ಚಿಕ್ಕಣ್ಣ ಇದುವರೆಗೂ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈಗ ಅವರ ಇಮೇಜ್ ಬದಲಾಯಿಸುವುದುಕ್ಕೆ ಹೊರಟಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ. ತಮ್ಮ ಹೊಸ ಚಿತ್ರ “ಸಂಹಾರ’ದಲ್ಲಿ ಚಿಕ್ಕಣ್ಣಗೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಪಾತ್ರ ಖಡಕ್ ಆಗಿ ಬರಬೇಕು ಎನ್ನುವುದರ ಜೊತೆಗೆ ಇಮೇಜ್ ಬದಲಾಗಬೇಕು ಎಂದು ಚಿಕ್ಕಣ್ಣ, “ಸಿಂಗಂ’ ಮೀಸೆ ಕೂಡಾ ಬಿಟ್ಟಿದ್ದಾರೆ.
ಈ ಕುರಿತು ಮಾತನಾಡುವ ಗುರು, “ಮೊದಲ ಬಾರಿಗೆ ಚಿಕ್ಕಣ್ಣ ಒಂದು ಗಂಭೀರವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿ. ಯಾವುದೋ ಇನ್ವೆಸ್ಟಿಗೇಷನ್ ಸಂದರ್ಭದಲ್ಲಿ ಚಿರು ಜೊತೆಯಾಗುತ್ತಾರೆ. ಚಿಕ್ಕಣ್ಣ ಸಹಾಯ ಪಡೆದು ಚಿರಂಜೀವಿ ಸರ್ಜಾ ಏನು ಮಾಡುತ್ತಾರೆ ಎನ್ನುವುದು ಚಿತ್ರದ ಕಥೆ. ಇಲ್ಲಿ ಅವರು ಸ್ಟ್ರಿಕ್ಟ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.
ಕೆಲವೊಮ್ಮೆ ಮಾತುಗಳಲ್ಲಿ ತಮಾಷೆ ಇದೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಅವರು ಬಹಳ ಗಂಭೀರವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಹೆಸರು ರಾಜಾ ಹುಲಿ. ಸಖತ್ ಮಾಸ್ ಸಂಭಾಷಣೆಗಳಿವೆ’ ಎನ್ನುತ್ತಾರೆ ಗುರು ದೇಶಪಾಂಡೆ. ಅಂದ ಹಾಗೆ, “ಸಂಹಾರ’ ಚಿತ್ರದ ಚಿತ್ರೀಕರಣ ಶುರುವಾಗಿದೆ. ಸದ್ಯಕ್ಕೆ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಮೇ 25ರವರೆಗೂ ಅಲ್ಲೇ ಮುಂದುವರೆಯಲಿದೆ.
ಈಗಾಗಲೇ ಚಿಕ್ಕಣ್ಣನ ಎಂಟ್ರಿಯಾಗಿದ್ದು, ಅವರ ಮತ್ತು ಚಿರು ಅಭಿನಯದ ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಜಗದೀಶ್ ವಾಲಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಮತ್ತು ರವಿ ಬಸ್ರೂರು ಸಂಗೀತವಿರುವ ಈ ಚಿತ್ರದಲ್ಲಿ ಚಿರುಗೆ ನಾಯಕಿಯರಾಗಿ ಹರಿಪ್ರಿಯ ಮತ್ತು ಕಾವ್ಯ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ವೆಂಕಟೇಶ್ ಮತ್ತು ಸುಂದರ್ ಕಾಮರಾಜ್ ನಿರ್ಮಿಸುತ್ತಿದ್ದಾರೆ.