Advertisement

ಅಕ್ರಮ ತಡೆಗೆ ನಿಗಾವಹಿಸಲು ಕಟ್ಟುನಿಟ್ಟಿನ ಸೂಚನೆ

04:09 PM Apr 19, 2018 | |

ಧಾರವಾಡ: ಮೇ 12ರಂದು ನಡೆಯಲಿರುವ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಗೆ ಆಗಮಿಸಿರುವ ಚುನಾವಣಾ ವೆಚ್ಚ ವೀಕ್ಷಕರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳೊಂದಿಗೆ ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಸಭೆ ನಡೆಸಿದರು.

Advertisement

ಜಿಲ್ಲೆಯ ಸಂಚಾರಿ ವಿಚಕ್ಷಣಾ ದಳ, ಎಸ್‌ ಎಸ್‌ಟಿ-ವಿಎಸ್‌ಟಿ ತಂಡದ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ನೋಡಲ್‌ ಅಧಿಕಾರಿಗಳಿಗೆ ವಿಧಾನಸಭಾ ಕ್ಷೇತ್ರಗಳ ವೆಚ್ಚ ವೀಕ್ಷಕರಾಗಿರುವ ಮಧ್ಯಪ್ರದೇಶದ ಪರಾಗ ಕತ್ರೆ, ಮಹಾರಾಷ್ಟ್ರದ ಆನಂದಕುಮಾರ, ನವದೆಹಲಿಯ ಅಭಿಜಿತ್‌ ರಾಯ್‌, ಆರ್‌.ಆರ್‌.ಎನ್‌. ಶುಕ್ಲಾ, ಪಶ್ಚಿಮಬಂಗಾಳದ ಭೀಮ ಸಿಂಗ್‌ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವಾಗಿ ಕೆಲಸ ಮಾಡಬೇಕು. ಸಾರ್ವಜನಿಕರು, ಮತದಾರರು ಹಾಗೂ ಅಭ್ಯರ್ಥಿಗಳೊಂದಿಗೆ ಶಾಂತಿ, ಸಹನೆಯಿಂದ ವರ್ತಿಸಬೇಕು. ಜಿಲ್ಲೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಹಬ್ಬದ ವಾತಾವರಣ ಸೃಷ್ಟಿಸಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

83 ಸೂಕ್ಷ್ಮ ಮತಗಟ್ಟೆಗಳು: ಜಿಲ್ಲಾ ಚುನಾವಣಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, ಸುಮಾರು 18,47,000 ಜನಸಂಖ್ಯೆ ಹೊಂದಿರುವ ಧಾರವಾಡ ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಜನ ನಗರ ಪ್ರದೇಶದಲ್ಲಿಯೇ ವಾಸಿಸುತ್ತಾರೆ. ಜಿಲ್ಲೆಯ 1628 ಮತಗಟ್ಟೆಗಳಲ್ಲಿ 1223 ಸಾಮಾನ್ಯ, 83 ಸೂಕ್ಷ್ಮಹಾಗೂ 375 ಸೂಕ್ಷ್ಮಮತ್ತು ನಿರ್ಣಾಯಕ ಎಂದು ವಿಂಗಡಿಸಲಾಗಿದೆ. ಅವುಗಳಿಗೆ ಸೆಕ್ಟರ್‌ ಅಧಿ ಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಹು-ಧಾ ನಗರ ಪೊಲೀಸ್‌ ಆಯುಕ್ತ ಎಮ್‌. ಎನ್‌. ನಾಗರಾಜ ಮಾತನಾಡಿ, ಭದ್ರತಾ ವ್ಯವಸ್ಥೆಯನ್ನು ಸಾಕಷ್ಟು ಜಾಗೃತಗೊಳಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಗಳು ಅವಳಿ ನಗರದಲ್ಲಿ ಪಥಸಂಚಲನ ನಡೆಸಿವೆ ಎಂದರು.

