ರಾಮನಗರ: ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಇಲಾಖೆಗಳು ಕಚೇರಿ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸೂಚನೆ ಕೊಟ್ಟರು.
ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿರುವ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರತಿ ಇಲಾಖೆಯಲ್ಲಿ ಕನ್ನಡ ಅನುಷ್ಠಾನವಾಗಿರುವ ಬಗ್ಗೆ ಮಾಸಿಕ ವರದಿಯನ್ನು ಪ್ರತಿ ತಿಂಗಳು 3ನೇ ತಾರೀಖೀನೊಳಗೆ ಕನ್ನಡ ಮತ್ತು ಸಂಸ್ಕೃತಿಇಲಾಖೆಗೆ ಸಲ್ಲಿಸುವಂತೆ ಅವರು ಆದೇಶಿಸಿದರು.
ನ್ಯಾಯಂಗ ಇಲಾಖೆ ಹೊರತುಪಡಿಸಿ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳು, ರಾಜ್ಯ ಸರ್ಕಾರದ ಎಲ್ಲಾ ಪತ್ರವ್ಯವಹಾರವನ್ನು ಕನ್ನಡದಲ್ಲೇ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಇಲಾಖೆಗಳು ನೇರವಾಗಿ ಪತ್ರ ವ್ಯವಹಾರ ನಡೆಸುವುದಿಲ್ಲ. ಹೀಗಾಗಿಆಂಗ್ಲ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುವ ಸನ್ನಿವೇಶ ಉದ್ಭವಿಸುವುದಿಲ್ಲ ಎಂದು ವಿವರಿಸಿದರು.
ಕನ್ನಡ ನಾಮಫಲಕ ಅಳವಡಿಕೆಗೆ ತಾಕೀತು: ಜಿಲ್ಲೆಯಲ್ಲಿರುವ ಹೋಟೆಲ್ ಗಳು, ರೆಸಾರ್ಟ್‌ಗಳು, ಹೋಂ ಸ್ಟೇಗಳು ಕಡ್ಡಾಯವಾಗಿ ಕನ್ನಡದಲ್ಲೂ ನಾಮಫಲಕಗಳನ್ನು ಅಳವಡಿಸಬೇಕು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಪರಿಶೀಲನೆ ನಡೆಸಬೇಕು, ಕನ್ನಡದಲ್ಲಿ ನಾಮಫಲಕ ಅಳವಡಿಸದಿದ್ದಲ್ಲಿ ಪರವಾನಗಿ ರದ್ದು ಮಾಡಲು ಶಿಫಾರಸು ಮಾಡುವಂತೆ ತಿಳಿಸಿದರು.
ಸರ್ಕಾರಿ ಶಾಲೆಯ ಬಳಿ ಅನುಮತಿ ಇಲ್ಲ: ಸರ್ಕಾರಿ ಶಾಲೆಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಶಾಲೆಯನ್ನು ತೆರೆಯದಂತೆ ನಿಯಮವಿದೆ. ಇನ್ನೂ ಮುಂದೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಖಾಸಗಿ ಶಾಲೆ ತೆರೆಯಲು ಅನುಮತಿ ನೀಡುವ ಸಂದರ್ಭದಲ್ಲಿ ಈ ನಿಯಮವನ್ನು ಪರಿಶೀಲಿಸಿ ಅನುಮತಿ ನೀಡುವಂತೆ ಸೂಚನೆ ನೀಡಿದರು. ಇಲಾಖೆಗಳ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದಲ್ಲಿ ಮಾಹಿತಿ ಇರಲಿ ಎಂದರು.
ಮಾಹಿತಿ ಕನ್ನಡದಲ್ಲಿರಲಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಕುಮಾರ್‌ಮಾತನಾಡಿ, ಜಿಲ್ಲಾ ಕಚೇರಿಗಳ ಜಾಲತಾಣಗಳ(ಸಾಮಾಜಿಕ, ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇತ್ಯಾದಿ) ಇಲಾಖೆಯ ಯೋಜನೆಗಳ ವಿವಿಧ ಮಾಹಿತಿಗಳ ಪುಟಗಳನ್ನು ಕನ್ನಡದಲ್ಲಿ ನಿರ್ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ವೀಣಾ, ಕೆ.ಕಾಳಯ್ಯ, ಎಂ.ಭೈರೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂ.ಲಿಂ.ನಾಗರಾಜು, ಜಿಪಂ ಉಪಕಾರ್ಯದರ್ಶಿ ಉಮೇಶ್, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು