Advertisement

ಪಟಾಕಿ ದುರಂತಗಳ ಕಡಿವಾಣಕ್ಕೆ ಕಠಿನ ಕ್ರಮ ಅಗತ್ಯ

11:54 PM Jan 29, 2024 | Team Udayavani |

ಇತ್ತೀಚೆಗಿನ ದಿನಗಳಲ್ಲಿ ರಾಜ್ಯದಲ್ಲಿ ಮೂರನೇ ಪಟಾಕಿ ಗೋಡೌನ್‌ ಸ್ಫೋಟ ಪ್ರಕರಣ ವರದಿಯಾಗಿದೆ. ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಬಳಿಯ ಪಟಾಕಿ ತಯಾರಿಕ ಘಟಕದಲ್ಲಿ ಭಾರಿ ನ್ಪೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹಾಗೆಯೇ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ಪಟಾಕಿ ಸಂಗ್ರಹಾಗಾರದಲ್ಲಿ ಭಾರೀ ಸ್ಫೋಟ ಉಂಟಾಗಿದ್ದು, 14 ಮಂದಿ ಸಾವನ್ನಪ್ಪಿದ್ದರು. 2023ರ ಆಗಸ್ಟ್‌ನಲ್ಲಿ ಹಾವೇರಿಯಲ್ಲಿಯೂ ಇಂಥದ್ದೇ ಒಂದು ದುರ್ಘ‌ಟನೆ ನಡೆದು ನಾಲ್ವರು ಬಲಿಯಾಗಿದ್ದರು. ಪ್ರತೀ ಬಾರಿ ಇಂಥ ಘಟನೆ ಯಾದಾಗಲೆಲ್ಲ ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಮೈ ಕೊಡವಿ ಎದ್ದು ನಿಲ್ಲುತ್ತದೆ, ಕ್ರಮದ ಎಚ್ಚರಿಕೆ ನೀಡುತ್ತದೆ. ಅಲ್ಲಿಗೆ ಮುಗಿಯುತ್ತದೆ.

Advertisement

ಕಾನೂನಿನ ಸರಿಯಾದ ಪಾಲನೆ ಆಗದಿರುವುದೇ ಇಂಥ ದುರಂತಗಳಿಗೆ ಕಾರಣ ಎಂದು ಅಧಿಕಾರಿಗಳು ಹೇಳುತ್ತಾರೆ. ಈಗಲೂ ರಾಜ್ಯದಲ್ಲಿ ಹಲವೆಡೆ ಪರವಾನಿಗೆ ಇಲ್ಲದ ಪಟಾಕಿ ತಯಾರಿಕ ಮತ್ತು ದಾಸ್ತಾನು ಇಡುವ ಅಕ್ರಮಗಳು ನಡೆಯುತ್ತಿದ್ದು, ಇದು ನಮ್ಮ ವ್ಯವಸ್ಥೆಯೊಳಗಿನ ಹುಳುಕಿಗೆ ಕಾರಣವಾಗಿದೆ. ಹಿಂದೆ ಅತ್ತಿಬೆಲೆ ಪ್ರಕರಣದಲ್ಲಿ ಪರವಾನಿಗೆಯ ಮಿತಿಗಿಂತ ಹೆಚ್ಚಿನ ದಾಸ್ತಾನನ್ನು ಶೇಖರಿಸಿದ್ದು ಅಲ್ಲದೆ, ಮಾಲಕನ ನಿರ್ಲಕ್ಷ್ಯದಿಂದ ಸರಿಯಾದ ಸುರಕ್ಷ ಕ್ರಮ ಗಳನ್ನು ಜಾರಿಗೊಳಿಸದೇ ಇದ್ದುದು ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿತ್ತು. ಈಗ ವೇಣೂರು ಪ್ರಕರಣದಲ್ಲೂ ಇಂಥ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಅತ್ತಿಬೆಲೆ ಪ್ರಕರಣದ ಅನಂತರ ನಗರ ಅಪರಾಧ ಪತ್ತೆ ದಳವು ಬೆಂಗಳೂರಿನ ಹಲವೆಡೆ ದಾಳಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನಿಡಲಾಗಿದ್ದ ಸುಮಾರು 40 ಲಕ್ಷ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿತ್ತು. ಆದರೆ ಅದು ಆರಂಭಶೂರತ್ವಕ್ಕೆ ಸಾಕ್ಷಿಯಾಯಿತು. ಸಂಬಂಧಿಸಿದ ಇಲಾಖೆಗಳು ನಿರಂತರ ವಾಗಿ ಇಂಥ ಸಿಡಿಮದ್ದು ತಯಾರಿಕ ಕೇಂದ್ರ ಮತ್ತು ದಾಸ್ತಾನು ಕೇಂದ್ರಗಳತ್ತ ತಪಾಸಣೆ ನಡೆಸುತ್ತಿರಬೇಕು. ಹಲವು ಘಟಕಗಳಲ್ಲಿ ಯಾವುದೇ ನಿರ್ದಿಷ್ಟ ಸುರಕ್ಷ ಕ್ರಮಗಳನ್ನು ಪಾಲಿಸದೆ ಇರುವುದು ವೇದ್ಯ. ಈ ನಿಟ್ಟಿನಲ್ಲಿ ಅಂಥ ಘಟಕಗಳನ್ನು ಮುಟ್ಟುಗೋಲು ಹಾಕುವ ಮೂಲಕ ಈ ರೀತಿಯ ದುರಂತಗಳನ್ನು ತಪ್ಪಿಸಬೇ ಕಾಗುತ್ತದೆ. ಇಲ್ಲದೆ ಇದ್ದರೆ, ಈ ಬಗೆಯ ದುರಂತಗಳಿಗೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ.

ಸಾಮಾನ್ಯವಾಗಿ ಸಿಡಿಮದ್ದು/ಪಟಾಕಿ ತಯಾರಿಕೆ, ದಾಸ್ತಾನು ಹಾಗೂ ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಕೇಂದ್ರದ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷ ಸಂಸ್ಥೆಗಳ ಪರವಾನಿಗೆ ಪಡೆಯ ಬೇಕಾಗುತ್ತದೆ. ಈ ಅಧಿಕಾರವು ಹಲವು ಇಲಾಖೆಗಳ ನಡುವೆ ಹಂಚಿ ಹೋಗಿರುವುದರಿಂದ ಸಹಜವಾಗಿಯೇ ಭ್ರಷ್ಟಾಚಾರದ ಕೂಪವಾಗಿ ಪರಿಣ ಮಿಸಿದೆ. ಈ ನಿಟ್ಟಿನಲ್ಲಿ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಿ, ನಿಯಂತ್ರಣಕ್ಕೆ ತರಲು ಸರಕಾರ ಹೆಜ್ಜೆ ಹಾಕಬೇಕು.

Advertisement

Udayavani is now on Telegram. Click here to join our channel and stay updated with the latest news.

Next