Advertisement

ಅನಧಿಕೃತ ಜಾಹೀರಾತು, ಫ್ಲೆಕ್ಸ್‌ ಅಳವಡಿಸಿದರೆ ಕಠಿಣ ಕ್ರಮ

03:17 PM Nov 30, 2022 | Team Udayavani |

ಮದ್ದೂರು: ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಅಳವಡಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವುದಾಗಿ ಮುಖ್ಯಾಧಿಕಾರಿ ಅಶೋಕ್‌ ತಿಳಿಸಿದರು. ಪಟ್ಟಣದ ಪುರಸಭೆ ಎಸ್‌.ಎಂ.ಕೃಷ್ಣ ಸಭಾಂಗ ಣದಲ್ಲಿ ನಡೆದ ಸುದ್ದಿಗೊಷ್ಠಿ ವೇಳೆ ಮಾತನಾಡಿದರು. 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುತ್ತಿದ್ದು ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿರುವುದಾಗಿ ತಿಳಿಸಿದರು.

Advertisement

ಕಾನೂನು ಕ್ರಮ: ಫ್ಲೆಕ್ಸ್‌ ಮತ್ತು ಬ್ಯಾನರ್‌ ಅಳವಡಿಸುವವರು ಇಲಾಖೆಯ ಅನುಮತಿ ಪಡೆದು ಮತ್ತು ಅಗತ್ಯ ದಾಖಲಾತಿಗಳನ್ನು ಕಚೇರಿಗೆ ತಲುಪಿಸುವ ಜತೆಗೆ ಶುಲ್ಕ ಪಾವತಿಸಿ ಅಳವಡಿಕೆಗೆ ಮುಂದಾಗ ಬೇಕು. ತಪ್ಪಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. 41 ಅಂಗಡಿ ಮಳಿಗೆಗಳ ಪೈಕಿ 76 ಲಕ್ಷರೂ., ಆಸ್ತಿ ತೆರಿಗೆಯಿಂದ 1.50 ಕೋಟಿ ರೂ., ಕುಡಿವ ನೀರು 2.15 ಕೋಟಿ, ಅಂಗಡಿ ಪರಾವನಗಿ 3.5 ಲಕ್ಷ, ಪುರಸಭೆಗೆ ಪಾವತಿ ಆಗಬೇಕಾಗಿದೆ ಎಂದು ವಿವರಿಸಿದರು.

ಪೂರ್ವಾನುಮತಿ ಅವಶ್ಯ: ಸರ್ಕಾರದ ಆದೇಶದಂತೆ ಬಾಕಿ ಹಣವನ್ನು ಕಡ್ಡಾಯವಾಗಿ ಪಾವತಿಸುವ ಜತೆಗೆ ಅವಧಿ ಮೀರಿದ ಪರವಾನಗಿದಾರರು ನವೀಕರಿಸುವಂತೆ ಮತ್ತು ನೂತನವಾಗಿ ಪ್ರಾರಂಭಿಸುವವರು ಇಲಾಖೆ ಪೂರ್ವಾನುಮತಿ ಪಡೆಯಬೇಕೆಂದರು.

ಬಾಕಿ ಉಳಿಸಿಕೊಂಡಿರುವ ಬಾಡಿಗೆದಾರರಿಗೆ ಹಲವಾರು ಬಾರಿ ನೋಟಿಸ್‌ ಜಾರಿ ಮಾಡಿ ತಿಳಿವಳಿಕೆ ಪತ್ರ ನೀಡಿದ್ದರೂ ಹಣ ಪಾವತಿಸದ ವ್ಯಕ್ತಿಗಳು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಕಡ್ಡಾಯವಾಗಿ ಮಾ.31ರೊಳಗೆ ಕಡ್ಡಾಯವಾಗಿ ಹಣ ಪಾವತಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದರು.

ಸಿಸಿ ಕ್ಯಾಮೆರಾ: ಪುರಸಭೆ ಅಧ್ಯಕ್ಷ ಸುರೇಶ್‌ಕುಮಾರ್‌ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ವ್ಯಕ್ತಿಗಳಿಗೆ 3 ಸಾವಿರವರೆಗೆ ದಂಡ ವಿಧಿಸುವ ಜತೆಗೆ ಕಸ ಎಸೆಯುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಅಗತ್ಯವಿರುವೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಬೈಲಾ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ 7,400 ಮನೆಗೆ ತಲಾ 2 ಡೆಸ್ಟ್‌ ಬಿನ್‌ ವಿತರಿಸಿದ್ದು ಮನೆಗಳಲ್ಲಿ ಹಸಿ ಮತ್ತು ಒಣ ಕಸ ವಿಂಗಡಣೆ ಕಡ್ಡಾಯ. ಹಸಿರು ಬಕೆಟ್‌ನಲ್ಲಿ ಹಸಿ ಕಸ, ನೀಲಿ ಬಕೆಟ್‌ನಲ್ಲಿ ಒಣ ಕಸ ವಿಂಗಡಿಸಿ ಪುರಸಭೆ ವಾಹನಕ್ಕೆ ಸ್ಥಳೀಯ ನಿವಾಸಿಗಳು ನೀಡಬೇಕೆಂದರು. ಈಗಾಗಲೇ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಹಲವಾರು ಬಾರಿ ಧ್ವನಿ ವರ್ಧಕ, ನೋಟಿಸ್‌ ಮೂಲಕ ಜಾರಿಗೊಳಿಸಿದ್ದು ಅಗತ್ಯ ಕ್ರಮವಹಿಸದೆ ನಿರ್ಲಕ್ಷ್ಯಧೋರಣೆ ಅನುಸರಿಸಿ ಸ್ವಚ್ಛತೆ ಮತ್ತು ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ 10 ಸಾವಿರದವರೆಗೆ ದಂಡ ವಿಧಿಸಿ ಪ್ರಕರಣ ದಾಖಲು ಮಾಡುವುದಾಗಿ ಹೇಳಿದರು.

ಅಂಗಡಿ ಮಳಿಗೆಗಳಿಗೆ ಉತ್ತಮವಾಗಿ ಸೌಲಭ್ಯ ಕಲ್ಪಿಸುತ್ತಿದ್ದರೂ ಹಲವಾರು ಮಂದಿ ಉದ್ದಿಮೆ ಪರವಾನಗಿ ಪಡೆಯದೆ ವಿಳಂಬಧೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಅಂಗಡಿಯವರು ಮತ್ತು ಉದ್ದಿಮೆದಾರರು ಪರವಾನಗಿ ಪಡೆಯುವುದು ಕಡ್ಡಾಯ ಎಂದರು.

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಇಲಾಖೆ ಮತ್ತು ಆಡಳಿತ ಮಂಡಳಿ ಹಲವಾರು ಯೋಜನೆ ಕೈಗೊಂಡಿದ್ದು ಸುಂದರ ಪಟ್ಟಣವನ್ನಾಗಿಸಲು ಸ್ಥಳೀಯರು ಇಲಾಖೆ ನಿಯಮಗಳನ್ನು ತಪ್ಪದೇ ಪಾಲಿಸುವ ಮೂಲಕ ಸಿಬ್ಬಂದಿಯೊಟ್ಟಿಗೆ ಕೈಜೋಡಿಸಬೇಕೆಂದರು. ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್‌.ಪ್ರಸನ್ನಕುಮಾರ್‌, ಸದಸ್ಯ ಮ.ನ.ಪ್ರಸನ್ನಕುಮಾರ್‌, ಪರಿಸರ ಅಭಿಯಂತರ ನಾಗೇಂದ್ರ ಗಾಂವ್ಕರ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next