Advertisement

ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಆರ್‌. ಸ್ನೇಹಲ್‌ ಮಾತನಾಡಿ, ಮತದಾರರ ಜಾಗೃತಿಗಾಗಿ ಸೈಕಲ್‌ ಜಾಥಾ, ಪ್ರಬಂಧ, ಕೋಲಾಜ್‌ ಸ್ಪರ್ಧೆಗಳು, ಪ್ಯಾರಾ ಮೋಟಾರ್‌ ಗ್ಲೈಡಿಂಗ್‌ ಮತ್ತಿತರ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಎಸ್ಪಿ ಜಿ. ಸಂಗೀತಾ, ಡಿಸಿಪಿ ರೇಣುಕಾ ಸುಕುಮಾರ ಇನ್ನಿತರರಿದ್ದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ
ಜಿಲ್ಲೆಗೆ ಆಗಮಿಸಿರುವ ಚುನಾವಣಾ ವೆಚ್ಚ ವೀಕ್ಷಕರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದರು. ಚುನಾವಣಾ ನೀತಿ ಸಂಹಿತೆ ಹಾಗೂ ವೆಚ್ಚದ ನಿರ್ವಹಣೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದರು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸರಿಯಾದ ಮಾಹಿತಿ ಒದಗಿಸಬೇಕು. ತಪ್ಪು ಮಾಹಿತಿ ನೀಡಿದರೆ ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಂತೆ. ಲೆಕ್ಕಪತ್ರ ನಿರ್ವಹಣೆಯಲ್ಲಿ ಪರಿಣಿತರಾದವರನ್ನು ಚುನಾವಣಾ ಪ್ರಕ್ರಿಯೆಯ ವೆಚ್ಚ ನಿರ್ವಹಣೆಗೆ ಬಳಸಿಕೊಳ್ಳಬೇಕು ಎಂದು ವೀಕ್ಷಕರು ಸೂಚಿಸಿದರು. ವಾಹನಗಳ ಪರವಾನಗಿ, ಕಾರ್ಯಕ್ರಮಗಳ ಆಯೋಜನೆಗೆ ತ್ವರಿತವಾಗಿ ಅನುಮತಿ ನೀಡಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೋರಿದರು.

ಚುನಾವಣಾ ವೆಚ್ಚ ವೀಕ್ಷಕರ ನೇಮಕ
ಧಾರವಾಡ: ರಾಜ್ಯ ವಿಧಾನಸಭಾ ಚುನಾವಣೆಯ ವೆಚ್ಚ ವೀಕ್ಷಣೆಗಾಗಿ ಚುನಾವಣಾ ಆಯೋಗವು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಐದು ಜನ ವೆಚ್ಚ ವೀಕ್ಷಕರನ್ನು ನೇಮಿಸಿದ್ದು, ಅವರ ಹೆಸರು ಮತ್ತು ಸಂಪರ್ಕ ಸಂಖ್ಯೆ ವಿವರ ಇಂತಿದೆ ನವಲಗುಂದ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ಪರಾಗ್‌ ಕತ್ರೆ (ದೂ: 0836-2445521, ಮೊ:94498 47646), ಧಾರವಾಡ-71 ವಿಧಾನಸಭಾ ಕ್ಷೇತ್ರಕ್ಕೆ ಆನಂದ ಕುಮಾರ (ದೂ:0836-2444457, ಮೊ:94498 47647), ಹು-ಧಾ ಪೂರ್ವ ಮತ್ತು ಹು-ಧಾ ಪಶ್ಚಿಮ ಕ್ಷೇತ್ರಗಳಿಗೆ ಅಭಿಜಿತ್‌ ರಾಯ್‌ (ದೂ:0836-2445520, ಮೊ:94498 47648), ಹು-ಧಾ ಸೆಂಟ್ರಲ್‌ ಕ್ಷೇತ್ರಕ್ಕೆ ಆರ್‌.ಆರ್‌.ಎನ್‌. ಶುಕ್ಲಾ (ದೂ:0836-2444497, ಮೊ:94498 47649), ಕಲಘಟಗಿ ಕ್ಷೇತ್ರಕ್ಕೆ ಭೀಮಸಿಂಗ್‌ (ದೂ: 0836-2444488, ಮೊ:9449847650) ನೇಮಕಗೊಂಡಿದ್ದಾರೆ. ಚುನಾವಣಾ ವೆಚ್ಚದ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಗತ್ಯ ಸಂದರ್ಭಗಳಲ್ಲಿ ಇವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ಎಸ್‌.ಬಿ.ಬೊಮ್ಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next