ಉಡುಪಿ: ಸಮುದ್ರದಲ್ಲಿ ನಿಷೇಧಿತ ಮೀನುಗಾರಿಕೆಯ ಬಗ್ಗೆ ಮೇಲಿಂದ ಮೇಲೆ ದೂರುಗಳು ಬರುತ್ತಿದ್ದು, ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರ ಅನ್ವಯ ಎಲ್ಲ ಅವೈಜ್ಞಾನಿಕ ಮತ್ತು ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ರಾಜ್ಯ ಸರಕಾರವು ಸಮುದ್ರದಲ್ಲಿ ಕೆಲವೊಂದು ತರಹದ ಹಾನಿಕಾರಕ ಮೀನುಗಾರಿಕಾ ಪದ್ಧತಿಗಳನ್ನು ನಿಷೇಧಿಸಿದೆಯಾದರೂ ದೂರುಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖಾಧಿಕಾರಿಗಳು ಮತ್ತು ಮೀನುಗಾರಿಕೆ ಸಂಘ-ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆದಿದ್ದು, ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಟ್ರಾಲ್ ಬೋಟ್‌ಗಳಲ್ಲಿ ಕಡ್ಡಾಯ 35 ಎಂ.ಎಂ. ಸ್ಕ್ವೇರ್ ಮೆಶ್ ಕಾಡ್ ಎಂಡ್ ಬಳಕೆ, ಪರ್ಸಿನ್ ಮತ್ತು ಸಾಂಪ್ರದಾಯಿಕ ದೋಣಿಗಳಲ್ಲಿ 20 ಎಂ.ಎಂ.ಗಿಂತ ದೊಡ್ಡ ಕಣ್ಣಿನ ಬಲೆಯ ಬಳಕೆ, ಬುಲ್ ಟ್ರಾಲ್, ಬೆಳಕು ಮೀನುಗಾರಿಕೆ, ಅಸಾಂಪ್ರದಾಯಿಕ ಪಚ್ಚೆಲೆ ಮೀನುಗಾರಿಕೆ ಇತ್ಯಾದಿ ಎಲ್ಲ ಅವೈಜ್ಞಾನಿಕ ಮತ್ತು ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ನಿಲ್ಲಿಸುವಂತೆ ಆದೇಶ ನೀಡಿರುತ್ತಾರೆ.
ಯಾವುದೇ ನಿಷೇಧಿತ ಮೀನುಗಾರಿಕೆ ನಡೆಸುತ್ತಿರುವುದು ಕಂಡುಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ಅಂತಹ ಬೋಟುಗಳ ಮೇಲೆ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರ ಅನ್ವಯ ಕ್ರಮ ಜರಗಿಸಲಾಗುವುದು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.