್ಮದ್ ಅಹೆಮದ್ ಹುಸೇನ, ಎಇಇ ಆನಂದ ಕಟ್ಟಿ, ಎಇಇ ಪ್ರಕಾಶ ಕುಲಕರ್ಣಿ, ಬಿಇಒ ರಾಚಪ್ಪ ಭದ್ರಶೆಟ್ಟಿ, ತೋಟಗಾರಿಕೆ ಅಧಿಕಾರಿ ರಾಜಕುಮಾರ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ಪಶು ವೈದ್ಯಾಧಿಕಾರಿ ಡಾ| ಧನರಾಜ ಬೊಮ್ಮ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.