ಬಾಗಲಕೋಟೆ: ಕೊರೊನಾ 2ನೇ ಅಲೆ ಹೆಚ್ಚುತ್ತಿದ್ದು, ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಶನಿವಾರ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ ಕಂಡು ಜನರು ಭಯಪಡ್ತಿಲ್ಲ ಹೊರತು ಕೊರೊನಾವೇ ಭಯ ಬೀಳುವಂತಿತ್ತು.
ನಗರದ ವಲ್ಲಭಬಾಯಿ ವೃತ್ತ, ಬಸವೇಶ್ವರ ವೃತ್ತ, ಹಳೆಯ ಅಂಚೆ ಕಚೇರಿ ಪ್ರದೇಶದಲ್ಲಿ ಎಲ್ಲ ಅಂಗಡಿಗಳು ಬೆಳಗ್ಗೆ 7ಕ್ಕೆ ಆರಂಭಗೊಂಡಿದ್ದವು. ಸೋಮವಾರದಿಂದ ಮೇ 24ರವರೆಗೆ ಕಠಿಣ ನಿರ್ಬಂಧ ಜಾರಿಗೊಳ್ಳಲಿದ್ದು, ಇದರಿಂದ ಜನರು ಮಾತ್ರ ಯಾವುದೇ ವಸ್ತುಗಳು ಸಿಗುವುದಿಲ್ಲವೇನೋ ಎಂಬಂತೆ ಮಾರುಕಟ್ಟೆಗೆ ದೌಡಾಯಿಸಿದ್ದರು. ಅಗತ್ಯ ವಸ್ತುಗಳ ಅಂಗಡಿಗಳ ಜತೆಗೆ ಬೇರೆ ಬೇರೆ ರೀತಿಯ ಅಂಗಡಿಗಳು ಆರಂಭಗೊಂಡಿದ್ದವು.
ನಗರದ ಕಿರಾಣಿ ಅಂಗಡಿ, ಚಪ್ಪಲಿ ಅಂಗಡಿ, ಬಟ್ಟೆ ಅಂಗಡಿ ಸಹಿತ ಬಹುತೇಕ ಅಂಗಡಿಗಳು ಓಪನ್ ಇದ್ದವು. ಜನಸಂದಣಿ ಕಂಡು ಅಂಗಡಿಕಾರರೂ ಭಯಪಡುವಂತಾಗಿತ್ತು. ದೂರ ದೂರ ನಿಂತು ನಿಮಗೆ ಬೇಕಾದ ವಸ್ತು ಖರೀದಿ ಮಾಡಿ ಎಂದು ಎಚ್ಚರಿಸಿದರೂ ಜನರು ಮಾತ್ರ ಬೇಗ ಬೇಗ ಸಾಮಗ್ರಿ ಖರೀದಿಸಿ, 10 ಗಂಟೆಯೊಳಗೆ ಮನೆಗೆ ಹೋಗಬೇಕೆಂಬ ಧಾವಂತದಲ್ಲಿದ್ದರೆ ಹೊರತು, ಸಾಮಾಜಿಕ ಅಂತರ, ಮಾಸ್ಕ್ ಸರಿಯಾಗಿ ಧರಿಸುವ ಕುರಿತು ಕಾಳಜಿ ವಹಿಸದೇ ಇರುವುದು ಕಂಡು ಬಂತು.
1563 ಜನರಿಗೆ ಸೋಂಕು: ಜಿಲ್ಲೆಯಲ್ಲಿ ಶನಿವಾರ ಕೋವಿಡ್‌ನಿಂದ 336 ಜನ ಗುಣಮುಖರಾಗಿದ್ದು, ಹೊಸದಾಗಿ 1563 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ ಮೂವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 23138 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 17266 ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.
ಹೊಸದಾಗಿ ಬಾಗಲಕೋಟೆ 537, ಬಾದಾಮಿ 205, ಜಮಖಂಡಿ 270, ಹುನಗುಂದ 251, ಮುಧೋಳ 190, ಬೀಳಗಿ 110 ಜನರಲ್ಲಿ ಸೋಂಕು ದೃಢಪಟ್ಟಿವೆ. ಕೋವಿಡ್ ಲ್ಯಾಬ್ ನಲ್ಲಿ ಪರೀಕ್ಷಿಸ ಲಾಗುತ್ತಿದ್ದ 1950 ಸ್ಯಾಂಪಲ್ ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 573020 ಸ್ಯಾಂಪಲ್ ಪರೀಕ್ಷಿಸಲಾಗಿದ್ದು, ಈ ಪೈಕಿ 547332 ನೆಗೆಟಿವ್ ಬಂದಿವೆ. ಇನ್ನು 5686 ಜನ ಸಕ್ರಿಯ ಪ್ರಕರಣಗಳಿವೆ. ಈವರೆಗೆ ಜಿಲ್ಲೆಯಲ್ಲಿ 186 ಜನರು ಮೃತಪಟ್ಟಿದ್ದಾರೆ.