ದೇಶದಲ್ಲಿ ಡಿಜಿಟಲ್ ವಹಿವಾಟು ಆರಂಭವಾದ ಮೇಲೆ, ಸೈಬರ್ ಕಳ್ಳರ ಅಬ್ಬರವೂ ಹೆಚ್ಚುತ್ತಿದ್ದು, ಮುಗ್ಧರ ಜತೆಗೆ ಕೆಲವೊಮ್ಮೆ ಸೈಬರ್ ಅಪರಾಧದ ಅರಿವು ಇದ್ದವರೂ ಹಣ ಕಳೆದುಕೊಳ್ಳುತ್ತಿರುವುದು ಮಾಮೂಲಿಯಾಗಿಬಿಟ್ಟಿದೆ. ಬ್ಯಾಂಕ್ ಖಾತೆಗೆ ಕನ್ನ ಹಾಕುವುದರಿಂದ ಹಿಡಿದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಕೆದಾರರ ಅರಿವಿಗೆ ಬಾರದಂತೆಯೇ ಬಳಸಿ ಅಲ್ಲಿಂದಲೂ ಹಣ ಲಪಟಾಯಿಸಲಾಗುತ್ತಿದೆ.
ಸೈಬರ್ ಅಪರಾಧದಲ್ಲಿ ಕೇವಲ ಹಣಕಾಸು ವಂಚನೆಯಷ್ಟೇ ಬರುವುದಿಲ್ಲ. ಇದರ ಜತೆಗೆ ಹ್ಯಾಕಿಂಗ್, ಫಿಶಿಂಗ್, ವೈರಸ್‌ನಂಥ ಪ್ರಕರಣಗಳೂ ಇರುತ್ತವೆ. ಆದರೆ, ಒಟ್ಟಾರೆ ಸೈಬರ್ ಅಪರಾಧದಲ್ಲಿ ಶೇ.75ರಷ್ಟು ಪ್ರಕರಣಗಳು ಹಣಕಾಸು ವಂಚನೆಗೆ ಸೇರಿರುತ್ತವೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಅಲ್ಲದೆ 2020ರ ಆರಂಭದಿಂದ 2023ರ ಜೂನ್‌ವರೆಗಿನ ದತ್ತಾಂಶದಲ್ಲಿ ಶೇ.50ರಷ್ಟು ಪ್ರಕರಣಗಳು ಯುಪಿಐ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ಗೆ ಸಂಬಂಧಪಟ್ಟವುಗಳಾಗಿವೆ. 2019ರ ದತ್ತಾಂಶದ ಪ್ರಕಾರ, ದೇಶದಲ್ಲಿ ವರ್ಷಕ್ಕೆ 1.25 ಲಕ್ಷ ಕೋಟಿ ರೂ.ನಷ್ಟು ಸೈಬರ್ ವಂಚನೆಯಾಗುತ್ತದೆ.
ಕರ್ನಾಟಕದಲ್ಲಿಯೂ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 2022ರಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ಇತ್ಯರ್ಥವಾಗಿರುವ ಪ್ರಕರಣಗಳು ಕಡಿಮೆ ಇವೆ. ಕರ್ನಾಟಕದಲ್ಲಿ ನಡೆಯುವ ಒಟ್ಟಾರೆ ಸೈಬರ್ ಅಪರಾಧಗಳಲ್ಲಿ ಬೆಂಗಳೂರೊಂದರಲ್ಲೇ ಶೇ.80ರಷ್ಟು ಪ್ರಕರಣ ದಾಖಲಾಗುತ್ತವೆ. ಅದರಲ್ಲೂ ಐಟಿ-ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಗಾಳ ಹಾಕುತ್ತಿದ್ದಾರೆ. ಹೆಚ್ಚಾಗಿ ಮಹಿಳೆಯರೇ ಸೈಬರ್ ವಂಚನೆಯ ಜಾಲಕ್ಕೆ ಬೀಳುತ್ತಾರೆ. ಅಲ್ಲದೆ ರಾಜಕಾರಣಿಗಳು, ಅಧಿಕಾರಿಗಳು, ಸಿನೆಮಾ ತಾರೆಯರು ಕೂಡ ಐಟಿ ಅಪರಾಧದ ಸುಳಿಗೆ ಸಿಲುಕುತ್ತಿದ್ದಾರೆ.
