Advertisement

“ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಕಂಡುಬಂದರೆ ಕಠಿನ ಕ್ರಮ’

08:42 PM Sep 27, 2019 | mahesh |

ಬೆಳ್ತಂಗಡಿ: ಸರಕಾರದ ನಿರ್ದೇಶನದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ 11 ವಾರ್ಡ್‌ಗಳಲ್ಲೂ ಅ. 2ರಂದು ಪ್ಲಾಸ್ಟಿಕ್‌ ವಸ್ತುಗಳ ಸಂಗ್ರಹ ಅಭಿಯಾನ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಪಟ್ಟಣ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಕಂಡುಬಂದರೆ ಅಂತವರ ವಿರುದ್ಧ ದಂಡದ ಜತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳ್ತಂಗಡಿ ಪ.ಪಂ.ಮುಖ್ಯಾಧಿಕಾರಿ ಎಂ.ಎಚ್‌. ಸುಧಾಕರ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ಪಟ್ಟಣ ಪಂಚಾಯತ್‌ ಕಚೇರಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ನಿಷೇಧಿತ ಪ್ಲಾಸ್ಟಿಕ್‌ಗಳ ಬಳಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಸರಕಾರವು ಕಡ್ಡಾಯ ಕಾರ್ಯಕ್ರಮವನ್ನು ಅನುಷ್ಠಾನಿ ಸಿದ್ದು, ಅ. 2ರಂದು ಶ್ರಮದಾನ ಮೂಲಕ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಲಿದ್ದು, ಬೆಳ್ತಂಗಡಿಯಲ್ಲಿ 250ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಈ ರೀತಿ ಸಂಗ್ರಹ ಗೊಂಡ ಪ್ಲಾಸ್ಟಿಕ್‌ಗಳನ್ನು ಕೊಯ್ಯೂರು ಗ್ರಾಮದ ಕುಂಟಾಲಪಲ್ಕೆಯಲ್ಲಿ ಶೇಖರಿಸಿ ಅ. 8ರಿಂದ 10ರ ವರೆಗೆ ಶ್ರಮದಾನದ ಮೂಲಕ ವಿಂಗಡಣೆಯ ಕಾರ್ಯ ನಡೆಯಲಿದೆ. ಮುಂದೆ ಅವುಗಳಲ್ಲಿ ಪುನರ್‌ ಬಳಕೆಯ ಪ್ಲಾಸ್ಟಿಕ್‌ಗಳಿದ್ದರೆ ಸಿಮೆಂಟ್‌ ಫ್ಯಾಕ್ಟರಿಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ಮುದ್ರಿಸಲಾಗಿದ್ದು, ಬಟ್ಟೆಯ ಫ್ಲೆಕ್ಸ್‌ಗಳ ಮಾದರಿಗಳನ್ನೂ ಪರಿಚಯಿಸಲಾಗುತ್ತದೆ. ಜತೆಗೆ ಪ್ರತಿಯೊಬ್ಬರು ಅಗತ್ಯ ವಸ್ತುಗಳನ್ನು ತರುವುದಕ್ಕೆ ಬಟ್ಟೆ ಚೀಲಗಳನ್ನೇ ಉಪಯೋಗಿಸುವ ಕುರಿತು
ಜಾಗೃತಿ ಮೂಡಿಸಲಾಗುತ್ತದೆ ಎಂದು ಮುಖ್ಯಾಧಿಕಾರಿಯವರು ವಿವರಿಸಿದರು.

ಪ್ಲಾಸ್ಟಿಕ್‌ ಕಂಡುಬಂದರೆ ದಾಳಿ
ಅಭಿಯಾನದ ಬಳಿಕ ಪ್ಲಾಸ್ಟಿಕ್‌ ನಿಷೇಧದ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳ್ಳಲಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಕಂಡುಬಂದರೆ ಅಂತಹ ಸ್ಥಳಗಳಿಗೆ ದಾಳಿ ಮಾಡಿ ಪ್ರಾರಂಭಿಕ ಹಂತದಲ್ಲಿ 250 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ. ಮತ್ತೆ ಅದೇ ರೀತಿ ಪ್ಲಾಸ್ಟಿಕ್‌ ಬಳಸಿದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವ ಕಾರ್ಯ ಮಾಡಲಾಗುತ್ತದೆ.

ಮುಂದಿನ ದಿಗಳಲ್ಲಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳಿಗೆ ಅವಕಾಶವಿರುವುದಿಲ್ಲ. ಪ್ಲಾಸ್ಟಿಕ್‌ ಲೋಟ, ತಟ್ಟೆ, ಇನ್ನಿತರ ನಿಷೇಧಿತ ವಸ್ತುಗಳ ಬಳಕೆಗೆ ಕಡಿವಾಣ ಹಾಕಲಾಗುತ್ತದೆ. ಜತೆಗೆ ಧಾರ್ಮಿಕ, ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಪ್ಲಾಸ್ಟಿಕ್‌ ನಿಷೇಧದ ಜಾಗೃತಿ ಕಾರ್ಯ ನಡೆಯಲಿದೆ ಎಂದು ಎಂ.ಎಚ್‌. ಸುಧಾಕರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next