ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ವರದಿಯನ್ನು ಆಧರಿಸಿ ಮುಖ್ಯಮಂತ್ರಿಗಳು ಕಠಿಣ ಕ್ರಮಗಳನ್ನು ಕೈಗೊಂಡು ಆದೇಶ ಹೊರಡಿಸಿದ್ದಾರೆ, ಇದು ಯಾರ ವಿರುದ್ಧವೂ ಅಲ್ಲ, ಯಾವ ಕ್ಷೇತ್ರದ ವಿರುದ್ಧವೂ ಅಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆರೂವರೆ ಕೋಟಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಕಠಿಣ ನಿರ್ಭಂಧಗಳನ್ನು ಜಾರಿಗೊಳಿಸಿದ್ದೇವೆ. ಇದು ಯಾರ ವಿರುದ್ಧವೂ ಅಲ್ಲ ಜನರ ಆರೋಗ್ಯವನ್ನು ಕಾಪಾಡಲು ಮುಖ್ಯ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಜನ ಸಹ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಇಚ್ಚೆ ಮತ್ತು ಬದ್ಧತೆಯಿಂದ ಕೇವಲ 10 ತಿಂಗಳಲ್ಲಿ ದೇಶಿಯ ಲಸಿಕೆ ಲಭ್ಯವಾಗಿದೆ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದಾರೆ ಅದಕ್ಕಾಗಿ 35 ಸಾವಿರ ಕೋಟಿ ರೂಗಳನ್ನು ಮೀಸಲಿದ್ದಾರೆ ಎಂದ ಸಚಿವರು ರಾಜ್ಯದಲ್ಲಿ 5500 ಲಸಿಕಾ ಕೇಂದ್ರಗಳನ್ನು ಸಿದ್ಧಪಡಿಸಿದ್ದೇವೆ. ಪ್ರತಿ ಕೇಂದ್ರದಲ್ಲಿ ಪ್ರತಿನಿತ್ಯ 100 ಜನ ಲಸಿಕೆ ಪಡೆದುಕೊಂಡಿದ್ದರೇ ಇದುವರೆಗೆ 5 ಲಕ್ಷ 50 ಸಾವಿರ ಮಂದಿ ಲಸಿಕೆ ಪಡೆದುಕೊಳ್ಳಬಹುದಿತ್ತು ಆದರೇ ಪ್ರತಿದಿನ ಕೇವಲ ಒಂದರಿಂದ ಒಂದೂವರೆ ಲಕ್ಷ ಜನ ಮಾತ್ರ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ ಶೇ. 70ರಷ್ಟು ಜನರು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಜಿಲ್ಲೆ ಮುಂಚೂಣಿಯಲ್ಲಿರಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಸಾಮಾಜಿಕ ರಾಯಭಾರಿಯ ಕೆಲಸವನ್ನು ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಕೊರೊನಾ ವಾರಿಯರ್ಸ್‍ಗಳು ಶೇ 100ರಷ್ಟು ಲಸಿಕೆಯನ್ನು ಪಡೆದುಕೊಳ್ಳಬೇಕು. ಪ್ರಧಾನಮಂತ್ರಿಗಳು ಲಸಿಕೆಗಾಗಿ 35 ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟಿದ್ದು ಭಾರತೀಯರ ಅದೃಷ್ಟ ಮತ್ತು ಸೌಭಾಗ್ಯ ಎಂದರು.
ಕೇಂದ್ರ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸಲು ಉಚಿತವಾಗಿ ಲಸಿಕೆ ನೀಡುತ್ತಿದ್ದರು ಸಹ ಅದನ್ನು ಪಡೆಯಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದ ಸಚಿವರು ಮುಂದಿನ ಮೇ ತಿಂಗಳಿನಲ್ಲಿ ಸೋಂಕು ಹೆಚ್ಚಳವಾಗುವ ಮುನ್ಸೂಚನೆಯನ್ನು ತಾಂತ್ರಿಕ ಸಲಹಾ ಸಮಿತಿ ನೀಡಿದ್ದು ನಾಗರಿಕರು ಸ್ವಯಂ ಜಾಗೃತಿರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಶೇಷ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಆರ್ ಲತಾ, ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರಾಟ ನಿಗಮದ ಅಧ್ಯಕ್ಷ ಕೆವಿ ನಾಗರಾಜ್,ತಾಪಂ ಅಧ್ಯಕ್ಷ ರಾಮಸ್ವಾಮಿ, ಚಿಕ್ಕಬಳ್ಳಾಪುರ ಜಿಪಂಯ ಅಧ್ಯಕ್ಷ ಎಂಬಿ ಚಿಕ್ಕನರಸಿಂಹಯ್ಯ (ಚಿನ್ನಿ), ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಡಿಎಸ್ ಆನಂದ್‍ರೆಡ್ಡಿ (ಬಾಬು), ಜಿಲ್ಲಾ ಪೋಲೀಸ್ ವರಿಷ್ಠಾದಿಕಾರಿ ಜಿಕೆ ಮಿಥುನ್‍ಕುಮಾರ್, ಜಿಪಂ ಹಿರಿಯ ಸದಸ್ಯ ಕೇಶವರೆಡ್ಡಿ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರುಳುಕುಂಟೆ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.