ಪ್ರಸಕ್ತ ವರ್ಷ ಕರ್ನಾಟಕದಲ್ಲಿ ಜನವರಿಯಿಂದ ಸೆಪ್ಟಂಬರ್‌ವರೆಗೆ 470 ಕೋಟಿ ರೂ.ನಷ್ಟು ಹಣವನ್ನು ಸೈಬರ್ ಕಳ್ಳರು ದೋಚಿದ್ದಾರೆ. ಅಂದರೆ ಉಚಿತವಾಗಿ ಏನನ್ನಾದರೂ ನೀಡುತ್ತೇವೆ, ಆನ್‌ಲೈನ್ ಉದ್ಯೋಗ ವಂಚನೆ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಂಚನೆ, ಕ್ರಿಪ್ಟೋಕರೆನ್ಸಿ ಹೂಡಿಕೆ ಮತ್ತು ಲೈಂಗಿಕ ಆಸೆ ತೋರಿಸಿ ಹಣ ದೋಚುವ ಪ್ರಕರಣಗಳು ನಡೆಯುತ್ತಿವೆ. ಮೊದಲೇ ಹೇಳಿದ ಹಾಗೆ, ಈ ವಂಚನೆಯ ಜಾಲಕ್ಕೆ ಹೆಚ್ಚು ಕಲಿತವರೇ ಹೆಚ್ಚಾಗಿ ಬೀಳುತ್ತಿದ್ದಾರೆ. ಹೀಗಾಗಿ, ಸೈಬರ್ ಅಪರಾಧ ಗೊತ್ತಿದ್ದವರೇ ಹೆಚ್ಚು ವಂಚನೆಗೊಳಗಾಗುತ್ತಿರುವುದರಿಂದ ಈಗಷ್ಟೇ ಆನ್‌ಲೈನ್ ವ್ಯವಹಾರ ಶುರು ಮಾಡಿರುವವರಿಗೆ ಮಾಡಿರುವ ವಂಚನೆ ಗೊತ್ತಾಗದೇ ಇರುವ ಸಂಗತಿಗಳೂ ಇರುತ್ತವೆ.
ಸೈಬರ್ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕಠಿನ ಕ್ರಮ ತೆಗೆದುಕೊಳ್ಳಬೇಕು. ಜನ ಕೂಡ ತಮ್ಮ ಮೊಬೈಲ್ ಅನ್ನು ಹೆಚ್ಚು ಎಚ್ಚರಿಕೆಯಿಂದ ಬಳಕೆ ಮಾಡಬೇಕು. ಆಧಾರ್ ಸೇರಿದಂತೆ ತಮ್ಮ ಗುರುತಿನ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಬಾರದು. ಆಧಾರ್ ನಂಬರ್ ಮತ್ತು ಬಯೋಮೆಟ್ರಿಕ್ ದತ್ತಾಂಶವನ್ನು ಲಾಕ್ ಮಾಡಿ ಇಡಬೇಕು. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಸಾಧ್ಯವಾದಷ್ಟು ಮೊಬೈಲ್‌ನಲ್ಲಿರುವ ಈ ಕಾರ್ಡ್‌ಗಳ ಆ್ಯಪ್ ಮೂಲಕ ಲಾಕ್ ಮಾಡಿಕೊಳ್ಳಬೇಕು. ಸರಕಾರದ ಜತೆಯಲ್ಲಿ ಜನರೂ ಎಚ್ಚರಿಕೆಯಿಂದ ಇದ್ದರೆ ಮಾತ್ರ ಸೈಬರ್ ವಂಚನೆ ತಡೆಯಲು ಸಾಧ್ಯ.