ಹುಬ್ಬಳ್ಳಿ: ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ) ಜಾಲದಿಂದ ಹೊರಗುಳಿದ ವ್ಯಾಪಾರಿಗಳು ಹಾಗೂ ಉದ್ಯಮಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ದಂಡ, ಶಿಕ್ಷೆ ತಪ್ಪಿಸಿಕೊಳ್ಳಲು ಸಮರ್ಪಕವಾಗಿ ತೆರಿಗೆ ಭರಿಸುವುದು ಕಡ್ಡಾಯ ಎಂದು ಕೇಂದ್ರೀಯ ತೆರಿಗೆ ಇಲಾಖೆ ಧಾರವಾಡ ವಿಭಾಗದ ಉಪ ಆಯುಕ್ತರಾದ ಡಾ| ರಶ್ಮಿ ಹೇಳಿದರು.
ಕೇಶ್ವಾಪುರದ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಐಸಿಎಐ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಸರ್ಟಿಫಿಕೇಟ್ ಜಿಎಸ್‌ಟಿ ಕೋರ್ಸ್’ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ವ್ಯಾಪಾರಸ್ಥರು ಸರಕಾರಕ್ಕೆ ಮೋಸ ಮಾಡಲು ಸಾಧ್ಯವಿಲ್ಲ. ಎಲ್ಲ ವ್ಯಾಪಾರಿಗಳ ವಹಿವಾಟಿನ ಮಾಹಿತಿ ಇಲಾಖೆಗೆ ಇರುತ್ತದೆ. ಜಿಎಸ್‌ಟಿ ವ್ಯಾಪ್ತಿಗೆ ಬರುವ ಎಲ್ಲ ವ್ಯಾಪಾರಿಗಳು ಹಾಗೂ ವಹಿವಾಟುದಾರರು ಸರಿಯಾಗಿ ತೆರಿಗೆ ಪಾವತಿಸಬೇಕು. ಎಲ್ಲ ವ್ಯಾಪಾರಿಗಳು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವುದು ಅವಶ್ಯ. ವ್ಯವಹಾರ ಇರಲಿ ಅಥವಾ ಇಲ್ಲದಿರಲಿ ಪ್ರತಿ ತಿಂಗಳು 20ನೇ ದಿನಾಂಕದೊಳಗೆ ರಿಟರ್ನ್ ದಾಖಲಿಸುವುದು ಕಡ್ಡಾಯವಾಗಿದೆ ಎಂದರು.
ಇ-ವೇ ಬಿಲ್ ಅನ್ನು 3ಬಿಯಲ್ಲಿ ತೋರಿಸುವುದು ಅವಶ್ಯಕ. ಜಿಎಸ್‌ಟಿ ಅರ್-1 ಹಾಗೂ ಬಿ-3 ಇವುಗಳ ಲೆಕ್ಕದಲ್ಲಿ ಹೊಂದಾಣಿಕೆ ಇರಬೇಕು. ಜಿಎಸ್‌ಟಿ ಕಾಯ್ದೆಯಲ್ಲಿ ಸಾಕಷ್ಟು ಮಾರ್ಪಾಡು ಮಾಡಲಾಗುತ್ತಿದೆ. ಇದನ್ನು ಇನ್ನಷ್ಟು ಸರಳೀಕರಣಗೊಳಿಸಲಾಗುತ್ತಿದೆ. ಆದ್ದರಿಂದ ಜಿಎಸ್‌ಟಿ ಬಗೆಗಿನ ಅನುಮಾನಗಳನ್ನು ನಿವಾರಿಸುವಲ್ಲಿ ಲೆಕ್ಕಪರಿಶೋಧಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಜಿಎಸ್‌ಟಿ ಅನುಷ್ಠಾನಕ್ಕೆ ತಂದ ಸರಕಾರವೇ ಮತ್ತೆ ಅಧಿಕಾರ ಪಡೆದಿರುವುದರಿಂದ ಜಿಎಸ್‌ಟಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿರೀಕ್ಷೆಯಿದೆ. ಸರಕಾರ ಜನರ ಮೇಲೆ ವಿಶ್ವಾಸ ಇಟ್ಟಿದ್ದು, ಅವರು ನೀಡಿದ ಮಾಹಿತಿಯನ್ನು ಸಂಪೂರ್ಣವಾಗಿ ನಂಬುತ್ತದೆ. ಆದರೆ ತಪ್ಪು ಮಾಹಿತಿ ನೀಡಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದ ವ್ಯಾಪಾರಿಗಳ ಲಾಭದ ಪ್ರಮಾಣ ಕುಸಿಯಬಹುದಾಗಿದೆ ಎಂದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಶಾಖೆ ಚೇರ್ಮನ್ ಕೆ.ವಿ. ದೇಶಪಾಂಡೆ ಮಾತನಾಡಿ, ಜಿಎಸ್‌ಟಿ ಹಾಗೂ ಪರೋಕ್ಷ ತೆರಿಗೆ ಸಮಿತಿ ನೋಯ್ಡಾದಿಂದ ಅನುಮತಿ ಪಡೆದುಕೊಂಡು ಜಿಎಸ್‌ಟಿ ಸರ್ಟಿಫಿಕೇಟ್ ನೂತನ ಕೋರ್ಸ್ ಆರಂಭಿಸಲಾಗುತ್ತಿದೆ. 30 ಜನರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಸೌರಭ ಸಿಂಘಾಲ್, ಎಚ್.ಎನ್. ಆಡಿನವರ ಇದ್ದರು.