ಚಿಂತಾಮಣಿ: ಅ.1ರಿಂದ ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧಕ್ಕೆ ಪ್ರಧಾನ ಮಂತ್ರಿಗಳು ಕರೆ ಕೊಟ್ಟಿದ್ದು, ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ಹಾಗೂ ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳ ಮೇಲೆ ನಗರಸಭೆ ಅಧಿಕಾರಿಗಳು ಗುರುವಾರ ದಾಳಿ ಮಾಡಿ 60 ಕ್ಕೂ ಹೆಚ್ಚು ಕೆ.ಜಿ.ಯಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು.
ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ನಗರಸಭೆ ಪರಿಸರ ಅಭಿಯಾಂತರ ಉಮಾಶಂಕರ್, 2016 ರಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದ್ದ ವೇಳೆ ಚಿಂತಾಮಣಿ ಪ್ಲಾಸ್ಟಿಕ್ ಮುಕ್ತ ನಗರವೆಂದು ಘೋಷಿಸಲಾಗಿತ್ತು. ಅದೇ ರೀತಿ ಈಗಲೂ ಚಿಂತಾಮಣಿಯನ್ನು ಮತ್ತೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಎಲ್ಲರು ಸಹಕರಿಸಬೇಕೆಂದರು.
ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಮಾಲಿನ್ಯವಾಗುತ್ತದೆ. ಪ್ಲಾಸ್ಟಿಕ್ ಬಳಕೆ ಕಾನೂನು ಬಾಹಿರ ಆಗಿರುವುದರಿಂದ ನಗರದಾದ್ಯಂತ ಬಳಕೆ ನಿಷೇಧಿಸಲಾಗುವುದು. ಹೋಟೆಲ್‌ಗಳಲ್ಲಿ ತಿಂಡಿ ಪಾರ್ಸಲ್ ಮಾಡುವುದಕ್ಕೆ ಮತ್ತು ಪ್ಲೇಟ್ ಮೇಲೆ ಅಳವಡಿಸುವುದರಿಂದ ಹಾಗೂ ಬಿಸಿ ಆಹಾರ ಪದಾರ್ಥಗಳ ಮೇಲೆ ಪ್ಲಾಸ್ಟಿಕ್ ಪೇಪರ್ ಹಾಕಿದರೆ ಆಹಾರಕ್ಕೆ ಪ್ಲಾಸ್ಟಿಕಾಂಶ ಸೇರಿ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಹೋಟೇಲ್ ಮತ್ತು ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗುವುದು ಎಂದರು.
ಕಾನೂನು ಕ್ರಮ: ನಗರದ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸುತ್ತೇವೆ. ಮಾರಾಟ ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ನಗರಸಬೆ ಹಿರಿಯ ಆರೋಗ್ಯಾದಿಕಾರಿ ಆರತಿ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರತಿಭಾ, ಶಂಕರಪ್ಪ ಮತ್ತಿತರರು ನಗರಸಬೆಯ ಅಧಿಕಾರಿಗಳು ಸೇರಿದಂತೆ ಇತ್ತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು.