ಶಿರಸಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ವಿಧಾನ ಸಭಾ ಕಾರ್ಯಕಲಾಪಗಳಲ್ಲಿ ಚರ್ಚೆಗೆ ಅವಕಾಶ ಇದೆ. ಆದರೆ, ಕಲಾಪಗಳಿಗೆ ಸದಸ್ಯರು ಅಡ್ಡಿಪಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿದರು.
ಅವರು ಶುಕ್ರವಾರ ಇಲ್ಲಿನ ನಗರಸಭೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಮತದಾನ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಗಾವಿಯಲ್ಲಿ ನಡೆಯುವ ಅಧಿವೇಶದಲ್ಲಿ ಸದನದ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದರೆ ಕಠಿಣ ನಿಲುವು ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ. ಮಾತನಾಡಲು ಕೊಟ್ಟ ಅವಕಾಶವನ್ನೇ ದುರುಪಯೋಗ ಪಡಿಸಿಕೊಂಡು ಸದನಕ್ಕೆ ಅಡ್ಡಿಪಡಿಸಿದರೆ ಕಠಿಣಕ್ರಮ ಜರುಗಿಸಲಾಗುವುದು ಎಂದರು.
ಸದಸ್ಯರು ತಮ್ಮ ಯಾವುದೇ ಭಿನ್ನಾಭಿಪ್ರಾಯ ಹಾಗೂ ಬೇಧಭಾವ ಇದ್ದರೂ ತಮ್ಮ ಸಮಸ್ಯೆಯನ್ನು ಸದನದ ಗಮನಕ್ಕೆ ತರುವುದು ಹಾಗೂ ಸರಕಾರಕ್ಕೆ ಅದನ್ನು ತಿಳಿಸುವ ಪ್ರಯತ್ನ ಮಾಡಬೇಕೆ ವಿನಃ ಸದನ ಕಾರ್ಯಕಲಾಪಗಳಿಗೆ ಅಡ್ಡಿಪರಿಸುವಂತೆ ಆಗಬಾರದು. ಈ ಹಿನ್ನೆಲೆಯಲ್ಲಿ ಕಠಿಣ ನಿಲುವುಗಳನ್ನು ಸಭಾಧ್ಯಕ್ಷರಾಗಿ ತೆಗೆದುಕೊಳ್ಳಬೇಕು ಎನ್ನುವುದನ್ನು ದೆಹಲಿಯಲ್ಲಿ ನಡೆದ ಸ್ಪೀಕರ್‌ಗಳ ಸಮಾವೇಶದಲ್ಲಿ ಸ್ಪಷ್ಟ ಸಂದೇಶ ನೀಡಲಾಗಿದೆ ಎಂದರು.
ಬೆಳಗಾವಿ ಅಧಿವೇಶನ ನಡೆಸಲು ಎಲ್ಲ ರೀತಿಯ ಸಕಲ ಸಿದ್ದತೆ ನಡೆದಿದ್ದು, ವಿಧಾನ ಸಭೆ ನಮ್ಮ ಸಚಿವಾಲಯ, ಜಿಲ್ಲಾಡಳಿತ, ಸರಕಾರ, ಎಲ್ಲರೂ ಜೊತೆ ಸೇರಿ ಬೆಳಗಾವಿ ಅಧಿವೇಶನ ನಡೆಸಲು ಸಕಲ ಸೌಲಭ್ಯ ಮಾಡಿಕೊಳ್ಳಲಾಗಿದೆ. ಸದನದ ಕಲಾಪ ನಡೆಸಲು ಈಗಾಗಲೇ ಕಲಾಪಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಲಾಪಗಳು ಹೇಗೆ ನಡೆಯುತ್ತವೆಯೋ ಹಾಗೆಯೇ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯಲಿದೆ ಎಂದರು.
ಕಾರ್ಯಕಲಾಪಗಳ ಸಲಹಾ ಸಮಿತಿಯ ಕಾರ್ಯಕ್ರಮ ಡಿ.13 ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಗ್ಗೆ 10.30 ರಿಂದ ನಡೆಯಲಿದೆ. 11 ಗಂಟೆಯಿಂದ ಕಲಾಪಗಳು ಆರಂಭವಾಗಲಿದೆ. ಸದನ ನಡೆಯುವ ಸಂದರ್ಭದಲ್ಲಿ ಯಾವುದೇ ಕುಂದುಕೊರತೆ ಆಗದಂತೆ ಕ್ರಮ ವಹಿಸಲಾಗಿದೆ. ಮೂರು ವರ್ಷಗಳ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಸವಾಲುಗಳೂ ಸಾಕಷ್ಟು ಇವೆ. ಕೊರೊನಾ ಸಮಸ್ಯೆ, ಅತಿವೃಷ್ಟಿಯ ಹಾನಿಯ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಎಲ್ಲವನ್ನೂ ಸರಿಪಡಿಸಿ ಉತ್ತಮವಾಗಿ ಅಧಿವೇಶನ ನಡೆಯಲಿದೆ ಎಂದರು.
ವಿಧಾನ ಸಭೆಗೆ ಆಯ್ಕೆ ಆಗುವ ಸದಸ್ಯರು ಮೇಲ್ಮನೆಯ ಘನತೆ ಎತ್ತಿ ಹಿಡಿಯಬೇಕು. ಈಗ ಆಯ್ಕೆ ಆದ ವಿಧಾನದ ಬಗ್ಗೂ ಆತ್ಮಾವಲೋಕನ ಮಾಡಿಕೊಂಡು ಪ್ರಜಾಪ್ರಭುತ್ವದ ಮಹತ್ವ ಎತ್ತಿ ಹಿಡಿಯಬೇಕು ಎಂದರು.