Advertisement

ಅಶಾಂತಿಯುಂಟು ಮಾಡಿದ್ರೆ ಕಠಿಣ ಕ್ರಮ

09:45 PM Aug 23, 2019 | Lakshmi GovindaRaj |

ಕೊಳ್ಳೇಗಾಲ: ಹಬ್ಬ ಹರಿದಿನಗಳಲ್ಲಿ ಸಮಾಜಘಾತಕರು ಅಹಿತಕರ ಘಟನೆಗಳನ್ನು ನಡೆಸಿ ಅಶಾಂತಿ ಉಂಟು ಮಾಡುವವರನ್ನು ತಡೆಯಲು ಪೊಲೀಸ್‌ ಇಲಾಖೆ ಸದಾ ನಿಗಾವಹಿಸುತ್ತದೆ ಎಂದು ಡಿವೈಎಸ್ಪಿ ನವೀನ್‌ಕುಮಾರ್‌ ಹೇಳಿದರು.

Advertisement

ಪಟ್ಟಣ ಪೊಲೀಸ್‌ ಠಾಣೆಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗೌರಿಗಣೇಶ ಹಬ್ಬದ ಪ್ರಯುಕ್ತ ಎಲ್ಲಾ ಕೋಮಿನ ಸಮಾಜದವರು ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಣೆ ಮಾಡುವಂತೆ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಪೊಲೀಸರೊಂದಿಗೆ ಸಹಕರಿಸಿ: ಗೌರಿ-ಗಣೇಶ ವಿಗ್ರಹಗಳನ್ನು ಕೂರಿಸುವ ನೆಪದಲ್ಲಿ ಅಹಿತಕರ ಘಟನೆಗೆ ಅವಕಾಶ ಕಲ್ಪಿಸದಂತೆ ಸ್ಥಳೀಯ ಮುಖಂಡರು ಪೊಲೀಸರೊಂದಿಗೆ ಸಹಕರಿಸಬೇಕು. ಹಬ್ಬ ಆಚರಣೆಯ ಸಂದರ್ಭದಲ್ಲಿ ಪೊಲೀಸ್‌ ಸದಾ ಕಾವಲು ಇರುತ್ತದೆ ಎಂದರು.

ಡಿಜೆ ಅಳವಡಿಸದಂತೆ ಸೂಚನೆ: ಹಬ್ಬದ ದಿನದಂದು ಅತಿಯಾದ ಸೌಂಡ್ಸ್‌ ಬರುವ ಮ್ಯೂಸಿಕ್‌ ಬಾಕ್ಸ್‌ (ಡಿಜೆ)ಗಳನ್ನು ಅಳವಡಿಸಬಾರದು. ಒಂದು ವೇಳೆ ಅಳವಡಿಸಿದ ಪಕ್ಷದಲ್ಲಿ ಅದರ ಶಬ್ದ ಕಡಿಮೆ ನೀಡಿ ಸ್ಥಳೀಯ ವೃದ್ಧರಿಗೆ ಮತ್ತು ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ತರಹದ ಆಡಚಣೆಯಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಕಾನೂನು ಪಾಲನೆ ಮಾಡಿ: ಪೊಲೀಸ್‌ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅನೇಕ ಕಾನೂನುಗಳನ್ನು ರೂಪಿಸಿದ್ದು, ಪ್ರತಿಯೊಬ್ಬರು ಕಾನೂನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಅಂತಹವರ ಮೇಲೆ ಶಿಸ್ತು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

Advertisement

ಉತ್ತಮ ರೀತಿ ಹಬ್ಬ ಆಚರಿಸಿ: ಈ ಬಾರಿಯ ಗೌರಿ ಗಣೇಶ ಹಬ್ಬದ ದಿನದಂದು ವಿಗ್ರಹಗಳನ್ನು ಕೂರಿಸುವವರಿಗೆ ಸೆಸ್ಕ್ ಮತ್ತು ಅಗ್ನಿಶಾಮಕ ಹಾಗೂ ಪೊಲೀಸರ ಅನುಮತಿಯನ್ನು ಒಂದೇ ದಿನದಲ್ಲಿ ಕೊಡಿಸಿಕೊಡಲಾಗುವುದು. ಪ್ರತಿಯೊಬ್ಬರು ಕಡ್ಡಾಯವಾಗಿ ನೋಂದಣಿ ಪಡೆದುಕೊಂಡು ಉತ್ತಮ ರೀತಿಯಲ್ಲಿ ಹಬ್ಬವನ್ನು ಆಚರಣೆ ಮಾಡುವ ಮೂಲಕ ಪೊಲೀಸ್‌ ಇಲಾಖೆಗೆ ಕೀರ್ತಿ ತಂದುಕೊಡಬೇಕೆಂದು ಮನವಿ ಮಾಡಿದರು.

