Advertisement

ನಕಲು ತಡೆಗೆ ಕಟ್ಟುನಿಟ್ಟಿನ ಕ್ರಮ

05:14 PM Jun 19, 2018 | Team Udayavani |

ಯಾದಗಿರಿ: ಕಳೆದ ಮಾರ್ಚ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಜಿಲ್ಲಾಡಳಿತ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ನಕಲು ತಡೆಗೆ ಮತ್ತಷ್ಟು ಕಠಿಣ ನಿಯಮ ರೂಪಿಸಿದೆ. ನಕಲು ಮಾಡಲು ಸಹಕರಿಸಿದ್ದು ಕಂಡುಬಂದರೆ, ಭಾಗಿಯಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಅವರು, ಸ್ಥಾನಿಕ ಜಾಗೃತದಳ, ವಿಶೇಷ ಜಾಗೃತದಳ ಸಿಬ್ಬಂದಿಯೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದರೆ, ಯಾವುದೇ ನೋಟಿಸ್‌ ನೀಡಿದೆ ನೇರವಾಗಿ ಅಮಾನತು ಮಾಡಲಾಗುವುದು ಎಂದರು.

ಈ ಬಾರಿ ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆಯು ಜೂನ್‌ 21ರಿಂದ ಆರಂಭವಾಗಿ ಜೂನ್‌ 28ರ ವರೆಗೆ
ನಡೆಯಲಿದ್ದು, 29 ಪರೀಕ್ಷಾ  ಕೇಂದ್ರಗಳಲ್ಲಿ 9,371 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಎಲ್ಲಾ ಪೂರ್ವ
ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು. ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಕಿಟಕಿ ಮೂಲಕ
ನಕಲು ಚೀಟಿಗಳನ್ನು ಎಸೆಯುತ್ತಿರುವುದು ಕಂಡು ಬರುತ್ತಿದೆ.

ಶಾಲೆಗಳಲ್ಲಿ ತಡೆಗೋಡೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು. ಸರ್ಕಾರಕ್ಕೆ ಪತ್ರ ಬರೆದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು. ಕಳೆದ ಮಾರ್ಚ್‌ನಲ್ಲಿ ನಡೆದ ಪರೀಕ್ಷೆ ವೇಳೆ ಅಕ್ರಮದಲ್ಲಿ
ಭಾಗಿಯಾದ 46 ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಶ್ನೆ ಕೇಳಲಾಗಿ, ಈ ಬಗ್ಗೆ ವಿಚಾರಣೆ
ನಡೆದಿದ್ದು, 17 ಮಂದಿ ಮುಖ್ಯ ಅಧೀಕ್ಷಕರು ಮತ್ತು ಕೊಠಡಿ ಮೇಲ್ವಿಚಾರಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ
ಎಂದು ಅಧಿಕಾರಿಗಳು ಉತ್ತರ ನೀಡಿದರು.

ಪರೀಕ್ಷಾ  ಕೇಂದ್ರದ ಸಿ.ಸಿ. ಟಿವಿಗಳು ಬರೀ ಬೆದರು ಬೊಂಬೆಗಳಂತಾಗಬಾರದು. ಪರೀಕ್ಷೆ ಮುಗಿದ ಬಳಿಕ,
ಸಿ.ಸಿ.ಟಿವಿ ದೃಶ್ಯಾವಳಿ ಪರಿಶೀಲಿಸಬೇಕು. ಏನಾದರೂ ಅಕ್ರಮ ಸೆರೆಯಾಗಿದ್ದರೆ, ವರದಿ ನೀಡಬೇಕು ಎಂದು
ಸೂಚಿಸಿದ ಅವರು, ಈ ಬಗ್ಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕೆಂದು ತಿಳಿಸಿದರು.

Advertisement

ಜಿಪಂ ಸಿಇಒ ಡಾ| ಅವಿನಾಶ್‌ ಮೆನನ್‌ ರಾಜೇಂದ್ರನ್‌ ಮಾತನಾಡಿ, ನಕಲು ಮಾಡುವುದು ರುಜುವಾತಾದರೆ,
ಅಂತಹ ವಿದ್ಯಾರ್ಥಿಯನ್ನು ಸ್ಥಳದಲ್ಲಿಯೇ ಡಿಬಾರ್‌ ಮಾಡಲಾಗುವುದು. ಅಕ್ರಮಕ್ಕೆ ಸಹಕಾರ ನೀಡಿದಂತಹ
ಕೊಠಡಿ ಮೇಲ್ವಿಚಾರಕರ ವಿರುದ್ಧ ಕ್ರಿಮಿನಲ್‌ ಕೇಸ್‌ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಪ್ರಭಾರಿ ಉಪನಿರ್ದೇಶಕ ಶ್ರೀ ಚಂದ್ರಶೇಖರ ಪಾಟೀಲ,
ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಮೆಹಬೂಬ. ಬಿ, ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ
ಡಿ.ಎಂ. ಹೊಸಮನಿ, ಜಿಲ್ಲಾ ವಿಷಯ ಪರಿವೀಕ್ಷಕ ವೆಂಕೋಬ. ಬಿ, ಮೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು,
ವಿಶೇಷ ಜಾಗೃತ ದಳದ ಸದಸ್ಯರು, ಎಲ್ಲಾ 29ಕೇಂದ್ರಗಳ ಮುಖ್ಯ ಅಧೀಕ್ಷಕರು, ಎಲ್ಲಾ ಕೇಂದ್ರಗಳ ಪ್ರಶ್ನೆ ಪತ್ರಿಕೆಗಳ
ಪಾಲಕರು, ನೋಡಲ್‌ ಅಧಿಕಾರಿಗಳು, ತಾಲೂಕು ಮತ್ತು ಜಿಲ್ಲಾ ನೋಡಲ್‌ ಅಧಿಕಾರಿಗಳು ಹಾಗೂ ಮತ್ತಿತರರು
ಹಾಜರಿದ್ದರು. 

ಕಳೆದ ಬಾರಿ ಪರೀಕ್ಷಾ  ಕೇಂದ್ರಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರೀಕ್ಷೆಯಲ್ಲಿ ನಡೆಯುವ ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದೇನೆ. ಈ ಬಾರಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ. ಕಳೆದ ಬಾರಿಯಂತೆ ಈ ಬಾರಿಯೂ 7 ವಿಶೇಷ ಜಾಗೃತ ದಳ ರಚಿಸಬೇಕೆಂದು ಡಿಡಿಪಿಐಗೆ ಸೂಚಿಸಿದ್ದೇನೆ. ಪರೀಕ್ಷಾ  ದಿನಗಳಂದು ತಮ್ಮ ಮಕ್ಕಳನ್ನು ಕರೆ ತರುವ ಪೋಷಕರು, ಪರೀಕ್ಷಾ ಕೇಂದ್ರದ ಗೇಟ್‌ನೊಳಗೆ ಬರಲು ಯತ್ನಿಸುತ್ತಾರೆ. ಇದರಿಂದ ಸುಗಮ ಪರೀಕ್ಷೆಗೆ ತೊಂದರೆಯಾಗುತ್ತಿದೆ. ಹಾಗಾಗಿ ಪೋಷಕರು ಯಾರೂ ಕೂಡ ಕಾಂಪೌಂಡಿನೊಳಗೆ ಬರಬಾರದು.
 ಡಾ| ಅವಿನಾಶ್‌ ಮೆನನ್‌ ರಾಜೇಂದ್ರನ್‌, ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next