Advertisement

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಯಂತ್ರಣಕ್ಕೆ ಬಿಗಿ ಕ್ರಮ

08:08 PM Dec 06, 2022 | Team Udayavani |

ಬೆಂಗಳೂರು: ಗ್ರಾಮೀಣ ಭಾಗಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊರ ರಾಜ್ಯದಿಂದ ಮದ್ಯ ಅಕ್ರಮವಾಗಿ ಸಾಗಾಟ ಹಾಗೂ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಯಂತ್ರಣಕ್ಕಾಗಿ ಬುಧವಾರ ಅಬಕಾರಿ ಡೀಸಿಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಪತ್ತೆಯಾದರೆ ಮದ್ಯ ವಶಕ್ಕೆ ಪಡೆಯುವುದರ ಜತೆಗೆ ದೊಡ್ಡ ಮೊತ್ತದ ದಂಡ ನಿಗದಿ ಮಾಡಲಾಗುವುದು. ಶಿಕ್ಷಾರ್ಹ ಅಪರಾಧವನ್ನಾಗಿ ಪರಿಗಣಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಯಂತ್ರಿಸಬೇಕಾದರೆ ಹೊಸದಾಗಿ ಮದ್ಯದ ಮಳಿಗೆ ಲೈಸೆನ್ಸ್‌ ಕೊಡುವುದು ಅನಿವಾರ್ಯ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಲಾಡ್ಜ್, ವಸತಿ ಗೃಹಗಳಿಗೆ ನಿಯಮಾನುಸಾರ ಲೈಸೆನ್ಸ್‌ ನೀಡಲಾಗುತ್ತಿದೆ. ಎಂಎಸ್‌ಐಎಲ್‌ ಮಳಿಗೆ ತೆರೆಯಲು ಪ್ರಸ್ತಾವನೆ ಕೊಟ್ಟರೂ ಅನುಮತಿ ಕೊಡಲಾಗುತ್ತಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ರಾಜ್ಯಗಳಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಆಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯದಲ್ಲಿ ಪ್ರಸ್ತುತ 14 ಚೆಕ್‌ಪೋಸ್ಟ್‌ಗಳಿದ್ದು ಇನ್ನೂ ಹೊಸದಾಗಿ 25 ಚೆಕ್‌ಪೋಸ್ಟ್‌ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Advertisement

ಆಬಕಾರಿ ಇಲಾಖೆಯಲ್ಲಿ ಶೇ.40 ರಷ್ಟು ಹುದ್ದೆಗಳು ಖಾಲಿ ಇದ್ದು, 1000 ಪೇದೆ, 100 ಇನ್ಸ್‌ಪೆಕ್ಟರ್‌ಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ವಿದೇಶಿ ಕಂಪನಿಗಳು ಮದ್ಯ ತಯಾರಿಕೆ ಕಾರ್ಖಾನೆ ಸ್ಥಾಪಿಸಲು ಮುಂದಾದರೆ ಅವಕಾಶ ಮಾಡಿಕೊಡಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಸಕ್ತ ವರ್ಷ 29 ಸಾವಿರ ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು 30 ಸಾವಿರ ಕೋಟಿ ರೂ.ವರೆಗೆ ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹೊಸ ತಾಲೂಕುಗಳ ರಚನೆ ಹಿನ್ನೆಲೆಯಲ್ಲಿ 47 ಹೊಸ ಅಬಕಾರಿ ವಲಯ ರಚಿಸಲಾಗಿದೆ. ಅಬಕಾರಿ ತೆರಿಗೆ ಸೋರಿಕೆ ತಪ್ಪಿಸಲು ಎಲ್ಲ ರೀತಿಯ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next