ಶಾಂತಿಯುತ ಹಬ್ಬ ಆಚರಣೆಗೆ ಸೂಚನೆ: ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌ ಮಾತನಾಡಿ, ಈಗಾಗಲೇ ವಿವಿಧ ಸಮಾಜದ ಮುಖಂಡರು ಮತ್ತು ಪ್ರಗತಿಪರ ಸಂಘಟನೆಯ ಮುಖಂಡರು ಹಲವು ಸಲಹೆಗಳನ್ನು ನೀಡಿದ್ದು, ಎಲ್ಲಾ ಸಲಹೆಗಳನ್ನು ಸ್ವೀಕರಿಸಿ ಶಾಂತಿಯುತ ಹಬ್ಬ ಆಚರಣೆಗೆ ಎಲ್ಲಾ ಸಿದ್ಧತೆಗಳನ್ನು ಪೊಲೀಸ್‌ ಇಲಾಖೆ ಮಾಡಲಿದೆ ಎಂದರು.

11 ದಿನ ಮಾತ್ರ ಅವಕಾಶ: ವಿಗ್ರಹಗಳನ್ನು ಕೂರಿಸಲು 11 ದಿನ ಮಾತ್ರ ಅವಕಾಶವಿದ್ದು, ಅದರ ಮೇಲ್ಪಟ್ಟು ವಿಗ್ರಹಗಳನ್ನು ಕೂರಿಸಲು ಅವಕಾಶ ಇರುವುದಿಲ್ಲ ಎಂದು ಮುಖಂಡರಲ್ಲಿ ಮನವಿ ಮಾಡಿದ ಅವರು, ನೆರೆ ಹಾವಳಿಯಿಂದ ಜನರು ನೋಂದಿದ್ದು, ಸರಳವಾಗಿ ಹಬ್ಬವನ್ನು ಶಾಂತಿ ಭಂಗ ಉಂಟಾಗದಂತೆ ಆಚರಿಸಬೇಕು ಎಂದು ತಿಳಿಸಿದರು.

ನಗರ ಸಭೆ ಅನುಮತಿ ಕಡ್ಡಾಯ: ಹಿಂದುಗಳ ಹಬ್ಬ ಆಚರಣೆಯ ಸಂದರ್ಭದಲ್ಲಿ ಎಲ್ಲಾ ಸಮುದಾಯ ಸಂಭ್ರಮದಿಂದ ಆಚರಣೆ ಮಾಡಬೇಕು. ತಾಲೂಕಿನ ಗ್ರಾಮೀಣ ಪ್ರದೇಶದ ಮುಖಂಡರು ಸಂಬಂಧಿಸಿದ ಗ್ರಾಮ ಪಂಚಾಯಿತಿಯಲ್ಲಿ ಮತ್ತು ನಗರ ಪ್ರದೇಶದಲ್ಲಿ ಕೂರಿಸುವವರು ನಗರಸಭೆಯಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮತ್ತು ಅಕ್ರಮ ವಿದ್ಯುತ್‌ ಸಂಪರ್ಕ ಅಳವಡಿಸಿಕೊಳ್ಳಬಾರದು. ದೊಡ್ಡ ಗಣಪತಿಗಳನ್ನು ಕೂರಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಸೂಚನೆ ನೀಡಿದರು.

ವಿಗ್ರಹಗಳನ್ನು ಕೂರಿಸುವ ಸ್ಥಳಗಳಲ್ಲಿ ಸಂಬಂಧಿಸಿದ ಪೊಲೀಸ್‌, ಅಗ್ನಿಶಾಮಕ ಠಾಣೆ, ನಗರಸಭೆ ಮತ್ತು ಸೆಸ್ಕ್ ಇಲಾಖೆಯ ಅಧಿಕಾರಿಗಳ ಮೊಬೈಲ್‌ ಸಂಖ್ಯೆಗಳನ್ನು ಮುದ್ರಣ ಮಾಡಿ ಅಳವಡಿಸಬೇಕು. ಯಾವುದೇ ಸ್ಥಳದಲ್ಲಿ ಯಾವುದೇ ಸಣ್ಣಪುಟ್ಟ ಘಟನೆಗಳು ಸಂಬಂಧಿಸಿದ ಪಕ್ಷದಲ್ಲಿ ಮೊಬೈಲ್‌ ಸಂಖ್ಯೆಗಳು ನೆರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣ ಠಾಣೆ ಎಸ್‌ಐ ರಾಜೇಂದ್ರ, ಸೆಸ್ಕ್ ಎಇಇ ಲಿಂಗರಾಜು, ನಗರಸಭೆಯ ಆರೋಗ್ಯಾಧಿಕಾರಿ ಭೂಮಿಕಾ, ಅಗ್ನಿಶಾಮಕ ಠಾಣೆಯ ಎಎಸ್‌ಐ ರಮೇಶ್‌, ನಗರಸಭಾ ಸದಸ್ಯರಾದ ಕವಿತಾ, ರಾಮಕೃಷ್ಣ, ಮಂಜುನಾಥ, ಜಯಮೇರಿ, ರಾಘವೇಂದ್ರ, ಸುರೇಶ್‌, ತಾಲೂಕು ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ನಟರಾಜಮಾಳಿಗೆ, ಹಣ್ಣು ಮತ್ತು ತರಕಾರಿ ಸಂಘದ ಅಧ್ಯಕ್ಷ ಸಮೀವುಲ್ಲಾ, ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಅನ್ವರ್‌ ಬಾಷಾ, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಬಸವರಾಜು, ಮುಖಂಡರಾದ ಚಿಕ್ಕಲಿಂಗಯ್ಯ, ಸೆಲ್ವರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next